ರಾಮನಗರ: ಅನಿವಾರ್ಯ ಕಾರಣಗಳಿಂದಾಗಿ ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ಯಾವ ಕಾರಣಕ್ಕೂ ರಾಮನಗರವನ್ನು ಬಿಡುವ ಮಾತೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಡಾ| ಮಂಜುನಾಥ್ ನಾಮಪತ್ರ ಸಲ್ಲಿಕೆ ಬಳಿಕ ನಡೆದ ಮೈತ್ರಿ ಪಕ್ಷಗಳ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ನಾನು ಪಕ್ಕದ ಜಿಲ್ಲೆಯಿಂದ ಸ್ಪರ್ಧಿಸಿದ್ದೇನೆ ಎಂದರೆ ಅದು ಈ ಜಿಲ್ಲೆಯ ಜನತೆ ನೀಡಿರುವ ಶಕ್ತಿ. ಒಂದು ವರ್ಗದ ಬಗ್ಗೆ ನಾನು ಮಾತನಾಡುವುದೇ ಇಲ್ಲ. ಜಾತಿ ಹೆಸರಿನ ರಾಜಕೀಯ ನಾನು ಮಾಡಿಲ್ಲ. ನನ್ನ ಜೀವನ ಹಾಗೂ ಅಂತ್ಯ ಕೂಡ ಈ ಮಣ್ಣಿನಲ್ಲೇ ಆಗಲಿದೆ. ನಾನು ಎಲ್ಲೆ ಹೋದರೂ, ಕೊನೆಗೆ ಈ ಜಿಲ್ಲೆಗೆ ಮರಳುತ್ತೇನೆ ಎಂದು ಭಾವುಕರಾಗಿ ನುಡಿದರು.
ಹಕ್ಕನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ:
ನನ್ನ ಕೈಗೆ ಪೆನ್ನು ನೀಡಿ ಎಂದು ಕೇಳಿದ್ದ ಡಿಕೆಶಿ, ತಮ್ಮ ಕೈಗೆ ಸಿಕ್ಕ ಪೆನ್ನು, ಪೇಪರನ್ನು ತಮಿಳುನಾಡಿಗೆ ನೀರು ಬಿಡಲು ಬಳಸಿಕೊಂಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದಿದ್ದವರು, ಆ ಹಕ್ಕನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಸಿಕ್ಕಸಿಕ್ಕವರ ಮೇಲೆ ಪ್ರಕರಣ ದಾಖಲಿಸಿದ್ದು, ಎಲ್ಲದರಲ್ಲೂ ಭ್ರಷ್ಟಚಾರ ನಡೆಸಿದ್ದು, ಜೆಡಿಎಸ್ ಕಾರ್ಯಕರ್ತರಿಗೆ ಲಕ್ಷ ಲಕ್ಷ ಹಣ ನೀಡಿ ಖರೀದಿಸಿದ್ದೇ ಡಿಕೆ ಸಹೋದರರ ಸಾಧನೆ ಎಂದು ಲೇವಡಿ ಮಾಡಿದರು.