ಬೆಂಗಳೂರು: ದಿನದಿಂದ ದಿನಕ್ಕೆ ತನ್ನ ಚುನಾವಣ ತಯಾರಿಯನ್ನು ಗಟ್ಟಿಗೊಳಿಸುತ್ತಿರುವ ಬಿಜೆಪಿ ಚುನಾವಣ ನಿರ್ವಹಣೆಗಾಗಿ ಒಟ್ಟು 32 ಸಮಿತಿಗಳನ್ನು ರಚನೆ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣ ನಿರ್ವಹಣ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಚುನಾವಣ ಸಿದ್ಧತೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣೆಗೆ ಸಂಬಂಧಪಟ್ಟಂತೆ ಹಲವು ಮಾರ್ಗದರ್ಶನ ನೀಡಿದ್ದಾರೆ. ಒಟ್ಟು 32 ಸಮಿತಿಗಳನ್ನು ಮಾಡಲಾಗಿದೆ. ಈ ಹಿಂದೆ ಚುನಾವಣೆ ನಡೆದ ರಾಜ್ಯಗಳಲ್ಲಿ ನಡೆದ ಪ್ರಯೋಗಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಚುನಾವಣೆ ಮುಗಿಯುವವರೆಗೂ ಈ ಸಮಿತಿ ಕೆಲಸ ಮಾಡುತ್ತದೆ. ಕರಪತ್ರದ ಮೂಲಕ ಕೇಂದ್ರ ಹಾಗೂ ರಾಜ ಸರಕಾರದ ಸಾಧನೆಗಳನ್ನು ಮನೆಮನೆಗೆ ತೆರಳಿ ಮಾಹಿತಿ ನೀಡುತ್ತೇವೆ ಎಂದರು.