ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರದಂದು ಪತ್ತೆಯಾದ ಅನುಮಾನಾಸ್ಪದವಾಗಿ ಪತ್ತೆಯಾದ ಅನಾಥ ಬ್ಯಾಗ್ ಒಳಗೆ ಇದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಇದ್ದಿದ್ದು ಬಾಂಬ್ ಅಲ್ಲ ಬದಲಾಗಿ ಪಟಾಕಿ ತಯಾರಿಸಲು ಬಳಸುವ ಪೌಡರ್ ಮತ್ತು ಕೆಲವು ವಯರ್ ಗಳಿದ್ದವು ಎಂದು ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ನಿನ್ನೆಯ ಘಟನೆಯ ಕುರಿತಾಗಿ ತಮ್ಮ ಸಂಶಯಗಳನ್ನು ಹೊರಹಾಕಿದರು. ಮಾತ್ರವಲ್ಲದೇ ಬ್ಯಾಗ್ ಪತ್ತೆಯಾದ ಕೂಡಲೇ ಹತ್ತು ಕೆ.ಜಿ. ಬಾಂಬ್ ಸಿಕ್ಕಿದೆ ಎಂದು ಮಂಗಳೂರು ಮತ್ತು ರಾಜ್ಯದ ಜನತೆಯಲ್ಲಿ ಭೀತಿ ಮೂಡಿಸುವ ಹಾಗೆ ವರದಿ ಮಾಡಿದ ಮಾಧ್ಯಮಗಳ ಮೇಲೆಯೂ ಕುಮಾರಸ್ವಾಮಿ ಅವರು ಗರಂ ಆದರು.
ಬ್ಯಾಗ್ ನಲ್ಲಿ ಇದ್ದಿದ್ದು ಪಟಾಕಿ ತಯಾರು ಮಾಡಲು ಬಳಸುವ ಪೌಡರ್ ಹಾಗೂ ವಯರ್ ಗಳು ಮಾತ್ರ. ಇನ್ನು ಅದಕ್ಕೆ ಟೈಮರ್ ಸಹ ಅಳವಡಿಸಿ ಇರಲಿಲ್ಲ. ಹಾಗಿದ್ದಾಗ ಅದೊಂದು ಸಜೀವ ಬಾಂಬ್ ಹೇಗಾಗುತ್ತದೆ ಎಂದು ಕುಮಾರಸ್ವಾಮಿ ಅವರು ತಮ್ಮ ಸಂದೇಹವನ್ನು ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ಪ್ರಮುಖ ಭಾಗಗಳಲ್ಲಿ ಈ ರೀತಿಯ ಅಣಕು ಕಾರ್ಯಾಚರಣೆಗಳನ್ನು ಮಾಡಲಾಗುತ್ತದೆ. ಹಾಗೆಯೇ ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೂ ಅದೇ ಕಾರ್ಯಾಚರಣೆಯ ಒಂದು ಭಾಗ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ನಿನ್ನೆಯ ಘಟನೆಯಲ್ಲಿ ಪೊಲೀಸರ ನಡವಳಿಕೆಯ ಬಗ್ಗೆಯೂ ಸಹ ಸಂಶಯ ಮೂಡುತ್ತಿದೆ. ಈ ಎಲ್ಲಾ ವಿಚಾರದಲ್ಲಿ ರಾಜ್ಯ ಸರಕಾರ ಆದಷ್ಟು ಶೀಘ್ರ ಸತ್ಯಸಂಗತಿಯನ್ನು ಜನರಿಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ದೇಶ ಕೇವಲ ಆರ್.ಎಸ್.ಎಸ್.ನವರಿಗೆ ಸೇರಿದ್ದಲ್ಲ ಮತ್ತು ಸಿ.ಎ.ಎ. ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಅಶಾಂತಿಯನ್ನು ಸೃಷ್ಟಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಜೀ ಮುಖ್ಯಮಂತ್ರಿ ಅವರು ಮಾಡಿದರು.