Advertisement
ಹಾನಗಲ್ಲ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್‌ಗೂ ಅಧಿಕ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಇದರಲ್ಲಿ ಮಾವು ಚಿಕ್ಕು, ಅಡಕೆ, ತೆಂಗು, ತರಕಾರಿಗಳು ಇಲ್ಲಿನ ವಿಶೇಷತೆಗಳಾಗಿವೆ. ಹಣ್ಣಿನ ಗಿಡ ಬೆಳೆಯಲು ಅತ್ಯಂತ ಸೂಕ್ತ ಭೂ ಪ್ರದೇಶ ಇದಾಗಿದೆ. ಹೀಗಾಗಿಯೇ ಇಲ್ಲಿನ ಮಾವು ದೇಶ-ವಿದೇಶಗಳಿಗೆ ರಫ್ತು ಆಗುತ್ತಿದೆ. ಈಗ ಮಳೆಯ ಕೊರತೆ ಹಾಗೂ ಫಸಲು ಬಾರದೇ ಬೇಸತ್ತು ರೈತ ಮಾವು ಬೆಳೆಯುವುದರಿಂದಲೇ ದೂರ ಸರಿಯುವ ಚಿಂತನೆಯಲ್ಲಿ ತೊಡಗಿದ್ದಾನೆ.
Related Articles
Advertisement
ಅಡಕೆ ತಿಗಣಿ ರೋಗಕ್ಕೆ ತುತ್ತಾಗುತ್ತಿದೆ. ಬೂದು ರೋಗ ಹಿಡಿಯುತ್ತಿದೆ. ಹಿಡಿ ಮುಂಡಿಗೆ ರೋಗ ಕಾಡುತ್ತಿದೆ. ಇದಕ್ಕೆಲ್ಲ ಅತೀವ ಉಷ್ಣಾಂಶವೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಚಿಕ್ಕು ಹೂ ಕಚ್ಚುತ್ತಿಲ್ಲ. ಫಸಲು ಇಲ್ಲ. ಇದಕ್ಕೆಲ್ಲ ಕಾರಣ ಮಳೆ ಇಲ್ಲದಿರುವುದು. 3 ವರ್ಷದಿಂದ ಚಿಕ್ಕು ಬೆಳೆಯುವ ರೈತ ತೀರ ಸಂಕಷ್ಟದಲ್ಲಿದ್ದಾನೆ.
ತೋಟಗಾರಿಕೆ ಇಲಾಖೆ ನೀಡುವ ಯೋಜನೆಗಳು ಸಣ್ಣ ರೈತರಿಗೆ ಸೀಮಿತವಾಗಿವೆ. ಆದರೆ ನಿಜವಾದ ಆಸಕ್ತ ರೈತರಿಗೆ ಸೌಲಭ್ಯಗಳ ಕೊರತೆ ಇದೆ. ಬಿಪಿಎಲ್ ಕಾರ್ಡ್ ಹೊಂದಿದ ರೈತರಿಗೆ ನೀಡುವ ಸೌಲಭ್ಯಗಳು ಇತರೆ ರೈತರಿಗೂ ದೊರೆಯುವಂತಾದರೆ ಹಾನಗಲ್ಲ ತಾಲೂಕಿನಲ್ಲೂ ಉತ್ತಮ ತೋಟಗಾರಿಕೆ ಅಭಿವೃದ್ಧಿ ಸಾಧ್ಯ ಎನ್ನಲಾಗಿದೆ. ತೋಟಗಾರಿಕೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಆದರೆ ಇದಕ್ಕೆ ಕಾನೂನು ತೊಡಕುಗಳಿರುವುರಿಂದ ಎಲ್ಲ ರೈತರು ಇದರ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ರೈತರದ್ದಾಗಿದೆ. ಮಾವು ಪುನಃಶ್ಚೇತನ ಕಾರ್ಯಕ್ಕೆ ಹಲವಾರು ವರ್ಷಗಳಿಂದ ಸಹಾಯಧನಕ್ಕಾಗಿ ರೈತರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ ಇದು ಕೇವಲ ಸಣ್ಣ ಹಿಡುವಳಿದಾರರಿಗೆ ಸೀಮಿತವಾಗಿ ಉಳಿದ ರೈತರು ಕೈ ಹಿಸುಕಿಕೊಳ್ಳುವಂತಾಗಿದೆ.
ಏನೇ ಆದರೂ ಹಾನಗಲ್ಲ ತಾಲೂಕಿನ ಕೃಷಿ ಭೂಮಿ ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದ ಭೂಮಿ ಎಂಬ ವಾಸ್ತವ ತೋಟಗಾರಿಕೆ ಇಲಾಖೆಗೆ ಗೊತ್ತಿದ್ದರೂ ಇದನ್ನು ಅಭಿವೃದ್ಧಿ ಪಡಿಸುವಲ್ಲಿ ಅನುದಾನ ಕೊರತೆ ಕಾರಣವಾಗಿ ಹಿನ್ನಡೆಯಾಗುತ್ತಿದೆ. ಹಾನಗಲ್ಲ ತಾಲೂಕಿನಲ್ಲಿರುವ ಏಳು ನೂರಕ್ಕೂ ಅಧಿಕವಾಗಿರುವ ಕೆರೆಗಳನ್ನು ತುಂಬಿಸುವ ಯೋಜನೆ ಸಫಲವಾದರೆ ಇಡೀ ತಾಲೂಕಿನ ರೈತ ಸಮೃದ್ಧ-ಸಂತಸದ ರೈತನಾಗಬಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ಸರಕಾರ ಕೈ ಜೋಡಿಸಬೇಕಷ್ಟೆ.
•ರವಿ ಲಕ್ಷ್ಮೇಶ್ವರ