Advertisement

ಜಿಐಸಿ ಉತ್ತೇಜನಕ್ಕೆ ತಂತ್ರಜ್ಞಾನ ಮಂಡಳಿ ರಚನೆ

10:17 AM Nov 17, 2019 | Lakshmi GovindaRaju |

ಬೆಂಗಳೂರು: ವಿಜನ್‌ ಗ್ರೂಪ್‌ ಆಯ್ತು. ಆವಿಷ್ಕಾರ ಪ್ರಾಧಿಕಾರ ರಚನೆಗೂ ಸಿದ್ಧತೆ ಮುಗಿ ದಿದೆ. ಈಗ ತಂತ್ರಜ್ಞಾನ ಮಂಡಳಿ ಬರುತ್ತಿದೆ!. ಈ ಮಂಡಳಿ ನಗರದಲ್ಲಿರುವ ಗ್ಲೋಬಲ್‌ ಇನ್‌ಹೌಸ್‌ ಸೆಂಟರ್‌(ಜಿಐಸಿ)ಗಳ ಉತ್ತೇಜನಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಕಲ್ಪಿಸಲಿದೆ. ಅಲ್ಲದೆ, ಪೂರಕವಾದ ನೀತಿ-ನಿಯ ಮಗಳು, ಕಾನೂನುಗಳ ತಿದ್ದುಪಡಿ ಮತ್ತಿತರ ವಿಚಾರಗಳಲ್ಲಿ ತಂತ್ರ ಜ್ಞಾನ ಮಂಡಳಿ ಪ್ರಮುಖ ಪಾತ್ರ ವಹಿಸಲಿದೆ. ಮಂಡಳಿ ರಚನೆಗಾಗಿ ಈಗಾಗಲೇ ಸಿದ್ಧತೆ ನಡೆದಿದೆ.

Advertisement

ಉಪ ಮುಖ್ಯಮಂತ್ರಿ ಹಾಗೂ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಈ ವಿಷಯ ತಿಳಿಸಿದರು. “ಬೆಂಗಳೂರು ಟೆಕ್‌ ಸಮಿಟ್‌’ ಹಿನ್ನೆಲೆಯಲ್ಲಿ ಶುಕ್ರವಾರ “ಉದಯವಾಣಿ’ ಕಚೇರಿಗೆ ಆಗಮಿಸಿದ್ದ ಅವರು, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನ.18ರಿಂದ 20ರವರೆಗೆ ಬೆಂಗಳೂರಿನಲ್ಲಿ ಟೆಕ್‌ ಸಮಿಟ್‌ ಆಯೋಜಿಸಲಾಗಿದೆ ಎಂದು ತಿಳಿಸಿದರು. ಬಹುರಾಷ್ಟ್ರೀಯ ಕಂಪನಿಗಳ ಜಿಐಸಿಗಳು ಶೇ.50ರಷ್ಟು ಬೆಂಗಳೂರಿನಲ್ಲೇ ಇವೆ. ಅವುಗಳು ನಡೆಸುವ ಸಂಶೋಧನೆ ಮತ್ತು ಅಭಿವೃದ್ಧಿ, ಆ ಕಂಪನಿಗಳ ಉತ್ಪನ್ನಗಳ ಸುಧಾರಣೆಗೆ ಅಗತ್ಯ ಸೌಲಭ್ಯಗಳನ್ನು ಈ ಮಂಡಳಿ ಮೂಲಕ ಪೂರೈಸಲಾಗುವುದು.

ಕಾನೂನು ಸುಧಾರಣೆ, ನೀತಿ-ನಿರೂಪಣೆಗಳ ರಚನೆ ಕೂಡ ಇದರಡಿ ಆಗಲಿದೆ. ಅಷ್ಟೇ ಅಲ್ಲ, ಮುಂದುವರಿದ ಭಾಗವಾಗಿ ಕೊರತೆ ಇರುವ ಕೌಶಲ್ಯಯುತ ಮಾನವ ಸಂಪನ್ಮೂಲಗಳನ್ನೂ ಒದಗಿಸಲಾಗುವುದು. ನಗರದಲ್ಲಿ ಈ ಜಿಐಸಿ ಸಂಖ್ಯೆ ಶೇ.10ರಿಂದ 11ರಷ್ಟು ಏರಿಕೆ ಆಗುತ್ತಿದೆ. ಇವುಗಳಿಂದ ನೇರವಾಗಿ 12 ಲಕ್ಷ ಹಾಗೂ ಪರೋಕ್ಷವಾಗಿ 28 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಐಟಿ-ಬಿಟಿ ಜತೆ ಎಲೆಕ್ಟ್ರಾನಿಕ್ಸ್‌ ಸೇರ್ಪಡೆ: ಇಷ್ಟೇ ಅಲ್ಲ, ಎಲೆಕ್ಟ್ರಾನಿಕ್ಸ್‌ ವಿಭಾಗ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲೂ ಇದು ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನದ ಜತೆಗೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ಸ್‌ ಅನ್ನು ಕೂಡ ಸೇರಿಸಲಾಗುವುದು. ಈ ಮೂಲಕ ಎಲೆಕ್ಟ್ರಾನಿಕ್ಸ್‌ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು. ದೇಶದ ಜಿಡಿಪಿಯಲ್ಲಿ ರಾಜ್ಯದ ಐಟಿ-ಬಿಟಿ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಶೇ.25ರಷ್ಟು ಕೊಡುಗೆ ನೀಡುತ್ತಿದೆ.

