Advertisement

ಮ್ಯಾಗ್ಸಸ್ಸೇ ಪ್ರಶಸ್ತಿ ವಿಜೇತ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ನಿಧನ

09:45 AM Nov 11, 2019 | sudhir |

ತಮಿಳುನಾಡು : ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ತಿರುನೆಲ್ಲಿ ನಾರಾಯಣ ಅಯ್ಯರ್ ಶೇಷನ್ (87) ಅವರು ರವಿವಾರದಂದು ಸಂಜೆ ಚೆನ್ನೈ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.

Advertisement

ಶೇಷನ್ ಅವರಿಗೆ 87 ವರ್ಷ ಪ್ರಾಯವಾಗಿತ್ತು. 1990 ಡಿಸೆಂಬರ್ 12 ರಿಂದ 1996 ಡಿಸೆಂಬರ್ 11ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಟಿ.ಎನ್. ಶೇಷನ್ ಅವರು ಕಾರ್ಯನಿರ್ವಹಿಸಿದ್ದರು. ಶೇಷನ್ ಅವರು 10ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು.

ಶೇಷನ್ ಅವರ ನಿಧನದ ಸುದ್ದಿಯನ್ನು ಇನ್ನೋರ್ವ ಮಾಜೀ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್. ವೈ. ಖುರೇಷಿ ಅವರು ಮಾಧ್ಯಮಗಳಿಗೆ ಖಚಿತಪಡಿಸಿದರು. ‘ದೇಶದ ಮಾಜೀ ಚುನಾವಣಾ ಆಯುಕ್ತರಾಗಿದ್ದ ಟಿ. ಎನ್. ಶೇಷನ್ ಅವರು ಈಗ್ಗೆ ಕೆಲವೇ ಸಮಯಗಳ ಹಿಂದೆ ನಿಧನರಾಗಿದ್ದಾರೆ ಎಂದು ತಿಳಿಸಲು ನನಗೆ ಬೇಸರವಾಗುತ್ತಿದೆ’ ಎಂದು ಖುರೇಷಿ ಅವರು ಪ್ರಕಟಿಸಿದರು.

1955ನೇ ಬ್ಯಾಚಿನ ತಮಿಳುನಾಡು ಕೆಡೇರ್ ನ ಐ.ಎ.ಎಸ್. ಅಧಿಕಾರಿಯಾಗಿದ್ದ ಟಿ.ಎನ್. ಶೇಷನ್ ಅವರು 1989ರಲ್ಲಿ ಭಾರತ ಸರಕಾರದ 18ನೇ ಕ್ಯಾಬಿನೆಟ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ್ದರು. ಭಾರತ ಸರಕಾರಕ್ಕೆ ಶೇಷನ್ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 1996ರಲ್ಲಿ ಅವರಿಗೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೇ ಪ್ರಶಸ್ತಿಯನ್ನು ಕೊಡಮಾಡಲಾಗಿತ್ತು. ನಾಗರಿಕ ಸೇವಾ ವಿಭಾಗದಲ್ಲಿಯೇ ಅತ್ಯುನ್ನತ ಸ್ಥಾನವಾಗಿರುವ ಸಂಪುಟ ಕಾರ್ಯದರ್ಶಿ ಹುದ್ದೆಗೆ ಮಾಜೀ ಪ್ರಧಾನಿ ರಾಜೀವ್ ಗಾಂಧಿ ಅವರು ಶೇಷನ್ ಅವರನ್ನು ನೇಮಿಸಿಕೊಂಡಿದ್ದು ಅವರ ಕಾರ್ಯದಕ್ಷತೆಗೆ ಒಂದು ಉತ್ತಮ ನಿದರ್ಶನವಾಗಿದೆ.

ಭಾರತದ ಸಾಂಪ್ರದಾಯಿಕ ಚುನಾವಣಾ ಪದ್ಧತಿಯಲ್ಲಿ ಗಮನಾರ್ಹ ಸುಧಾರಣೆಯನ್ನು ತರುವಲ್ಲಿ ಶೇಷನ್ ಅವರ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ತಮ್ಮ ಸುಮಾರು 06 ವರ್ಷಗಳ ಅಧಿಕಾರಾವಧಿಯಲ್ಲಿ ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದರು.

