Advertisement
ವಿನೋದ್ ಗಣಪತ್ ಕಾಂಬ್ಳಿ ಹುಟ್ಟಿದ್ದು ಜನವರಿ 18-1972ರಂದು. ಮಾಯಾ ನಗರಿ ಮುಂಬೈನ ಇಂದ್ರಾ ನಗರ್ ಎಂಬಲ್ಲಿನ ಗುಡಿಸಲು ಕಾಂಬ್ಳಿಯ ಜನ್ಮಸ್ಥಾನ. ತಂದೆ ಗಣಪತಿ ಒಬ್ಬ ಸಾಮಾನ್ಯ ಮೆಕ್ಯಾನಿಕ್. ಏಳು ಮಕ್ಕಳಲ್ಲಿ ಕೊನೆಯವನಾದ ವಿನೋದ್ ಕ್ರಿಕೆಟ್ ಪ್ರಾಕ್ಟೀಸ್ ಮಾಡಲು ಪ್ರತಿದಿನ ಮುಂಬೈನ ಲೋಕಲ್ ಟ್ರೈನ್ ನಲ್ಲಿ ಜನಜಂಗುಳಿಯ ನಡುವೆ ಪ್ರಯಾಣ ಮಾಡಬೇಕಿತ್ತು.
ಮುಂಬೈನ ಶಾರದಾಶ್ರಮ ಶಾಲೆಯ ಪರವಾಗಿ ಆಡುತ್ತಿದ್ದ ವಿನೋದ್ ಕಾಂಬ್ಳಿ ತನ್ನ ಶಾಲಾ ದಿನಗಳ ಗೆಳೆಯ ಸಚಿನ್ ತೆಂಡುಲ್ಕರ್ ಜೊತೆಗೂಡಿ ವಿಶ್ವ ದಾಖಲೆಯ ಜೊತೆಯಾಟವಾಡಿದರು. ಸಚಿನ್ ಮತ್ತು ಕಾಂಬ್ಳಿ ಇಬ್ಬರು ಜೊತೆಗೂಡಿ ಗಳಿಸಿದ್ದು ಬರೋಬ್ಬರಿ 664 ರನ್. ಇದರಲ್ಲಿ ಕಾಂಬ್ಳಿ ಪಾಲು 349 ರನ್. ಈ ಒಂದು ಇನ್ನಿಂಗ್ಸ್ ಕೋಚ್ ರಮಾಕಾಂತ್ ಅಚ್ರೇಕರ್ ಹುಡುಗರನ್ನು ವಿಶ್ವಮಟ್ಟಕ್ಕೆ ಪರಿಚಯಿಸಿತ್ತು.
Related Articles
Advertisement
1991ರ ಜನವರಿ 29ರಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕಾಂಬ್ಳಿ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲೇ ದ್ವಿಶತಕ ಬಾರಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 224 ರನ್ ಬಾರಿಸಿದ ಕಾಂಬ್ಳಿ, ಜಿಂಬಾಬ್ವೆ ವಿರುದ್ಧದ ಮುಂದಿನ ಪಂದ್ಯದಲ್ಲೇ 227 ರನ್ ಬಾರಿಸಿದ್ದರು. ಶ್ರೀಲಂಕಾ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ 125 ಮತ್ತು 120 ರನ್ ಹೊಡೆದು ವಿಶ್ವಕ್ರಿಕೆಟ್ ನಲ್ಲಿ ತನ್ನ ಆಗಮನವನ್ನು ಭರ್ಜರಿಯಾಗಿಯೇ ಸಾರಿದ್ದರು. ಸತತ ಮೂರು ಇನ್ನಿಂಗ್ಸ್ ನಲ್ಲಿ ಮೂರು ಶತಕ ಬಾರಿಸಿದ ಏಕೈಕ ಆಟಗಾರ ವಿನೋದ್ ಕಾಂಬ್ಳಿ. ತನ್ನ ಮೊದಲ ಎಂಟು ಟೆಸ್ಟ್ ಇನ್ನಿಂಗ್ಸ್ ನಲ್ಲಿ ಎರಡು ದ್ವಿಶತಕ, ಎರಡು ಶತಕ ಬಾರಿಸಿದ ಕಾಂಬ್ಳಿ ತನ್ನ ಕ್ರಿಕೆಟ್ ಜೀವನದಲ್ಲಿ ಆಡಿದ್ದು ಕೇವಲ 17 ಟೆಸ್ಟ್ ಅಂದರೆ ನಂಬಲೇ ಬೇಕು !