ಅಲ್ಲದೆ, ಶೇ. 60ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಶೇ.38ರಷ್ಟು ಐಟಿ ರಫ್ತು ಇಲ್ಲಿಂದ (ರಾಜ್ಯದಿಂದ) ಆಗುತ್ತಿದೆ. ಇದನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಬೆಂಗಳೂರು ಟೆಕ್‌ ಸಮಿಟ್‌’ ಕೆಲಸ ಮಾಡಲಿದೆ. ಪ್ರಸಕ್ತ ಸಾಲಿನ ತಂತ್ರಜ್ಞಾನ ಮೇಳದಲ್ಲಿ ಆವಿಷ್ಕಾರಕ್ಕೆ ಒತ್ತು ನೀಡಲಾಗಿದ್ದು, ರೋಬೋಟಿಕ್ಸ್‌ ಚಾಂಪಿಯನ್‌ ಲೀಗ್‌ ಪ್ರಮುಖ ಆಕರ್ಷಣೆ ಆಗಿದೆ. ಕಳೆದ ಬಾರಿ ನಡೆದ ಡ್ರೋನ್‌ ರೇಸ್‌ ಹಲವು ಕ್ಷೇತ್ರಗಳಲ್ಲಿ ಪರಿಣಾಮ ಬೀರಿದೆ. ಡ್ರೋನ್‌ ತಂತ್ರಜ್ಞಾನವು ಕೃಷಿ, ಆರೋಗ್ಯ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಬಳಕೆ ಆಗುವಂತಾಗಿದೆ ಎಂದು ಮಾಹಿತಿ ನೀಡಿದರು. ಸಚಿವರ ಕಾರ್ಯದರ್ಶಿ, ಐಎಎಸ್‌ ಅಧಿಕಾರಿ ಪ್ರದೀಪ್‌ ಈ ವೇಳೆ ಉಪಸ್ಥಿತರಿದ್ದರು.

Advertisement

ಟೈರ್‌-2 ಸಿಟಿಗಳಲ್ಲೂ ಟೆಕ್‌ ಸಮಿಟ್‌?: ಮುಂಬರುವ ದಿನಗಳಲ್ಲಿ ಬೆಂಗಳೂರು ಮಾದರಿಯಲ್ಲಿ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ “ಟೆಕ್‌ ಸಮಿಟ್‌’ ಹಮ್ಮಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಮಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಈ ನಾಲ್ಕು ನಗರಗಳ ಪೈಕಿ ಒಂದು ಕಡೆ ಪ್ರಾಯೋಗಿಕವಾಗಿ ತಂತ್ರಜ್ಞಾನ ಮೇಳವನ್ನು ಮುಂದಿನ ವರ್ಷದಲ್ಲಿ ನಡೆಸುವ ಆಲೋಚನೆ ಇದೆ. ಅಲ್ಲಿನ ಸ್ಪಂದನೆ ನೋಡಿಕೊಂಡು, ಇತರ ನಗರಗಳಿಗೂ ವಿಸ್ತರಿಸುವ ಆಲೋಚನೆ ಇದೆ ಎಂದು ಪ್ರಶ್ನೆಯೊಂದಕ್ಕೆ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ (ಓಆಐಖಖ)ಗಳ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ ತಿಳಿಸಿದರು.

“2019ರ ಬೆಂಗಳೂರು ಟೆಕ್‌ ಸಮಿಟ್‌ಗೆ ಸಂಬಂಧಿಸಿದಂತೆ ಈಗಾಗಲೇ ಮಣಿಪಾಲ, ಮಂಗಳೂರು, ಹುಬ್ಬಳ್ಳಿ ಮತ್ತಿತರ ನಗರಗಳಲ್ಲಿ ರೋಡ್‌ ಶೋ ನಡೆಸಲಾಗಿದೆ. ಅಲ್ಲೆಲ್ಲಾ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರಕಿದೆ. ಜತೆಗೆ, ಎರಡು ಮತ್ತು ಮೂರನೇ ಹಂತಗಳಲ್ಲಿ ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗ್ಳ ಉತ್ತೇಜನ, ಮೂಲಸೌಕರ್ಯ ವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟೆಕ್‌ ಸಮಿಟ್‌ಗಳನ್ನು ನಡೆಸಲಿಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ಡಾ.ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.

