Advertisement

ಮಾಜಿ ಅಧ್ಯಕ್ಷನನ್ನು ಹೊರದಬ್ಬಿದರು! ಅಚ್ಚರಿಯ ಬೆಳವಣಿಗೆ-ವಿಡಿಯೋ ವೈರಲ್‌

06:58 PM Oct 22, 2022 | Team Udayavani |

ಬೀಜಿಂಗ್‌: 5 ವರ್ಷಗಳಿಗೊಮ್ಮೆ ನಡೆಯುವ ಚೀನ ಆಡಳಿತಾರೂಢ ಪಕ್ಷದ ಬಲಿಷ್ಠ ಸೆಂಟ್ರಲ್‌ ಕಮಿಟಿ ಸಮಾವೇಶ ಶನಿವಾರ ಮುಗಿದಿದ್ದು, ಕೊನೆಯ ದಿನ ನಡೆದ ಹೈಡ್ರಾಮಾ ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಇನ್ನೇನು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಷಣ ಆರಂಭಿಸಬೇಕು ಎನ್ನುವಷ್ಟರಲ್ಲಿ ಇಬ್ಬರು ಅಧಿಕಾರಿಗಳು ಬಂದು, ಜಿನ್‌ಪಿಂಗ್‌ ಪಕ್ಕದಲ್ಲೇ ಕುಳಿತಿದ್ದ ಚೀನದ ಮಾಜಿ ಅಧ್ಯಕ್ಷ ಹು ಜಿಂಟಾವೋ(79)ರನ್ನು ಹೊರಗೆ ಕಳುಹಿಸಿದ ಅಚ್ಚರಿಯ ಘಟನೆ ನಡೆದಿದೆ.

ಏಕಾಏಕಿ ಜಿಂಟಾವೋರನ್ನು ಸಭೆಯಿಂದ ಹೊರಹಾಕಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಅಲ್ಲದೇ, ಅವರ ಕುರಿತು ಚೀನದ ಜಾಲತಾಣಗಳಲ್ಲಿದ್ದ ಇತ್ತೀಚೆಗಿನ ಎಲ್ಲ ಉಲ್ಲೇಖಗಳನ್ನೂ ಅಳಿಸಿಹಾಕಲಾಗಿದೆ! ಈ ನಡೆ ಎಲ್ಲರನ್ನೂ ಸಂಶಯಕ್ಕೆ ನೂಕಿದೆ.

ಆರಂಭದಲ್ಲಿ ಜಿಂಟಾವೋ ಬಳಿಗೆ ಬಂದ ಅಧಿಕಾರಿಗಳು, ಎದ್ದೇಳುವಂತೆ ಸೂಚಿಸಿದ್ದಾರೆ. ಅವರು ಹಿಂದೇಟು ಹಾಕಿದಾಗ, ಅವರ ತೋಳುಗಳನ್ನು ಹಿಡಿದು ಮೇಲಕ್ಕೆತ್ತಿದ್ದಾರೆ. ಇದೇ ವೇಳೆ, ಅಲ್ಲೇ ಇದ್ದ ಕಾಗದಪತ್ರವನ್ನು ಎಳೆದುಕೊಳ್ಳಲು ಜಿಂಟಾವೋ ಯತ್ನಿಸಿದ್ದಾರೆ. ಕೂಡಲೇ ಜಿನ್‌ಪಿಂಗ್‌ ಅವರು ಆ ಪತ್ರಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕೊನೆಗೆ ಜಿಂಟಾವೋ ಎದ್ದು, ಹೋಗುವಾಗ ಪ್ರಧಾನಿ ಲಿ ಕೆಖೀಯಾಂಗ್‌ ಅವರ ಭುಜದ ಮೇಲೆ ತಟ್ಟಿ ಹೊರನಡೆದಿದ್ದಾರೆ. ವಾರದಿಂದಲೂ ಸಭಾಂಗಣದೊಳಕ್ಕೆ ಪತ್ರಕರ್ತರಿಗೆ ಪ್ರವೇಶವಿರಲಿಲ್ಲ. ಆದರೆ, ಶನಿವಾರ ಜಿನ್‌ಪಿಂಗ್‌ ಭಾಷಣಕ್ಕೆಂದು ಪತ್ರಕರ್ತರಿಗೆ ಒಳಗೆ ಬಿಡಲಾಗಿತ್ತು. ಅದೇ ಸಮಯದಲ್ಲಿ ಈ ಘಟನೆ ನಡೆದಿರುವ ಕಾರಣ, ಎಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.


