ಮಳವಳ್ಳಿ: ಹಿಂದೆ ಐದು ವರ್ಷ ಆಡಳಿತ ನಡೆಸಿ, ಬಹುಮತ ಕಳೆದುಕೊಂಡ ಕಾಂಗ್ರೆಸ್ ಇನ್ನೂ 50 ವರ್ಷ ಕಳೆದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಅನಂತ್‌ರಾಂ ವೃತ್ತದ ಬಳಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಪಕ್ಷದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರೊಬ್ಬರು, ಕಾಂಗ್ರೆಸ್‌ಗೆ ಬಹುಮತ ನೀಡಿ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಗೊತ್ತಿಲ್ಲ ಅನ್ನಿಸುತ್ತದೆ, ಹಿಂದೆ ಐದು ವರ್ಷ ಅಧಿಕಾರ ಮಾಡಿ, ಬಹುಮತದಿಂದ 78 ಸ್ಥಾನಕ್ಕಿಳಿದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 38ಕ್ಕೆ ಇಳಿಯಲಿದೆ. ನಮ್ಮ ಜೊತೆ ಸರ್ಕಾರ ರಚನೆ ಮಾಡಿ, ಕುತಂತ್ರದಿಂದ ಸರ್ಕಾರ ಪತನಗೊಳಿಸಿದವರು ಈಗ ಮುಸ್ಲಿಂ ಸಮುದಾಯದ ಮತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೆ ಅದರಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಹೇಳಿದರು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ: ಈ ಬಾರಿಯ ಚುನಾವಣೆಯು ಬಡವರ ಬದುಕಿಗೆ ಹೊಸ ಕಾಯಕಲ್ಪ ನೀಡುವ ಚುನಾವಣೆಯಾಗಿದೆ. ಹೀಗಾಗಿ ಪಂಚರತ್ನ ಯಾತ್ರೆ ಮೂಲಕ ಪ್ರವಾಸ ಮಾಡಿ ಜನರ ಮನ ಗೆದ್ದಿರುವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡವರ ಬದುಕು ಇದುವರೆಗೂ ಸುಧಾರಣೆ ಕಂಡಿಲ್ಲ. ಮುಂದಿನ ಜೆಡಿಎಸ್ ಸರ್ಕಾರದಲ್ಲಿ ರೈತರು, ಬಡವರು, ನಿರುದ್ಯೋಗಿಗಳ ಸಮಸ್ಯೆ ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನನಗೆ ಶಕ್ತಿ ತುಂಬಿ: ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಬಹುಮತದ ಜೆಡಿಎಸ್ ಸರ್ಕಾರ ರಚನೆ ಆಗಬೇಕು. ಹೀಗಾಗಿ ಜೆಡಿಎಸ್ ಗೆಲ್ಲಿಸಿ ನನಗೆ ಶಕ್ತಿ ತುಂಬಬೇಕು. ಯಾವುದೇ ಸಮಾಜಗಳಿಗೆ ಗೌರವ ನೀಡದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ, ಮನೆಗೆ ಕಳಿಸುವ ತೀರ್ಮಾನ ಮಾಡಿ. ಇದು ಅವರ ಕೊನೆಯ ಚುನಾವಣೆ ಆಗಬೇಕು. ನಿಮ್ಮ ಅಭ್ಯರ್ಥಿ ಕುಮಾರಣ್ಣ ಎಂದು ಅಂತಾ ಭಾವಿಸಿ ಜೆಡಿಎಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕುರುಬ ಸಮುದಾಯದ ಮುಖಂಡರು ಬಂಡೂರು ಕುರಿ ಮರಿಯೊಂದನ್ನು ನೀಡಿದರು. ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಜಯರಾಮು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಪುರಸಭೆ ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್, ಮುಖಂಡರಾದ ರಾಜು, ನಂಜುಂಡಯ್ಯ ಮುಂತಾದವರು ಉಪಸ್ಥಿತರಿದ್ದರು.