ವಿಧಾನ ಪರಿಷತ್ತು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರ ನೇಮಕದಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ವಾರದಲ್ಲಿ ಹಿರಿಯ ಅಧಿಕಾರಿ ನೇತೃತ್ವದ ಸಮಿತಿ ರಚಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಜೆಡಿಎಸ್‌ನ ಆರ್.ಚೌಡರೆಡ್ಡಿ ತೂಪಲ್ಲಿ ಪ್ರಶ್ನೆಗೆ ಉತ್ತರಿಸಿ, ಕಾನೂನಿನಲ್ಲಿ ಅವಕಾಶವಿದ್ದರೆ ನೇಮಕಾತಿ ಆದೇಶವನ್ನು ತಡೆಹಿಡಿಯಲು ಪ್ರಯತ್ನಿಸಲಾಗುವುದು. ದಕ್ಷ ಅಧಿಕಾರಿಯ ನೇತೃತ್ವದಲ್ಲಿ ಸಮಿತಿ ರಚಿಸಿ ಅಭ್ಯರ್ಥಿಗಳಿಂದಲೂ ಅಹವಾಲು ಆಲಿಸಿ, ಸೂಕ್ತ ದಾಖಲೆಗಳನ್ನು ಸರ್ಕಾರದಿಂದಲೂ ಒದಗಿಸಲು ಪ್ರಯತ್ನಿಸಲಾಗುವುದು. ಒಟ್ಟಾರೆ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅನುಮಾನ ಬೇಡ ಎಂದು ಹೇಳಿದರು.
ಅಂಕ ಪ್ರಕಟಿಸಿಲ್ಲ: ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ದೂರು ನೀಡಿದ್ದಾರೆ. ಕೃಷಿ ವಿವಿಯು ಅಂಕ ವಿವರವನ್ನೂ ಪ್ರಕಟಿಸಿಲ್ಲ. ಕುಲಪತಿಗಳ ಅಧಿಕಾರಾವಧಿ ಪೂರ್ಣಗೊಳ್ಳುವ ಅಂಚಿನಲ್ಲಿದ್ದಾಗ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬಾರದು ಎಂಬ ನಿಯಮವಿದೆ. ಆದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ರಾಜ್ಯಪಾಲರು ಕಳೆದ ಜನವರಿಯಲ್ಲಿ ಸಹಜವಾಗಿ ಹೊರಡಿಸಿದ ಆದೇಶವನ್ನು ಆಧಾರವಾಗಿಟ್ಟುಕೊಂಡು ನೇಮಕಾತಿ ನಡೆಸಲಾಗಿದೆ ಎಂದು ಹೇಳಿದರು.
ವಿವಿಗಳ ಉತ್ತಮ ಕಾರ್ಯ ನಿರ್ವಹಣೆಗೆ ಸ್ವಾಯತ್ತತೆ ನೀಡಲಾಗಿದೆ. ಆದರೆ ಇದು ಮೂಲ ಉದ್ದೇಶ ಪಾಲನೆಗಿಂತ ಇತರೆ ಕಾರ್ಯಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಅಕ್ರಮ ನಡೆದಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾದರೆ ಮುಂದೆ ಸೂಕ್ತ ಕ್ರಮ ಜರುಗಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.
107 ಹುದ್ದೆ ಅಕ್ರಮ: ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಚೌಡರೆಡ್ಡಿ ತೂಪಲ್ಲಿ, ಸರ್ಕಾರ 49 ಹುದ್ದೆ ನೇಮಕಕ್ಕೆ ಅನುಮತಿ ನೀಡಿದ್ದರೆ ವಿ.ವಿ.ಯು 107 ಹುದ್ದೆಗಳನ್ನು ಅಕ್ರಮವಾಗಿ ನೇಮಕ ಮಾಡಿದೆ. ಕುಲಪತಿಗಳ ಅಧಿಕಾರಾವಧಿ 6 ತಿಂಗಳು ಬಾಕಿ ಇರುವಾಗ ಯಾವುದೇ ನೇಮಕಾತಿ ಮಾಡಬಾರದು ಎಂಬುದಾಗಿ ರಾಜ್ಯಪಾಲರ ಆದೇಶ ಉಲ್ಲಂಘನೆ ಆಗಿರುವುದು ಖಂಡನೀಯ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕುಲಪತಿಗಳು ನಿವೃತ್ತಿಯಾಗುವ ಮುನ್ನ ಲೂಟಿ ಮಾಡಿಕೊಂಡು ಹೋಗಿದ್ದಾರೆ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೂಡಲೇ ನೇಮಕವನ್ನು ರದ್ದುಪಡಿಸಿ ಎಂದು ಒತ್ತಾಯಿಸಿದರು. ಜೆಡಿಎಸ್‌ನ ಬಸವರಾಜ ಹೊರಟ್ಟಿ ಮಾತನಾಡಿ, ನಿಯಮಬಾಹಿರವಾಗಿ ನೇಮಕ ನಡೆಸಿರುವುದು ಹಾಗೂ ಮುಖ್ಯಮಂತ್ರಿಗಳು, ಸಚಿವರ ಸೂಚನೆಯನ್ನೂ ಪಾಲಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.