3ನೇ ಅವಧಿಗೆ ಅಧ್ಯಕ್ಷರಾಗುವತ್ತ ಹೆಜ್ಜೆ
ಇದೇ ವೇಳ ಸತತ ಮೂರನೇ ಬಾರಿಗೆ ಕಮ್ಯೂನಿಸ್ಟ್‌ ರಾಷ್ಟ್ರದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವತ್ತ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೆಜ್ಜೆಯಿಟ್ಟಿದ್ದಾರೆ. ಸೆಂಟ್ರಲ್‌ ಕಮಿಟಿಯ ಮುಖ್ಯಸ್ಥರನ್ನಾಗಿ ಜಿನ್‌ಪಿಂಗ್‌ರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಸೆಂಟ್ರಲ್‌ ಕಮಿಟಿಯ ಮಹತ್ವದ ಸಭೆ ನಡೆಯಲಿದ್ದು, 25 ಸದಸ್ಯರ ಪೊಲಿಟಿಕಲ್‌ ಬ್ಯೂರೋವನ್ನು ಆಯ್ಕೆ ಮಾಡಲಾಗುತ್ತದೆ. ಈ ಬ್ಯೂರೋದ ಸದಸ್ಯರು 7 ಅಥವಾ ಅದಕ್ಕಿಂತ ಹೆಚ್ಚು ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಈ ಸ್ಥಾಯಿ ಸಮಿತಿಯೇ ದೇಶವನ್ನು ಆಳಲಿದೆ.

Advertisement

ಪಕ್ಷ ಹಾಗೂ ದೇಶವನ್ನು ಮುನ್ನಡೆಸುವ ನಾಯಕನನ್ನು ಅಂದರೆ ಪ್ರಧಾನ ಕಾರ್ಯದರ್ಶಿಯನ್ನು ಈ ಸ್ಥಾಯಿ ಸಮಿತಿಯ ಸದಸ್ಯರು ಆಯ್ಕೆ ಮಾಡುತ್ತಾರೆ. ಈಗ ಕೇಂದ್ರ ಸಮಿತಿಗೆ ಕ್ಸಿ ಜಿನ್‌ಪಿಂಗ್‌ ನೇಮಕವಾಗಿರುವ ಕಾರಣ, ಭಾನುವಾರದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರೇ ಆಯ್ಕೆಯಾಗುವುದು ಖಚಿತ ಎಂದು ಹೇಳಲಾಗಿದೆ.

ವಿಶೇಷವೆಂದರೆ, ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ 7 ಸದಸ್ಯರ ಪೈಕಿ, ದೇಶದ ನಂ.2 ಸ್ಥಾನದಲ್ಲಿರುವ ಪ್ರಧಾನಿ ಲಿ ಕೆಖೀಯಾಂಗ್‌ ಸೇರಿದಂತೆ ನಾಲ್ವರ ಹೆಸರನ್ನು ಕೈಬಿಡಲಾಗಿದೆ. ಶನಿವಾರ ಬಿಡುಗಡೆಯಾದ ಪಕ್ಷದ ಹೊಸ 205 ಸದಸ್ಯರ ಸೆಂಟ್ರಲ್‌ ಕಮಿಟಿ ಪಟ್ಟಿಯಲ್ಲಿ ಇವರ ಹೆಸರು ಇಲ್ಲ.

ಮಾವೋ ಹಾದಿಯಲ್ಲಿ…:
ಪ್ರಸಕ್ತ ವರ್ಷ 10 ವರ್ಷಗಳ ಆಡಳಿತಾವಧಿ ಪೂರ್ಣಗೊಳಿಸಲಿರುವ ಜಿನ್‌ಪಿಂಗ್‌, ಮರುಆಯ್ಕೆಯಾದರೆ ಮತ್ತೆ 5 ವರ್ಷಗಳ ಕಾಲ ಚೀನದ ಅಧ್ಯಕ್ಷರಾಗಿರುತ್ತಾರೆ. ಪಕ್ಷದ ಸ್ಥಾಪಕ ಮಾವೋ ಝೆಡಾಂಗ್‌ ಬಳಿಕ ಕಮ್ಯೂನಿಸ್ಟ್‌ ಪಕ್ಷದ ಇತಿಹಾಸದಲ್ಲೇ 2 ಅವಧಿಗಿಂತ ಹೆಚ್ಚು ಕಾಲ ಅಧ್ಯಕ್ಷ ಸ್ಥಾನದಲ್ಲಿ ವೀರಾಜಮಾನರಾದ ಖ್ಯಾತಿಯೂ ಜಿನ್‌ಪಿಂಗ್‌ಗೆ ದೊರೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next