ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಜೀವನ, ಆಡಳಿತ ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಸಮಗ್ರತೆಯ ಬಗ್ಗೆ ಮಾಹಿತಿ ಒದಗಿಸುವ ಗೆಜೆಟಿಯರ್ ರಚನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಆದರೂ ಜಿಲ್ಲೆಗೆ ಅವಶ್ಯಕವಾಗಿರುವ ಗೆಜೆಟಿಯರ್ ಕನಸು ಈಡೇರುತ್ತಾ ಎಂಬುದನ್ನು ಕಾದು ನೀಡುವಂತಾಗಿದೆ.
ಹೌದು, ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ ಉಪ ವಿಭಾಗ 2007 ರಲ್ಲಿ ಪ್ರತ್ಯೇಕವಾಗಿ ಜಿಲ್ಲೆಯಾಗಿ ರಚನೆಗೊಂಡು ಒಂದೂವರೆ ದಶಕ ಕಳೆದಿದೆ. ಆದರೆ ಇಲ್ಲಿವರೆಗೂ ಕೂಡ ಜಿಲ್ಲೆಯ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಗೆಜೆಟಿಯರ್‌ಗೆ ಇನ್ನೂ ಕಾಲ ಕೂಡಿ ಬಾರದೇ ಇರುವುದು ಮಾತ್ರ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ.
ಏನಿದು ಗೆಜೆಟಿಯರ್?: ಜಿಲ್ಲೆಯ ಭೌಗೋಳಿಕ ಲಕ್ಷಣಗಳಿಂದ ಹಿಡಿದು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಆರೋಗ್ಯ, ಉದ್ಯೋಗ ವಿಚಾರಗಳ ಬಗ್ಗೆ ಅಂಕಿ, ಅಂಶಗಳೊಂದಿಗೆ ಚಿತ್ರಗಳ ಸಮೇತ ಅಲ್ಲಿನ ಜನ ಜೀವನ ಬಗೆ, ಆಚರಿಸುವ ಕಲೆ, ಸಂಸ್ಕೃತಿ, ಸಂಪ್ರದಾಯ, ಪಾಲಿಸುವ ಆಚಾರ, ವಿಚಾರ, ಜಾತ್ರೆ, ಸಂತೆ, ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಗ್ರಾಮಗಳು, ಜಾತಿ ಜನ ಸಮುದಾಯಗಳ ಆಚರಣೆಗಳ ಬಗ್ಗೆ ಸಮಗ್ರವಾಗಿ ವಿವರಗಳನ್ನು ದಾಖಲಿಸುವ ಮೂಲಕ ಜಿಲ್ಲೆಯ ಜನ ಜೀವನದ ಕುರಿತು ಸಮಗ್ರವಾದ ಚಿತ್ರಣವನ್ನು ಕಟ್ಟಿ ಕೊಟ್ಟು ಪರಿಚಯಿಸುವುದೇ ಗೆಜೆಟಿಯರ್ ಉದ್ದೇಶ. ಆದರೆ, ಗೆಜೆಟಿಯರ್ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ 15 ವರ್ಷ ಕಳೆದರೂ ಇನ್ನೂ ಮುದ್ರಣಗೊಂಡಿಲ್ಲ. ಹೀಗಾಗಿ ಜಿಲ್ಲೆಗೆ ಹೊಸದಾಗಿ ಬರುವ ಅಧಿಕಾರಿಗಳಿಗೆ ಜಿಲ್ಲೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಗೆ ಯಾವುದೇ ಅಧಿಕಾರಿ ಬಂದರೂ ಗೆಜೆಟಿಯರ್ ನ್ನು ಓದಿ ಬಳಿಕ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುವುದು ವಾಡಿಕೆ. ಆದರೆ ಜಿಲ್ಲೆಯ ಪಾಲಿಗೆ ಗೆಜೆಟಿಯರ್ ಕೈಗೂಡದೇ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಾರ್ಯಾಗಾರ ನಡೆಸಿ ಸುಮ್ಮನಾದರು: ಈ ಹಿಂದೆ ಜಿಲ್ಲೆಯಲ್ಲಿ ಗೆಜೆಟಿಯರ್ ರಚನೆಗೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಲೇಖಕರ, ಚಿಂತಕರ, ಸಾಹಿತಿಗಳ, ಬರಹಗಾರರ, ಕಾಲೇಜು ಉಪನ್ಯಾಸಕರ ಸಭೆ ಕರೆದು ಗೆಜೆಟಿಯರ್ ರಚನೆ ಬಗ್ಗೆ ಕಾರ್ಯಾಗಾರ ನಡೆಯಿತು. ಆದರೆ ಕೆಲಸ ಕಾರ್ಯಗಳು ಮಾತ್ರ ಇಲ್ಲಿವರೆಗೂ ಈಡೇರದೇ ಜಿಲ್ಲೆಯ ಪಾಲಿಗೆ ಇನ್ನೂ ಗೆಜೆಟಿಯರ್ ಬರೀ ಕನಸಾಗಿಯೇ ಉಳಿದಿದ್ದು, ಬಿಡುಗಡೆ ಭಾಗ್ಯ ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.
ಜಿಲ್ಲೆಯ ಗೆಜೆಟಿಯರ್ ರಚನೆ ಬಗ್ಗೆ ಸಾಕಷ್ಟು ಜಬ್ದಾವಾರಿ ನನಗೆ ವಹಿಸಿದ್ದರು. ಆದರೆ ಕಾರಣಾಂತರಗಳಿಂದ ಗೆಜೆಟಿಯರ್‌ನ್ನು ಕಾಲಮಿತಿಯೊಳಗೆ ತರಲು ಸಾಧ್ಯವಾಗಿಲ್ಲ. ಗೆಜೆಟಿಯರ್ ರಚನೆಗೆ ಪೂರಕವಾದ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಆದರೆ ಅಂತಿಮವಾಗಿ ತಿದ್ದುಪಡಿಯಾಗಿ ಗೆಜೆಟಿಯರ್ ಮುದ್ರಣಗೊಳ್ಳಬೇಕಿದೆ. ಒಂದೆರೆಡು ತಿಂಗಳಲ್ಲಿ ಗೆಜೆಟಿಯರ್ ಮುದ್ರಣಗೊಳ್ಳುವ ನಿರೀಕ್ಷೆ ಇದೆ.
●ಡಾ.ಕೋಡಿರಂಗಪ್ಪ, ಕಸಾಪ ಜಿಲ್ಲಾಧ್ಯಕ್ಷರು, ಚಿಕ್ಕಬಳ್ಳಾಪುರ
ಜಿಲ್ಲೆಗೆ ಸಂಬಂಧಿಸಿದಂತೆ ಗೆಜೆಟಿ ಯರ್ ರಚನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿ ಗೆಜೆಟಿಯರ್ ಸಿದ್ಧಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
●ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