ಮುಂಬೈ:ಮಹಾರಾಷ್ಟ್ರ ಮಾಜಿ ಸಚಿವ, ಬಿಜೆಪಿ ಮಾಜಿ ಮುಖಂಡ ಏಕ್ ನಾಥ್ ಖಡ್ಸೆ ಶುಕ್ರವಾರ (ಅಕ್ಟೋಬರ್ 23, 2020) ಎನ್ ಸಿಪಿ ವರಿಷ್ಠ ಶರದ್ ಪವಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿದ್ದ ಖಡ್ಸೆ ಎನ್ ಸಿಪಿಗೆ ಸೇರ್ಪಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಎನ್ ಸಿಪಿ ಸೇರ್ಪಡೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಖಡ್ಸೆ, ನಾನು ಬಿಜೆಪಿ ಪಕ್ಷ ಕಟ್ಟಲು ಸಾಕಷ್ಟು ಶ್ರಮಿಸಿದ್ದೇನೆ. ನಾನು ಯಾವತ್ತೂ ಪಕ್ಷಕ್ಕೆ ದ್ರೋಹ ಎಸಗಿಲ್ಲ. ಕೆಲವು ಮಹಿಳೆಯರು ನನ್ನ ವಿರುದ್ಧ ಆರೋಪ ಹೊರಿಸಿದ್ದರು. ಒಂದು ವೇಳೆ ನಾನು ಪಕ್ಷ ಬದಲಾಯಿಸಿದರೆ ನನ್ನ ಮನೆ ಮೇಲೆ ಇ.ಡಿ.ದಾಳಿ ನಡೆಸುವುದಾಗಿ ಹೇಳಿದ್ದರು. ಒಂದು ವೇಳೆ ನೀವು ಇ.ಡಿ ದಾಳಿ ನಡೆಸಿದರೆ, ನಾನು ಸಿ.ಡಿ. ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ನಾನು 40 ವರ್ಷಗಳ ಕಾಲ ಬಿಜೆಪಿ ಪಕ್ಷದಲ್ಲಿದ್ದೆ. ಆದರೆ ನನಗೆ ಸಿಕ್ಕಿದ್ದು ಎಸಿಬಿ ವಿಚಾರಣೆ ಮತ್ತು ಲೈಂಗಿಕ ಕಿರುಕುಳದ ಆರೋಪ. ದೆಹಲಿಯಲ್ಲಿರುವ ನನ್ನ ಹಿರಿಯ ಮಿತ್ರರು ಎನ್ ಸಿಪಿ ಸೇರ್ಪಡೆಯಾಗುವಂತೆ ಸಲಹೆ ನಿಡಿದ್ದರು. ಬಿಜೆಪಿ ಹಿರಿಯ ನಾಯಕರೇ ಸತ್ಯ ಹೇಳಲು ಬಯಸುತ್ತಿದ್ದಾರೆ. ಆದರೆ ಅವರಿಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಖಡ್ಸೆ ಹೇಳಿದರು.
ಇದನ್ನೂ ಓದಿ:ವಿವಾಹ ವಿಚ್ಛೇದನ: ಪ್ರತಿ ತಿಂಗಳು ಪತ್ನಿಯೇ ಪತಿಗೆ ಜೀವನಾಂಶ ಕೊಡಬೇಕು: ಕೋರ್ಟ್ ಆದೇಶ!
ನನ್ನ ವಿರುದ್ಧ ಭೂ ಹಗರಣದ ಆರೋಪ ಹೊರಿಸಲಾಗಿತ್ತು. ಆದರೆ ಕೆಲವು ಜನರು ಎಷ್ಟು ಜಾಗವನ್ನು ಅಕ್ರಮವಾಗಿ ಮಾಡಿಕೊಂಡಿದ್ದಾರೆ ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಖಡ್ಸೆ ತಿಳಿಸಿದ್ದಾರೆ.