Advertisement

ರೈತರ ಕೋಪಕ್ಕೆ ದಿಲ್ಲಿ ತಲ್ಲಣ

10:07 AM Oct 03, 2018 | Team Udayavani |

ಹೊಸದಿಲ್ಲಿ: ಸಂಪೂರ್ಣ ಸಾಲ ಮನ್ನಾ, ರೈತ ಸ್ನೇಹಿ ಬೆಳೆ ವಿಮೆ, ಉಚಿತ ವಿದ್ಯುತ್‌, ಸ್ವಾಮಿನಾಥನ್‌ ವರದಿ ಜಾರಿಗೆ ಆಗ್ರಹ ಸೇರಿದಂತೆ 11 ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಿಸಾನ್‌ ಕ್ರಾಂತಿ ಯಾತ್ರಾ ದಿಲ್ಲಿ ಗಡಿ ಮುಟ್ಟಿದ್ದು, ಪೊಲೀಸರು ರಾಜಧಾನಿ ಪ್ರವೇಶಿಸದಂತೆ ತಡೆದಿದ್ದಾರೆ. ಈ ಮಧ್ಯೆ ಪ್ರತಿಭಟನಾನಿರತರೊಂದಿಗೆ ಕೇಂದ್ರ ಸರಕಾರ ಮಾತುಕತೆ ನಡೆಸಿದ್ದು 7 ಬೇಡಿಕೆಗಳ ಈಡೇರಿಕೆಗೆ ಒಪ್ಪಿದೆ. ಆದರೆ, ಇದನ್ನು ನಿರಾಕರಿಸಿರುವ ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ. 

Advertisement

ದಿಲ್ಲಿ-ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರು ಮತ್ತು ರೈತರ ನಡುವೆ ಭಾರೀ ಘರ್ಷಣೆಯುಂಟಾಗಿದೆ. ರೈತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮತ್ತು ನೀರಿನ ಜಲಫಿರಂಗಿಯನ್ನು ಬಳಕೆ ಮಾಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವಿಪಕ್ಷಗಳ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸೆ. 23ರಂದು ಕಿಸಾನ್‌ ಕ್ರಾಂತಿ ಯಾತ್ರೆ ಹರಿದ್ವಾರದ ಟಿಕಾಯ್‌ ಘಾಟ್‌ನಲ್ಲಿ ಆರಂಭವಾಗಿತ್ತು. ಇವರು ದಿಲ್ಲಿಯಲ್ಲಿರುವ ಚೌಧರಿ ಚರಣ್‌ ಸಿಂಗ್‌ ಅವರ ಸಮಾಧಿ ಸ್ಥಳವಾದ ಕಿಸಾನ್‌ ಘಾಟ್‌ ವರೆಗೆ ಯಾತ್ರೆ ನಡೆಸಲು ಉದ್ದೇಶಿಸಿದ್ದರು. ಅಂತೆಯೇ ಮಂಗಳವಾರ ಬೆಳಗ್ಗೆ ದಿಲ್ಲಿ-ಉತ್ತರ ಪ್ರದೇಶ ಗಡಿಗೆ ಬಂದಾಗ, ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಸರಿಸುಮಾರು 70 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಉದ್ರಿಕ್ತಗೊಂಡ ರೈತರು ಬ್ಯಾರಿಕೇಡ್‌ಗಳನ್ನು ಧ್ವಂಸ ಮಾಡಿ ತಾವು ಬಂದಿದ್ದ ಟ್ರ್ಯಾಕ್ಟರ್‌ಗಳನ್ನು ನುಗ್ಗಿಸಿದ್ದಾರೆ. ಇವರನ್ನು ಚದುರಿಸುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮತ್ತು ಜಲಫಿರಂಗಿಗಳನ್ನು ಬಳಕೆ ಮಾಡಿದ್ದಾರೆ. ಘರ್ಷಣೆ ವೇಳೆ 7 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಕೇಂದ್ರದಿಂದ ಮಾತುಕತೆ: ಪ್ರತಿಭಟನಾನಿರತ ರೈತರ ಜತೆ ಕೇಂದ್ರ ಸರಕಾರ ಮಾತುಕತೆ ನಡೆಸಿದೆ. ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು, ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಮತ್ತು ಸಹಾಯಕ ಕೃಷಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ಜತೆ ಚರ್ಚಿಸಿದ್ದಾರೆ. ಬಳಿಕ ಪ್ರತಿಭಟನಾಕಾರರ ಬಳಿಗೆ ಶೇಖಾವತ್‌ ಅವರನ್ನು ಕಳುಹಿಸಿ ಸಂಧಾನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ರೈತರ 11 ಬೇಡಿಕೆಗಳ ಪೈಕಿ 7ಕ್ಕೆ ಒಪ್ಪಿಗೆ ನೀಡಿದೆ. ಆದರೆ, ಉಳಿದ ನಾಲ್ಕಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಈ ಸಂಧಾನ ಮುರಿದುಬಿದ್ದಿದೆ. 

ವಿಪಕ್ಷಗಳಿಂದ ಆಕ್ರೋಶ : ರೈತರ ವಿರುದ್ಧ ಜಲಫಿರಂಗಿ, ಅಶ್ರುವಾಯು ಪ್ರಯೋಗ ಮತ್ತು ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರ ಕ್ರಮದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ರೈತರು ತಮ್ಮ ಕಷ್ಟ ಹೇಳಿಕೊಳ್ಳಲು ದಿಲ್ಲಿಗೆ ಬರಲೂ ಕೇಂದ್ರ ಸರಕಾರ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ರೈತರು ದಿಲ್ಲಿಗೆ ಬರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ  ಕೇಜ್ರಿವಾಲ್‌ ಹೇಳಿದ್ದಾರೆ. ಎಡಪಕ್ಷಗಳು, ಎಸ್‌ಪಿ ಸೇರಿದಂತೆ ಹಲವಾರು ಪಕ್ಷಗಳು ರೈತರಿಗೆ ಬೆಂಬಲ ಸೂಚಿಸಿವೆ. ಈ ಮಧ್ಯೆ ರೈತರನ್ನು ಚದುರಿಸಲು ಹೆಚ್ಚು ಪಡೆ ಬಳಕೆ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

Advertisement

ಕಿಸಾನ್‌ ಘಾಟ್‌ಗೆ ಪ್ರವೇಶ? ಕೇಂದ್ರ ಸರಕಾರದ ಜತೆಗಿನ ಮಾತುಕತೆ ವಿಫ‌ಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವ ರೈತರು, ಬುಧವಾರ ಕಿಸಾನ್‌ ಘಾಟ್‌ಗೆ ತೆರಳಲು ಚಿಂತನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸದಿರಲು ಅವರು ನಿರ್ಧರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next