ಬೆಂಗಳೂರು: ನಗರದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತ (ಡಿಸಿಪಿ)ಗಳನ್ನು ಒಳಗೊಂಡ ಕ್ಷೇತ್ರವಾರು ಸಮಿತಿ ರಚನೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪ್ರಾಯೋಗಿಕ ಪರಿಹಾರಗಳನ್ನು ರೂಪಿಸುವ ಉದ್ದೇಶದಿಂದ ಸಚಿವರು, ಸೋಮವಾರ ನಗರ ಪೊಲೀಸ್ ಆಯುಕ್ತರು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ನಿಮ್ಹಾನ್ಸ್ ಸಂಸ್ಥೆಯ ಪ್ರತಿನಿಧಿಗಳ ಸಭೆ ಕರೆದು, ಅಗತ್ಯ ಸಲಹೆ ಸ್ವೀಕರಿಸಿ, ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯಾ ಡಿಸಿಪಿಗಳನ್ನು ಒಳಗೊಂಡ ಕ್ಷೇತ್ರವಾರು ಸಮಿತಿಗಳನ್ನು ಕೂಡಲೇ ರಚನೆ ಮಾಡಿ, ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ನಗರ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿವ ಕ್ಷೇತ್ರವಾರು ಶಾಲಾ ದತ್ತಾಂಶ ತಯಾರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮಗ್ರ ಯೋಜನೆಯನ್ನು ರೂಪಿಸಬೇಕು. ರಾಜ್ಯಾದ್ಯಂತ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಮನ್ವಯ ಸಮಿತಿಗಳು ಕನಿಷ್ಠ ತಿಂಗಳಿಗೊಮ್ಮೆ ಸಭೆ ಸೇರಿ ರ್ಯಾಗಿಂಗ್ ನಿಯಂತ್ರಣ, ಡ್ರಗ್ ಹಾವಳಿ, ಲೈಂಗಿಕ ಶೋಷಣೆ ಸೇರಿದಂತೆ ಹಲವು ಪ್ರಾಯೋಗಿಕ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸುವ ಕ್ರಮವಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಲ್ಲ ಶಾಲೆಗಳು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ(ಪಬ್ಲಿಕ್ ಸೇಫ್ಟಿ ಆಕ್ಟ್) ಬರುವ ರೀತಿಯಲ್ಲಿ ಕಾನೂನು ತಿದ್ದುಪಡಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಮ್ಹಾನ್ಸ್ ಸಂಸ್ಥೆಯು ಸಿದ್ಧಪಡಿಸಿರುವ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಠಾನಗೊಳಿಸುವ ಕುರಿತಂತೆ ಕ್ರಿಯಾಯೋಜನೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ರೂಪಿಸಬೇಕು. ಸರ್ಕಾರ ಉದ್ದೇಶಿಸಿರುವ ಬ್ಯಾಗ್ ರಹಿತ ದಿನಗಳಂದು ಮಕ್ಕಳ ಸುರಕ್ಷಣೆಯ ಕುರಿತಂತೆ ಬೋಧನಾ ಅಂಶಗಳನ್ನು ಅಡಕಗೊಳಿಸಿ ಸಮಗ್ರ ಚಟುವಟಿಕೆ ಆಧಾರಿತ ಪಠ್ಯಕ್ರಮ ರೂಪಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್, ಸರ್ವಶಿಕ್ಷಾಅಭಿಯಾನದ ಯೋಜನಾ ನಿರ್ದೇಶಕ ಡಾ.ಟಿ.ಎಂ.ರೇಜು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉಪಸ್ಥಿತರಿದ್ದರು.