Advertisement

ಆಸೀಸ್‌ ವಿರುದ್ಧದ ಫಾರ್ಮ್: ರೋಹಿತ್‌ ವಿಶ್ವಾಸ

11:51 AM Oct 21, 2017 | |

ಮುಂಬಯಿ: ಮುಂಬರುವ ನ್ಯೂಜಿಲ್ಯಾಂಡ್‌ ಎದುರಿನ ಸರಣಿಯ ವೇಳೆ ನಾವು ಆಸ್ಟೇಲಿಯ ವಿರುದ್ಧದ ಫಾರ್ಮನ್ನೇ ಮುಂದುವರಿಸಬೇಕಿದೆ, ಹಾಗೂ ಇದು ಮುಂದುವರಿಯಲಿದೆ ಎಂಬ ವಿಶ್ವಾಸ ಇದೆ ಎಂಬುದಾಗಿ ಟೀಮ್‌ ಇಂಡಿಯಾ ಆರಂಭಕಾರ ರೋಹಿತ್‌ ಶರ್ಮ ಹೇಳಿದ್ದಾರೆ. ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ಏಕದಿನ ಪಂದ್ಯ ರವಿವಾರ ಮುಂಬಯಿಯಲ್ಲಿ ನಡೆಯಲಿದೆ.

Advertisement

“ನ್ಯೂಜಿಲ್ಯಾಂಡಿಗೆ ಎರಡು ಉತ್ತಮ ಅಭ್ಯಾಸ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿದೆ. ಇವೆರಡೂ ಮುಂಬಯಿಯಲ್ಲೇ ನಡೆದಿವೆ. ಹೀಗಾಗಿ ಅವರು ಇಲ್ಲಿನ ವಾತಾವರಣದ ಲಾಭವನ್ನೆತ್ತುವುದರಲ್ಲಿ ಅನುಮಾನವಿಲ್ಲ. ಆದರೆ ನಾವು ಹೇಗೆ ಆರಂಭಿಸುತ್ತೇವೆ, ಒಂದು ತಂಡವಾಗಿ ನಾವು ಹೇಗೆ ಆಡುತ್ತೇವೆ ಎಂಬುದರ ಮೇಲೆ ಈ ಸರಣಿಯ ದಿಕ್ಕನ್ನು ಗಮನಿಸಬಹುದು. ನಾವು ಆಸ್ಟ್ರೇಲಿಯ ವಿರುದ್ಧದ ಆಟವನ್ನು ನಿಲ್ಲಿಸಿದ ಹಂತದಿಂದ ಈ ಸರಣಿಯನ್ನು ಮುಂದುವರಿಸಬೇಕಿದೆ. ಅದೇ ಫಾರ್ಮ್ ಇಲ್ಲಿಯೂ ಮುಂದುವರಿಯಬೇಕಿದೆ. ಆ ವಿಶ್ವಾಸದಲ್ಲಿ ನಾವಿದ್ದೇವೆ’ ಎಂದು ರೋಹಿತ್‌ ಶರ್ಮ ಹೇಳಿದರು.

“ಪ್ರತಿಯೊಂದು ಹೊಸ ಸರಣಿಯೂ ಅದರದೇ ಆದ ಸವಾಲನ್ನು ಹೊಂದಿರುತ್ತದೆ. ಪ್ರತಿಯೊಂದು ಎದುರಾಳಿಗೂ ಅದರದೇ ಆದ ಶಕ್ತಿ ಮತ್ತು ದೌರ್ಬಲ್ಯಗಳಿರುತ್ತವೆ. ಇದನ್ನು ಅರಿತು, ಹೊಂದಿಕೊಂಡು ಹೋಗುವುದು ಮುಖ್ಯ. ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್‌ ತಂಡಗಳು ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿವೆ’ ಎಂದು ಕಾಂಗರೂ ವಿರುದ್ಧ 296 ರನ್‌ ಬಾರಿಸಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡ ರೋಹಿತ್‌ ಅಭಿಪ್ರಾಯಪಟ್ಟರು.

“ನ್ಯೂಜಿಲ್ಯಾಂಡ್‌ ವಿರುದ್ಧ ನಾವು ಕಳೆದ ವರ್ಷ ಇಲ್ಲಿ ಆಡಿದ್ದೆವು. ಹೆಚ್ಚು ಕಡಿಮೆ ಅದೇ ಆಟಗಾರರನ್ನು ತಂಡ ಹೊಂದಿದೆ. ಹೀಗಾಗಿ ಅವರ ಕಾರ್ಯತಂತ್ರ, ಯೋಜನೆಗಳಲ್ಲಿ ಬದಲಾವಣೆಗಳಾಗುವ ಸಂಭವ ಕಡಿಮೆ’ ಎಂದ ರೋಹಿತ್‌ ಶರ್ಮ, ವೈಯಕ್ತಿಕ ಫಾರ್ಮ್ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವೇಗಿ ಟ್ರೆಂಟ್‌ ಬೌಲ್ಟ್ ಅವರನ್ನು ಎದುರಿಸುವುದು ದೊಡ್ಡ ಸವಾಲು, ಉಪನಾಯಕನ ಜವಾಬ್ದಾರಿಯಿಂದ ವಿಶೇಷ ಬದಲಾವಣೆ ಏನೂ ಕಂಡುಬರದು ಎಂದೂ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next