ಮುಂಬಯಿ: ಕಾಂಗ್ರೆಸ್‌ನಿಂದ ಈಗಾಗಲೇ ಒಂದು ಹೆಜ್ಜೆಯನ್ನು ಹೊರಗಿಟ್ಟಿರುವ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಬಿಜೆಪಿ ಪಾಳಯದಲ್ಲಿ ಇದೀಗ ಮತ್ತೆ ಅಪಸ್ವರ ಕೇಳಿಬರತೊಡಗಿವೆ.
ಕಳೆದ ಹಲವಾರು ತಿಂಗಳುಗಳಿಂದ ರಾಣೆ ಬಿಜೆಪಿಗೆ ಸೇರ್ಪಡೆಯಾಗ ಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಸಕ್ರಿಯವಾಗಿ ಕೇಳಿಬಂದಿತ್ತಾದರೂ ಈ ಬಗ್ಗೆ ಬಿಜೆಪಿ ಯಲ್ಲಿ ಒಮ್ಮತಾಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ರಾಣೆ ಸೇರ್ಪಡೆ ವಿಳಂಬಗೊಳ್ಳುತ್ತಲೇ ಬಂದಿದೆ.
ಆದರೆ ಕಳೆದ ವಾರಾಂತ್ಯದಲ್ಲಿ ರಾಣೆ ಬಿಜೆಪಿ ಸೇರ್ಪಡೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ರಾವ್‌ಸಾಹೇಬ್ ದಾನ್ವೆ ನಾರಾಯಣ ರಾಣೆ ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿನ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡುದುದು ರಾಣೆ ಅವರ ಬಿಜೆಪಿ ಸೇರ್ಪಡೆ ಬಗೆಗಿನ ವದಂತಿಗಳಿಗೆ ಮತ್ತಷ್ಟು ಪುಷ್ಠಿಯನ್ನು ಒದಗಿಸಿತ್ತು.
ಆದರೆ ರವಿವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮಕ್ಷಮದಲ್ಲಿ ನಗರದಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ರಾಣೆ ಅವರ ಸೇರ್ಪಡೆ ಬಗೆಗೆ ಸೂತ್ರವೊಂದನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಒಂದು ಬಣ ಹೇಳಿದರೆ ಇನ್ನೊಂದು ಬಣ ಯಾವುದೇ ಸೂತ್ರ ಅಂತಿಮವಾಗಿಲ್ಲ ಎನ್ನುವ ಮೂಲಕ ನಾರಾಯಣ ರಾಣೆ ಅವರ ಸೇರ್ಪಡೆ ವಿಚಾರದಲ್ಲಿ ಪಕ್ಷದಲ್ಲಿ ಒಡಕು ಮೂಡಿರುವುದನ್ನು ಬಯಲುಗೊಳಿಸಿದೆ.
ಪಕ್ಷದ ಒಂದು ಬಣದ ಪ್ರಕಾರ ರವಿವಾರ ನಡೆದ ಸಭೆಯಲ್ಲಿ ನಾರಾಯಣ ರಾಣೆ ಅವರಿಗೆ ರಾಜ್ಯಸಭೆ ಸದಸ್ಯ ಸ್ಥಾನ, ಕಿರಿಯ ಪುತ್ರ ನಿತೇಶ್ ರಾಣೆ ಅವರಿಗೆ ರಾಜ್ಯ ಸರಕಾರದಲ್ಲಿ ಸಹಾಯಕ ಸಚಿವನ ಸ್ಥಾನ ಮತ್ತು ಹಿರಿಯ ಪುತ್ರ ನೀಲೇಶ್ ರಾಣೆ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡುವ ಕೊಡುಗೆಯನ್ನು ಬಿಜೆಪಿ ರಾಣೆ ಅವರ ಮುಂದಿಟ್ಟಿದ್ದು ನಾರಾಯಣ ರಾಣೆ ಅವರು ಈ ಸೂತ್ರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಆದರೆ ಬಿಜೆಪಿಯ ಸಚಿವರೋರ್ವರು ಇಂತಹ ಸೂತ್ರವೊಂದು ಅಂತಿಮಗೊಂಡಿರುವುದನ್ನು ನಿರಾ ಕರಿಸಿದ್ದು ನಾರಾಯಣ ರಾಣೆ ಮತ್ತವರ ಈರ್ವರು ಪುತ್ರರಿಗೂ ಪಕ್ಷದಲ್ಲಿ ಹುದ್ದೆ ನೀಡುವ ಸಾಧ್ಯತೆಗಳಿಲ್ಲ ಎಂದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸದ್ಯ ಸಂಪುಟ ಪುನಾರಚನೆಯ ಯಾವುದೇ ಇರಾದೆಯನ್ನೂ ಹೊಂದಿಲ್ಲವಾಗಿದ್ದು ನಾರಾಯಣ ರಾಣೆ ಅವರನ್ನು 2019ರ ಚುನಾವಣೆಗೂ ಮುನ್ನ ಅಂದರೆ ಈ ವರ್ಷಾಂತ್ಯ ಅಥವಾ 2018ರ ಆರಂಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಚಿಂತನೆ ಅವರದಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ತಂತ್ರಗಾರಿಕೆ?
ಏತನ್ಮಧ್ಯೆ ನಾರಾಯಣ ರಾಣೆ ಅವರನ್ನು ಸೇರ್ಪಡೆಗೊಳಿಸುವ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲಗಳಿರುವಂತೆ ಉದ್ದೇಶಪೂರ್ವಕವಾಗಿಯೇ ನಾಟಕವಾಡಲಾಗುತ್ತಿದ್ದು ಈ ಮೂಲಕ ರಾಣೆ ಅವರ ಪಟ್ಟನ್ನು ಒಂದಿಷ್ಟು ಸಡಿಲಗೊಳಿಸುವ ತಂತ್ರ ಇದರ ಹಿಂದೆ ಅಡಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.