ಹುಬ್ಬಳ್ಳಿ: ಕೋವಿಡ್-19 ಕಾರಣದಿಂದಾಗಿ ರಾಜ್ಯ ಸರಕಾರ ತರಾತುರಿಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸದೇ ಶಿಕ್ಷಣ ತಜ್ಞರ ಸಲಹಾ ಸಮಿತಿ ರಚನೆ ಮಾಡಿ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ| ಆರ್.ಎಂ. ಕುಬೇರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ತಜ್ಞರ ಸಭೆ ಕರೆಯಬೇಕು. ಅರ್ಹ ವ್ಯಕ್ತಿಗಳ ಸಲಹಾ ಸಮಿತಿ ಮಾಡಬೇಕು. ರಾಜ್ಯ ಸರಕಾರ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಗೊಂದಲ ಮೂಡಿಸುತ್ತಿದೆ. ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹೋಗಬೇಕೆಂದು ಆದೇಶ ನೀಡಿರುವುದು ಸೂಕ್ತವಲ್ಲ. ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವನ್ನು ಶಿಕ್ಷಕರಿಗೆ ವಹಿಸುವ ಮೂಲಕ ಶಿಕ್ಷಕರನ್ನು ಪಾಲಕರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ತರಾತುರಿಯಲ್ಲಿ ಶಾಲೆಗಳನ್ನು ತೆರೆಯಲು ಮುಂದಾಗಿರುವುದನ್ನು ನೋಡಿದರೆ ಖಾಸಗಿ ಶಾಲೆಗಳ ಲಾಬಿಗೆ ಸರಕಾರ ಮಣಿದಂತೆ ಕಾಣುತ್ತಿದೆ. ಮಕ್ಕಳಿಗೆ ಕೋವಿಡ್-19 ಬಂದರೆ ಯಾರು ಜವಾಬ್ದಾರರಾಗುತ್ತಾರೆ. ಸರಕಾರ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಪಠ್ಯ ಜಾರಿಗೊಳಿಸುತ್ತಿದೆ. ಏಕರೂಪದ ಕೋರ್ಸ್ ವಿನ್ಯಾಸಗೊಳಿಸಲು ಮುಂದಾಗಿರುವುದು ಸರಿಯಲ್ಲ. ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ಬೇಡಿಕೆಗೆ ಅನುಗುಣವಾಗಿ ಕೋರ್ಸ್‌ಗಳನ್ನು ರೂಪಿಸಲಾಗುತ್ತದೆ. ಆದರೆ ಏಕರೂಪದ ಕೋರ್ಸ್ ಗಳನ್ನು ಮಾಡುವುದರಿಂದ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ 4 ಕ್ಷೇತ್ರಗಳ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣದ ನಂತರ ಇನ್ನೊಂದು ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹನುಮಂತಗೌಡ ಕಲ್ಮನಿ, ಪ್ರಕಾಶ ಹಳ್ಯಾಳ ಇದ್ದರು.
ಪ್ರಚಾರಕ್ಕೆ ಕೋವಿಡ್ ಅಡ್ಡಿ : ಕೋವಿಡ್-19 ಕಾರಣದಿಂದಾಗಿ ಚುನಾವಣಾ ಪ್ರಚಾರಕ್ಕೆ ತೊಂದರೆಯಾಗುತ್ತಿದೆ. ಪದವೀಧರರನ್ನು ಒಂದೆಡೆ ಸೇರಿಸಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ನಾನು ಹಾಗೂ ಕೆಲ ಮುಖಂಡರು ಬೇರೆ ಬೇರೆ ಊರುಗಳಿಗೆ ಚುನಾವಣಾ ಪ್ರಚಾರಕ್ಕಾಗಿ ಓಡಾಡುತ್ತಿರುವುದರಿಂದ ಸಭೆ ಕರೆದರೆ ಬರಲು ಹಿಂಜರಿಯುತ್ತಾರೆ. ಸ್ಥಳೀಯ ಮುಖಂಡರಿಗೆ ಪ್ರಚಾರದ ಜವಾಬ್ದಾರಿ ವಹಿಸಿಕೊಡಲಾಗಿದೆ. ಸಾಧ್ಯವಾದೆಡೆ ಸಾಮಾಜಿಕ ಅಂತರದೊಂದಿಗೆ ಸಭೆ ನಡೆಸುತ್ತಿದ್ದೇವೆ ಎಂದು ಡಾ| ಆರ್.ಎಂ. ಕುಬೇರಪ್ಪ ತಿಳಿಸಿದರು.