ಬಿಎಂಆರ್‌ಡಿಎಯಡಿ “ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ’ ರಚನೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ’ವನ್ನು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ)ದಡಿಯೇ ತರಲಾಗುವುದು. ಈ ಮೂಲಕ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದರು. ಶುಕ್ರವಾರ “ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಬಹುತೇಕ ವಿಷಯಗಳು ಬಿಎಂಆರ್‌ಡಿಎಯಡಿಯೇ ಬರುವುದ ರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತ ಸುಂದರವಾದ ಪ್ರವಾಸಿ ತಾಣಗಳಿದ್ದು, ಬೆಂಗಳೂರಿಗೆ ಬರುವ ಬಹುತೇಕ ಪ್ರವಾಸಿಗರಿಗೆ ಇಲ್ಲಿನ ಪ್ರವಾಸಿ ತಾಣಗಳು ಪರಿಚಯವಾಗು ತ್ತಿಲ್ಲ. ಹೀಗಾಗಿ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲಾಗು ತ್ತಿದೆ.

ನಂದಿ ದುರ್ಗ, ಸಾವನ ದುರ್ಗ, ಶಿವಗಂಗೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರಿಗೆ ಪರಿಚಯಿಸಲಾಗುವುದು. ಅದೇ ರೀತಿ, ನಗರದ ಪೇಟೆ, ಕೋಟೆ ಹಾಗೂ ದುರ್ಗಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದರು. ನಂದಿಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಡ್ರೋಣ್‌ಗಳನ್ನು ಬಳಸುವುದಕ್ಕೂ ಚಿಂತನೆ ನಡೆದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ನಂತರ ಮೊದಲ ಕೆಲಸವಾಗಿ “ಕೆಂಪೇಗೌಡ’ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕನ್ನಡವನ್ನು “ಉದ್ಯೋಗ ಭಾಷೆ’ಯನ್ನಾಗಿಸಲು ಸಾಫ್ಟ್ವೇರ್‌ ಅಭಿವೃದ್ಧಿ: ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಇತರ ಭಾಷೆಗಳಂತೆಯೇ “ಉದ್ಯೋಗ ಭಾಷೆ’ ಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೂರಕವಾದ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು. “ಉದಯವಾಣಿ’ಯೊಂದಿಗಿನ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ತಮಿಳು, ತೆಲಗಿನಂತೆ ಕನ್ನಡವನ್ನೂ ಪ್ರಸ್ತುತ ಅಗತ್ಯಕ್ಕೆ ಅನುಗುಣವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿ,

ಜಾಗತಿಕ ಮಟ್ಟದಲ್ಲಿ ಉದ್ಯೋಗ ಭಾಷೆಯಾಗಿ ಮಾಡುವ ಗುರಿ ಇದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಸಾಕಷ್ಟು ಅನುಕೂಲ ಆಗಲಿದೆ’ ಎಂದು ಹೇಳಿದರು. ಅದೇ ರೀತಿ, ವಿವಿಧ ಕ್ಷೇತ್ರದಲ್ಲಿ ಇತರ ಆಡುಭಾಷೆಗಳಲ್ಲಿರುವ ವಿಷಯಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಸಾಕಷ್ಟು ಬೇಡಿಕೆ ಇದೆ. ಅದಕ್ಕೆ ಭಾಷಾ ತಜ್ಞರ ಅವಶ್ಯಕತೆ ಇದ್ದು, ಈ ದಿಸೆಯಲ್ಲಿ ಕೌಶಲ್ಯ ತರಬೇತಿ ನೀಡುವ ಆಲೋಚನೆ ಇದೆಯೇ ಎಂದು ಕೇಳಿದಾಗ, ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ಪದವಿ ಕಾಲೇಜುಗಳಲ್ಲಿ ಮೆಂಟರ್‌ಗಳ ನಿಯೋಜನೆ: ರಾಜ್ಯದ ಪದವಿ ಕಾಲೇಜುಗಳಲ್ಲಿ ಮೆಂಟರ್‌ಗಳನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು. ಶಿಕ್ಷಣ ಸಂಸ್ಥೆಗಳು ಕೇವಲ ಪದವೀಧರರನ್ನು ಉತ್ಪಾದಿಸುವ ಕೇಂದ್ರಗಳಾಗಬಾರದು. ಪ್ರಸ್ತುತ ಅಗತ್ಯಕ್ಕೆ ಅನುಗುಣವಾದ ತರಬೇತಿಯೂ, ಪ್ರಾಯೋಗಿಕ ಕಲಿಕೆಯೂ ಬೇಕಾಗುತ್ತದೆ. ಹಂತ-ಹಂತವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುವುದು. ಸದ್ಯಕ್ಕೆ ಪದವಿ ಕಾಲೇಜುಗಳಲ್ಲಿ ಮೆಂಟರ್‌ಗಳನ್ನು ನಿಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next