Advertisement

ಹಣಕಾಸಿನ ಲೆಕ್ಕಪರಿಶೋಧನಾ ಸಮಿತಿ ರಚನೆ

12:07 PM Aug 11, 2017 | |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ ಮಾಡಲಾಗಿರುವ ಹಣಕಾಸಿನ ಲೆಕ್ಕಪರಿಶೋಧನೆಗಾಗಿ ಸಮಿತಿಯೊಂದನ್ನು ಜಿಲ್ಲಾಧಿಕಾರಿ ಡಿ. ರಂದೀಪ್‌ ರಚಿಸಿದ್ದಾರೆ.

Advertisement

ದಸರಾ ಮಹೋತ್ಸವದ ಹಿನ್ನೆಲೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಸರಾ ಉಪ ಸಮಿತಿಗಳ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ಈ ಹಿಂದಿನ ವರ್ಷಗಳಲ್ಲಿ ದಸರಾ ಮಹೋತ್ಸವದ ಆಚರಣೆಗಾಗಿ ವ್ಯಯಿಸಲಾಗಿರುವ ಖರ್ಚು-ವೆಚ್ಚದ ಕುರಿತಂತೆ ಸರಿಯಾದ ಮಾಹಿತಿ ಇಲ್ಲ.

ಹೀಗಾಗಿ ಈ ಹಿಂದಿನ ವರ್ಷಗಳಲ್ಲಿ ದಸರಾ ಆಚರಣೆಗಾಗಿ ಮಾಡಲಾಗಿರುವ ವೆಚ್ಚದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಲೆಕ್ಕಪರಿಶೋಧನಾ ಸಮಿತಿ ರಚಿಸಲಾಗಿದ್ದು, ಇದರಿಂದ ದಸರಾ ಹಬ್ಬಕ್ಕೆ ಖರ್ಚು ಮಾಡಿರುವ ಹಣಕಾಸಿನ ಬಗ್ಗೆ ಪಾರದರ್ಶಕವಾಗಿ ಸಾರ್ವಜನಿಕರಿಗೂ ತಿಳಿಸಬಹುದಾಗಿದೆ ಎಂದರು.

ಒಂದೇ ಆಹ್ವಾನ ಪತ್ರ: ಈ ಹಿಂದಿನ ವರ್ಷಗಳಲ್ಲಿ ದಸರಾ ವೇಳೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಪ್ರತಿಯೊಂದು ಉಪ ಸಮಿತಿಗಳಿಂದ ಪ್ರತ್ಯೇಕ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು. ಆದರೆ ಈ ಬಾರಿ ಇದಕ್ಕೆ ಕಡಿವಾಣ ಹಾಕಿರುವ ಜಿಲ್ಲಾಧಿಕಾರಿ ಡಿ.ರಂದೀಪ್‌, ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಒಂದೇ ಆಹ್ವಾನ ಪತ್ರಿಕೆ ಮುದ್ರಿಸಲಾಗುತ್ತಿದೆ.

ಈ ಹಿನ್ನೆಲೆ ದಸರೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಬಂಧಿಸಿದ ತಾತ್ಕಾಲಿಕ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಸಿದ್ಧಪಡಿಸುವಂತೆ ಎಲ್ಲಾ ಉಪ ಸಮಿತಿಗಳಿಗೆ ಸೂಚಿಸಲಾಗಿದೆ. ಈ ಹಿಂದೆ ಕೇವಲ ಒಂದು ಕಡೆಯಲ್ಲಿ ನಡೆಯುತ್ತಿದ್ದ ದಸರಾ ಆಹಾರ ಮೇಳವನ್ನು ನಗರದ ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

Advertisement

ಅಂದಾಜುಪಟ್ಟಿ ಸಿದ್ಧಪಡಿಸಿ: ಈ ಬಾರಿಯ ದಸರಾ ಮಹೋತ್ಸವದಲ್ಲಿ ಆಯೋಜಿಸುವ ಪ್ರತಿ ಕಾರ್ಯಕ್ರಮಗಳಿಗೆ ತಮ್ಮ ಲಿಖೀತ ಮಾರ್ಗದರ್ಶನದ ಮೂಲಕ ಹಣವನ್ನು ಖರ್ಚು ಮಾಡುವಂತೆ ಹಾಗೂ ಎಲ್ಲಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವಂತೆ ಎಲ್ಲಾ ಉಪ ಸಮಿತಿಗಳಿಗೂ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಲ್ಲದೆ ಕಳೆದ ಬಾರಿ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರಿಗೆ ಬೇರೆ ಬೇರೆ ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಿದ್ದರಿಂದ ಕಲಾವಿದರಿಗೆ ತಾಲೀಮು ನಡೆಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಿದ್ದರಿಂದ ಈ ಬಾರಿ ಎಲ್ಲಾ ಕಲಾವಿದರ ತಂಡಗಳಿಗೂ ಒಂದೇ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ ಸಮಸ್ಯೆಗೆ ಉತ್ತರ ನೀಡಿದರು.

ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್‌, ಪಾಲಿಕೆ ಆಯುಕ್ತ ಜಿ.ಜಗದೀಶ್‌, ಡಿಸಿಪಿ ವಿಕ್ರಂ ಆಮಟೆ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next