Advertisement

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ರೈತರಿಗೆ ಮಾರಕ: ಸಿದ್ದರಾಮಯ್ಯ

08:44 AM May 14, 2020 | Hari Prasad |

ಬೆಂಗಳೂರು: ಎಪಿಎಂಸಿ ಕಾಯ್ದೆಗೆ ಅಧ್ಯಾದೇಶದ ಮೂಲಕ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದ್ದು ರೈತರ ಪಾಲಿಗೆ ಮಾರಕ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಕೇಳುವವ ರಿಲ್ಲದೆ ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು.

ಕೇಂದ್ರ ಸರಕಾರ ಮೇ 5ರಂದು ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯಿದೆ ತಿದ್ದುಪಡಿಯನ್ನು ಅಧ್ಯಾದೇಶ ಮೂಲಕ ಜಾರಿಗೆ ತನ್ನಿ ಎಂದು ಹೇಳಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು, ರಾಜ್ಯ ಸರಕಾರಗಳಿಗೆ ಈ ರೀತಿಯ ಆದೇಶ ನೀಡಲು ಹೇಗೆ ಸಾಧ್ಯ?

ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ನಡೆಸಿರುವ ಸಂಚು. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತದೆ. ಈ ಕಂಪೆನಿಗಳ ಒತ್ತಡಕ್ಕೆ ಮಣಿದು ಕೇಂದ್ರ ಈ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ನಾಮನಿರ್ದೇಶನ ಬೇಡ
ಗ್ರಾಮ ಪಂಚಾಯತ್‌ಗಳ ಅವಧಿ ಮೇ 25ಕ್ಕೆ ಮುಗಿಯಲಿದೆ. ಚುನಾವಣೆ ಮುಂದೂಡಲು ಸರಕಾರ ತೀರ್ಮಾನಿಸಿದೆ. ಜತೆಗೆ ಬಿಜೆಪಿ ಕಾರ್ಯಕರ್ತರನ್ನು ಪಂಚಾಯತ್‌ಗಳಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಹುನ್ನಾರ ನಡೆದಿದೆ. ಇದಕ್ಕೂ ನಮ್ಮ ವಿರೋಧವಿದೆ. ಸರಕಾರ ತನ್ನ ನಿರ್ಧಾರ ಕೈಬಿಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Advertisement

ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ: ಎಚ್‌ಡಿಕೆ ವಿರೋಧ
ಎಪಿಎಂಸಿ ಖಾಸಗೀಕರಣ ಮತ್ತು ಕಾರ್ಮಿಕರು ದಿನದ 12 ಗಂಟೆ ಕೆಲಸ ಮಾಡುವ ಸಂಬಂಧ ರಾಜ್ಯ ಸರಕಾರ ಅಧ್ಯಾದೇಶದ ಮೂಲಕ ಜಾರಿಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಕೋವಿಡ್ ಸಂಕಷ್ಟಸಂದರ್ಭದಲ್ಲಿ ಇಂಥ ತೀರ್ಮಾನ ಕೈಗೊಳ್ಳುವ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿಗಳ ಖಾಸಗೀಕರಣದಿಂದ ಸರಕಾರದ ಬೊಕ್ಕಸಕ್ಕೆ 600 ಕೋ. ರೂ. ನಷ್ಟವಾಗಲಿದೆ. ರೈತರು, ವರ್ತಕರಿಗೆ ಕಷ್ಟವಾಗಲಿದೆ. ನಮ್ಮ ಮಾರುಕಟ್ಟೆಗಳು ಉಳ್ಳವರ ಪಾಲಾಗಿ ರೈತರ ಉತ್ಪನ್ನಕ್ಕೆ ಬೆಲೆ ನಿಗದಿಯನ್ನೂ ಅವರೇ ಮಾಡಲಿದ್ದಾರೆ, ಇದು ರೈತಾಪಿ ಸಮುದಾಯಕ್ಕೆ ಮಾರಕವಾಗಿದೆ ಎಂದರು.
ಕಾರ್ಮಿಕರು 12 ಗಂಟೆ ದುಡಿಯುವ ಸಾಮರ್ಥ್ಯ ಹೊಂದಿರುತ್ತಾರೆಯೇ, ಇಲ್ಲವೇ? ಎಂಬುದರ ವೈಜ್ಞಾನಿಕ ಅಧ್ಯಯನ ಆಗದೆ ತೀರ್ಮಾನ ಕೈಗೊಳ್ಳುವುದು ಅಮಾನವೀಯ. ಕೈಗಾರಿಕೆ ಉಳಿಸಲು ಸರಕಾರ ಪರಿಹಾರ ಪ್ಯಾಕೇಜ್‌ ಕೊಡಲಿ.

ಅದು ಬಿಟ್ಟು ಇಂಥ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದರು.
ಈ ಎರಡೂ ವಿಚಾರಗಳು ತಮ್ಮ ಬಳಿ ಬಂದಾಗ ತಮ್ಮ ವಿವೇಚನೆಯಿಂದ ಪರಾಮರ್ಶೆ ಮಾಡಿ, ಅನುಮತಿ ನೀಡಬೇಡಿ ಎಂದು ನಾನು ರಾಜ್ಯಪಾಲರಿಗೂ ಪತ್ರ ಬರೆಯಲಿದ್ದೇನೆ ಎಂದು ಹೇಳಿದರು.

ಕೋವಿಡ್ ಸೇವೆಯಲ್ಲಿದ್ದಾಗಲೇ ಕುಸಿದು ಬಿದ್ದು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಬಳ್ಳಾರಿಯ ಆಶಾ ಕಾರ್ಯಕರ್ತೆ ಸಾಕಮ್ಮಳಿಗೆ 50 ಲಕ್ಷ ರೂ. ವಿಮೆ ಹಣ ಯೋಜನೆ ಅನ್ವಯ ಮಾಡಬೇಕು. ಸರಕಾರ ಎರಡು ಲಕ್ಷ ರೂ. ನೀಡುವುದಾಗಿ ಹೇಳಿದೆ. ಕೋವಿಡ್ ವಾರಿಯರ್ಸ್‌ಗೆ ಕೊಡುವ ಗೌರವ ಇದೇನಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next