ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಶತಮಾನಗಳಿಂದ ಐತಿಹಾಸಿಕ ನೆಲೆ ಮತ್ತು ಪಾರಂಪರಿಕ ವೈಶಿಷ್ಟéಗಳನ್ನು ಹೊಂದಿರುವ ಕಂಬಳ ಕ್ರೀಡೆಯನ್ನು ಇನ್ನಷ್ಟು ಪ್ರೋತ್ಸಾಹಿಸಿ ಸಶಕ್ತಗೊಳಿಸಲು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ ಅಸ್ತಿತ್ವಕ್ಕೆ ಬರಲಿದೆ.
ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕಂಬಳ ಕ್ರೀಡೆಯನ್ನು ಸಶಕ್ತಗೊಳಿಸಲು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಬಜೆಟ್ ಅಧಿವೇಶನದ ಸಂದರ್ಭ ಕಾಂಗ್ರೆಸ್ ಸದಸ್ಯರಾದ ಮಂಜುನಾಥ ಭಂಡಾರಿ, ಬಿ.ಕೆ. ಹರಿಪ್ರಸಾದ್, ಡಾ| ಕೆ. ಗೋವಿಂದರಾಜು, ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ್, ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ ಅವರು ಈ ವಿಷಯ ಪ್ರಸ್ತಾವಿಸಿದ್ದರು. ಅದರ ಹಿನ್ನೆಲೆಯಲ್ಲಿ ಸಭಾಪತಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಕಂಬಳ ಕ್ರೀಡೆಯನ್ನು ಹೆಚ್ಚು ಸಂಘಟನಾತ್ಮಕ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಲು ರಾಜ್ಯ ಮಟxದ ಕಂಬಳ ಅಸೋಸಿಯೇಶನ್ ರಚಿಸಬೇಕು. ಇದಕ್ಕೆ ಕ್ರೀಡಾ ಇಲಾಖೆಯ ಅನುಮೋದನೆ, ರಾಜ್ಯ ಸರಕಾರದಿಂದ ಅನುದಾನ ಪಡೆಯಬೇಕು. ಬಳಿಕ ಎಲ್ಲ ಜಿಲ್ಲಾ ಮತ್ತು ಸ್ಥಳೀಯ ಕಂಬಳ ಸಮಿತಿಗಳನ್ನು ರಾಜ್ಯ ಮಟ್ಟದ ಅಸೋಸಿಯೇಶನ್‌ನಲ್ಲಿ ನೋಂದಾಯಿಸಿ ಪ್ರತ್ಯೇಕ ಬೈಲಾ ರಚಿಸಿ ಸ್ಥಳೀಯ ಕಂಬಳ ಸಮಿತಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂದಿನ ರೂಪುರೇಷೆಗಳು ಹೇಗಿರಬೇಕು ಎಂದು ಚರ್ಚಿಸಲು ಕ್ರೀಡಾ, ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವರ ಸಭೆ ನಡೆಸಿ, ಆ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಮುಖ್ಯಮಂತ್ರಿಯವರ ಮುಂದೆ ಮಂಡಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಂಜುನಾಥ್ ಭಂಡಾರಿ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ವಿಧಾನಪರಿಷತ್ತಿನ ವಿವಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸದಸ್ಯರಾದ ಮಂಜುನಾಥ ಭಂಡಾರಿ, ಕೆ. ಹರೀಶ್ ಕುಮಾರ್, ಡಾ| ಕೆ. ಗೋವಿಂದರಾಜು, ಪ್ರತಾಪಸಿಂಹ ನಾಯಕ್, ಎಸ್.ಎಲ್. ಭೋಜೇಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಂಬಳ ಸಮಿತಿಯ ಗುಣಪಾಲ ಕಡಂಬ, ಅಶೋಕ್, ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆಗೆ ಪೂರಕವಾಗಿ ಸಭಾಪತಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆದಿದೆ. ಸಭೆ ಯಶಸ್ವಿಯಾಗಿದ್ದು, ಕಂಬಳ ಅಸೋಸಿಯೇಷನ್ ರಚನೆ ಸಹಿತ ಮಹತ್ವದ ಚರ್ಚೆಗಳು ನಡೆದಿವೆ. ಇದರಿಂದ ಕಂಬಳ ಕ್ರೀಡೆಗೆ ಹೊಸ ಆಯಾಮ ಸಿಕ್ಕಿದೆ.
– ಮಂಜುನಾಥ ಭಂಡಾರಿ, ವಿಧಾನಪರಿಷತ್ ಸದಸ್ಯ