ಕೇವಲ 14 ಇನ್ನಿಂಗ್ಸ್ ಗಳಲ್ಲಿ 1000 ಟೆಸ್ಟ್ ರನ್ ಗಳಿಸಿದ ವಿನೋದ್ ಕಾಂಬ್ಳಿ, ಅತೀ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ ಭಾರತೀಯ ಎಂಬ ದಾಖಲೆ ಬರೆದಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದ ಕಾಂಬ್ಳಿ, ಎರಡನೇ ಇನ್ನಿಂಗ್ಸ್ ನಲ್ಲಿ ಮಾತ್ರ ರನ್ ಗಳಿಸಲು ಪರದಾಡುತ್ತಿದ್ದರು. ಇದಕ್ಕೆ ಸಾಕ್ಷಿ ಕಾಂಬ್ಳಿ ಮೊದಲ ಇನ್ನಿಂಗ್ಸ್ ಸರಾಸರಿ 69.17 ಮತ್ತು ಎರಡನೇ ಇನ್ನಿಂಗ್ಸ್ ಸರಾಸರಿ ಕೇವಲ 9.40 !
1991ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕಾಂಬ್ಳಿ, ಒಟ್ಟು 104 ಏಕದಿನ ಪಂದ್ಯವಾಡಿದ್ದರು. ಆದರೆ ಟೆಸ್ಟ್ ನಂತೆ ನಿಗದಿತ ಓವರ್ ಕ್ರಿಕೆಟ್ ನಲ್ಲಿ ಬ್ಯಾಟ್ ಬೀಸಲು ಕಾಂಬ್ಳಿಗೆ ಸಾಧ್ಯವಾಗಿರಲಿಲ್ಲ. 32.59ರ ಸರಾಸರಿಯಲ್ಲಿ 2477 ರನ್ ಗಳಿಸಿದ್ದ ಕಾಂಬ್ಳಿ ಸಿಡಿಸಿದ್ದು ಕೇವಲ ಎರಡು ಏಕದಿನ ಶತಕ. ಕಾಂಬ್ಳಿ ಗೆಳೆಯ ಸಚಿನ್ ಆಗಲೇ ಸಾಲು ಸಾಲು ಶತಕ ಬಾರಿಸಿ ವಿಶ್ವಕ್ರಿಕೆಟ್ ನ ಪ್ರಮುಖ ಆಟಗಾರನಾಗಿದ್ದರು.
ಕೈಕೊಟ್ಟ ಅದೃಷ್ಟ: ಕ್ರಿಕೆಟ್ ಬದುಕಿನ ಆರಂಭದಲ್ಲೇ ಸಾಲು ಸಾಲು ಶತಕ ಬಾರಿಸಿ ವಿಶ್ವ ಕ್ರಿಕೆಟ್ ನಲ್ಲಿ ಸದ್ದು ಮಾಡಿದ್ದ ವಿನೋದ್ ಬ್ಯಾಟ್ ನಂತರ ಯಾಕೋ ಮಂಕಾಯಿತು. 12 ಪಂದ್ಯಗಳಲ್ಲಿ ಒಂದು ಸಾವಿರ ರನ್ ಗಡಿ ದಾಟಿದ್ದ ಕಾಂಬ್ಳಿ 17 ಪಂದ್ಯಗಳಿಂದ ಗಳಿಸಿದ್ದು 1084 ರನ್ ಮಾತ್ರ. ಒಂದೆರಡು ಪಂದ್ಯಗಳ ವೈಫಲ್ಯ ಕಾಂಬ್ಳಿಯನ್ನು ತಂಡದಿಂದ ಹೊರಬೀಳುವಂತೆ ಮಾಡಿತು. ಇದೇ ಸಮಯದಲ್ಲಿ ತಂಡಕ್ಕೆ ಆಯ್ಕೆಯಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ತಮ್ಮ ಸ್ಥಾನ ಭದ್ರ ಪಡಿಸಿದ್ದರಿಂದ ಕಾಂಬ್ಳಿ ನಂತರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹೀಗೆ ಪ್ರತಿಭಾನ್ವಿತ ಆಟಗಾರನ ಟೆಸ್ಟ್ ಬದುಕು ಕೇವಲ 24ನೇ ವರ್ಷದಲ್ಲೇ ಅಂತ್ಯವಾಯಿತು.
