ನವದೆಹಲಿ: ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಅಸಿಫ್ ಮೊಹಮ್ಮದ್ ಖಾನ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದು- ಡಿಕೆ ಮುಗಿಯದ ವೈಮನಸ್ಸು; ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿದ್ದು ಬಣಕ್ಕೆ ಕಾಡುತ್ತಿದೆ ಅಭದ್ರತೆ
ರಾಜ್ಯ ಚುನಾವಣಾ ಆಯೋಗದ ಅನುಮತಿ ಇಲ್ಲದೆ ಶಾಹೀನ್ ಬಾಗ್ ನಲ್ಲಿ ಸಭೆ ನಡೆಸಿರುವುದನ್ನು ಪ್ರಶ್ನಿಸಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಖಾನ್ ಅವಾಚ್ಯ ಶಬ್ದಗಳಿಂದ ಅವಮಾನಿಸಿರುವುದಾಗಿ ದೂರಲಾಗಿದೆ ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಮಾಜಿ ಶಾಸಕ ಅಸಿಫ್ ಖಾನ್ ತೈಯ್ಯಬ್ ಮಸೀದಿ ಮುಂಭಾಗದಲ್ಲಿ 20-30 ಜನರನ್ನು ಒಗ್ಗೂಡಿಸಿ ಸಭೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಅಸಿಫ್ ಖಾನ್ ಪುತ್ರ ಅರಿಬಾ ಖಾನ್ (ದೆಹಲಿ ಮಹಾನಗರ ಪಾಲಿಕೆ ಕಾಂಗ್ರೆಸ್ ಅಭ್ಯರ್ಥಿ) ತನ್ನ ಬೆಂಬಲಿಗರೊಂದಿಗೆ ಮೈಕ್ ಬಳಸಿ ಗಟ್ಟಿಯಾದ ಧ್ವನಿಯಲ್ಲಿ ಭಾಷಣ ಮಾಡುತ್ತಿದ್ದ ಎಂದು ದೆಹಲಿ ಪೊಲೀಸರು ಎಎನ್ ಐಗೆ ತಿಳಿಸಿದ್ದಾರೆ.
ವಿಷಯ ತಿಳಿದ ಸಬ್ ಇನ್ಸ್ ಪೆಕ್ಟರ್ ಅಕ್ಷಯ್ ಅವರು ಸ್ಥಳಕ್ಕೆ ಆಗಮಿಸಿ ಅನುಮತಿ ಪಡೆಯದೇ ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಅಸಿಫ್ ಖಾನ್ ಅಕ್ಷಯ್ ಜತೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿರುವುದಾಗಿ ಡೆಪ್ಯುಟಿ ಪೊಲೀಸ್ ಕಮಿಷನರ್ ಈಶಾ ಪಾಂಡೆ ತಿಳಿಸಿರುವುದಾಗಿ ವರದಿ ಹೇಳಿದೆ.