ಸಿಡ್ನಿ: ಆಸ್ಟ್ರೇ ಲಿಯದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಕಾರ ಮೈಕಲ್ ಸ್ಲೇಟರ್ ಬಂಧನಕ್ಕೊಳಗಾಗಿದ್ದಾರೆ. ಗೃಹಹಿಂಸೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಆದರೆ ನಿರ್ದಿಷ್ಟವಾಗಿ ಯಾವ ಕೃತ್ಯವೆಸಗಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಕಳೆದ ವಾರ ಗೃಹಹಿಂಸೆ ಪ್ರಕರಣ ನಡೆದಿದೆ. ಆ ಬಗ್ಗೆ ತನಿಖೆ ನಡೆಸಿ ಸ್ಲೇಟರ್ ಅವರನ್ನು ಬಂಧಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಹೇಳಿದ್ದಾರೆ.
ಕಳೆದ ತಿಂಗಳು ಸೆವೆನ್ ನೆಟ್‌ವರ್ಕ್ಸ್ ಕಮೆಂಟ್ರಿ ತಂಡದಿಂದ ಸ್ಲೇಟರ್‌ರನ್ನು ಕೈಬಿಡಲಾಗಿತ್ತು. ಮೇ ತಿಂಗಳಲ್ಲಿ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಗ್ಧಾಳಿ ಕೂಡ ನಡೆಸಿದ್ದರು. ಇದಕ್ಕೆ ಭಾರತದ ಕೊರೊನಾ ಪರಿಸ್ಥಿತಿಯೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.
ಇದನ್ನೂ ಓದಿ:“ಉತ್ತರ’ದಲ್ಲಿ ಪ್ರವಾಹ ಪ್ರಯಾಸ : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ
ಭಾರತದಲ್ಲಿ ಕೊರೊನಾ ತೀವ್ರವಾಗಿದ್ದರಿಂದ ಅಲ್ಲಿದ್ದ ಆಸ್ಟ್ರೇಲಿಯನ್ನರು ಕೂಡಲೇ ದೇಶಕ್ಕೆ ಮರಳುವಂತಿಲ್ಲ ಎಂದು ಮಾರಿಸನ್ ಆದೇಶಿಸಿದ್ದರು. ಇದನ್ನು ಆಕ್ಷೇಪಿಸಿದ್ದ ಸ್ಲೇಟರ್, ನಿಮ್ಮ ಕೈಗಳಿಗೆ ರಕ್ತ ಮೆತ್ತಿಕೊಂಡಿದೆ ಎಂದು ಬೈದಿದ್ದರು.
ಆಸೀಸ್ ಪರ ಸ್ಲೇಟರ್ 74 ಟೆಸ್ಟ್, 42 ಏಕದಿನ ಪಂದ್ಯವಾಡಿದ್ದಾರೆ.