Advertisement

ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ ಶೇಷನ್ ಅವರ ಕಾರ್ಯ ವೈಖರಿ ಹಲವು ರಾಜಕೀಯ ಪಕ್ಷಗಳ ಮತ್ತು ಮುಖಂಡರ ಕಣ್ಣು ಕೆಂಪಾಗಿಸಿತ್ತು.

ಚುನಾವಣಾ ಪ್ರಕ್ರಿಯೆಗೆ ಶೇಷನ್ ಸ್ಪರ್ಶ:
– ಅರ್ಹ ಮತದಾರರಿಗೆ ಗುರುತಿನ ಚೀಟಿ ವಿತರಣೆ
– ಚುನಾವಣಾ ನೀತಿ ಸಂಹಿತೆಗಳ ಕಟ್ಟುನಿಟ್ಟಿನ ಅನುಷ್ಠಾನ
– ಚುನಾವಣೆ ಸಮಯದಲ್ಲಿ ಸ್ಪರ್ಧಿಗಳ ಖರ್ಚು ವೆಚ್ಚಗಳ ಮೇಲೆ ಮಿತಿ ಅಳವಡಿಕೆ
– ಚುನಾವಣಾ ಆಯೋಗವನ್ನು ಪ್ರಗತಿಶೀಲ ಮತ್ತು ಸ್ವಾಯತ್ತಗೊಳಿಸಿದ್ದು.
– ಚುನಾವಣಾ ಅವ್ಯವಹಾರ ಮತ್ತು ಮತದಾರಿಗೆ ಆಮಿಷ ಒಡ್ಡುವುದಕ್ಕೆ ಕಡಿವಾಣ
– ಚುನಾವಣಾ ಸಂದರ್ಭದಲ್ಲಿ ಮದ್ಯ ಹಂಚುವುದಕ್ಕೆ ಕಡಿವಾಣ
– ಸರಕಾರಿ ಯಂತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಕೆಗೆ ನಿಯಂತ್ರಣ
– ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ನಿಯಂತ್ರಣ
– ಚುನಾವಣಾ ಪ್ರಚಾರದಲ್ಲಿ ಲಿಖಿತ ಅನುಮತಿ ಇಲ್ಲದೇ ಲೌಡ್ ಸ್ಪೀಕರ್ ಮತ್ತು ಗಟ್ಟಿ ಧ್ವನಿಯಲ್ಲಿ ಸಂಗೀತ ಬಳಕೆಗೆ ನಿಯಂತ್ರಣ

1997ರಲ್ಲಿ ಶೇಷನ್ ಅವರು ಕೆ.ಆರ್. ನಾರಾಯಣನ್ ಅವರಿಗೆ ಎದುರಾಳಿಯಾಗಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.

1932ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ತಿರುನೆಲ್ಲೈ ಎಂಬಲ್ಲಿ ಜನಿಸಿದ ಟಿ.ಎನ್. ಶೇಷನ್ ಅವರು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿಯೇ ಅವರು ಐ.ಎ.ಎಸ್. ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದರು.
ಎಡ್ವರ್ಡ್ ಎಸ್, ಮ್ಯಾಸನ್ ಫೆಲೋಶಿಪ್ ಪಡೆದುಕೊಂಡು ಶೇಷನ್ ಅವರು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಚಾರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸಹ ಪಡೆದುಕೊಂಡಿದ್ದರು.

ಶೇಷನ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಗಣ್ಯರು ಮತ್ತು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಟಿ.ಎನ್. ಶೇಷನ್ ಅವರು ಜಯಲಕ್ಷ್ಮೀ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಜಯಲಕ್ಷ್ಮೀ ಅವರು 2018ರಲ್ಲಿ ನಿಧನರಾಗಿದ್ದರು. ಟಿ.ಎನ್. ಶೇಷನ್ ಅವರ ಅಂತಿಮ ಸಂಸ್ಕಾರ ಸೋಮವಾರ ನಡೆಯುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next