2000ನೇ ಇಸವಿಯವರೆಗೂ ಭಾರತ ಏಕದಿನ ತಂಡದ ಸದಸ್ಯನಾಗಿದ್ದ ಕಾಂಬ್ಳಿ ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯವಾಡಿದ್ದರು. ಆದರೆ ಕಾಂಬ್ಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದು ಬರೋಬ್ಬರಿ 11 ವರ್ಷಗಳ ನಂತರ. ಅಂದರೆ 2011ರಲ್ಲಿ !
ಮೈದಾನದಲ್ಲಿ ಕಣ್ಣೀರು1996ರ ವಿಶ್ವಕಪ್ ಸೆಮಿ ಫೈನಲ್. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆತಿಥೇಯ ಭಾರತ ಮತ್ತು ಶ್ರೀಲಂಕಾ ನಡುವಿನ ಸೆಣಸಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ ಕೇವಲ120 ರನ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. ಕಾಂಬ್ಳಿ 10 ರನ್ ಗಳಿಸಿ ಆಡುತ್ತಿದ್ದರು. ಭಾರತ ಸೋಲುವ ಬೇಸರದಿಂದ ಅಭಿಮಾನಿಗಳು ಮೈದಾನಕ್ಕೆ ಬಾಟಲಿಗಳನ್ನು ಎಸೆದು ಮತ್ತು ಮೈದಾನಕ್ಕೆ ಇಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪಂದ್ಯಕ್ಕೆ ಅಡ್ಡಿಯಾದಾಗ ಮ್ಯಾಚ್ ರೆಫ್ರೀ ಶ್ರೀಲಂಕಾ ವಿಜಯಿ ಎಂದು ಘೋಷಿಸಿದರು. ಇದರಿಂದ ಬೇಸರಗೊಂಡ ಕಾಂಬ್ಳಿ ಕಣ್ಣೀರು ಹಾಕಿಕೊಂಡು ಮೈದಾನದಿಂದ ಹೊರಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ವೈವಾಹಿಕ ಬದುಕು: ಕ್ರಿಕೆಟ್ ಆಟದಂತೆ ಕಾಂಬ್ಳಿ ವೈವಾಹಿಕ ಜೀವನದಲ್ಲೂ ಏಳು ಬೀಳು ಕಂಡವರು. ಪುಣೆಯ ಬ್ಲೂ ಡೈಮಂಡ್ ಹೋಟೆಲ್ ಕೆಲಸ ಮಾಡುತ್ತಿದ್ದ ನಿಯೋಲಾ ಲೀವಿಸ್ ಅವರನ್ನು ಕಾಂಬ್ಳಿ 1998ರಲ್ಲಿ ಮದುವೆಯಾಗುತ್ತಾರೆ. ಇವರಿಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ನಿಯೋಲಾಗೆ ವಿಚ್ಛೇದನ ನೀಡಿ, ಫ್ಯಾಶನ್ ಮಾಡೆಲ್ ಆಗಿದ್ದ ಆಂಡ್ರಿಯಾ ಹೆವೈಟ್ ಅವರನ್ನು ವಿವಾಹವಾದರು. ನಂತರ ಕಾಂಬ್ಳಿ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಯಾಗುತ್ತಾರೆ.