Advertisement
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ ನೂರಾರು ರೈತರು, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಘಟಕ ನಿರ್ಮಾಣ ಮಾಡಲು ಫಲವತ್ತಾದ ಜಮೀನು ಕಸಿದುಕೊಳ್ಳುವುದು ಯಾವ ನ್ಯಾಯ. ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟು ಕೊಡುವುದಿಲ್ಲ. ಇಂಥ ಅಭಿವೃದ್ಧಿ ಕಾರ್ಯಗಳಿಗೆ ಬರಡು ಭೂಮಿ ಬಳಸಿಕೊಳ್ಳುವುದರ ಬದಲು ಇಂಥ ಬಂಗಾರದ ಭೂಮಿಗೆ ಕೈ ಹಾಕುವುದು ಸರಿಯಲ್ಲ ಎಂದು ಆರೋಪಿಸಿದರು.
Related Articles
Advertisement
ಜನೆವರಿ 2019ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯದಂತೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪೊಲೀಸರ ಗೂಂಡಾ ವರ್ತನೆಯನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತ ರೈತರ ಫಲವತ್ತಾದ ಜಮೀನಿನ ಮೇಲೆ ಜೆಸಿಬಿ ಹತ್ತಿಸಿ ಬೆಳೆ ನಾಶ ಮಾಡಿ ಭೂಮಿ ಕಬಳಸಿಕೊಳ್ಳಲಾಗುತ್ತಿದೆ. ಇದರಿಂದ ರೈತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ದೂರಿದರು.
ಈ ರೀತಿ ಬೇಜವಾಬ್ದಾರಿ ಹಾಗೂ ಅವೈಜ್ಞಾನಿಕವಾಗಿ ಭೂಮಿ ಕಬಳಿಸಿಕೊಳ್ಳುತ್ತಿರುವ ಜಿಲ್ಲಾಡಳಿತ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಇಂಥ ವಿನಾಶಕಾರಿ ಕೃತ್ಯದಿಂದ ರೈತರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ. ಈ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರಾದ ಪ್ರಕಾಶ ನಾಯಕ, ಸಂಜು ಹುಡೇದ, ಸುಕುಮಾರ ಹುಡೇದ ಹುಸೇನ ಇಮ್ಮನ್ನವರ ಸೇರಿದಂತೆ ಇತರರು ಇದ್ದರು.