Advertisement

ವಿದೇಶಗಳಿಂದ ಭಾರತಕ್ಕೆ ನೆರವಿನ ಮಹಾಪೂರ

01:04 AM Apr 30, 2021 | Team Udayavani |

ಭಾರತ ಕೋವಿಡ್‌ನ‌ ಎರಡನೇ ಅಲೆಗೆ ತತ್ತರಿಸಿದೆ. ಕಳೆದ ವರ್ಷವೇ ಕೋವಿಡ್‌ ಸೋಂಕು ಕಾಲಿಟ್ಟಿದ್ದರೂ ತಕ್ಕ ಮಟ್ಟಿಗೆ ಹತೋಟಿಯಲ್ಲಿತ್ತು. ಆದರೆ ಇದೀಗ ಎರಡನೇ ಅಲೆಯ ತೀವ್ರತೆಗೆ ಸರಕಾರಕ್ಕೆ ಲಸಿಕೆ ಮತ್ತು ಆಕ್ಸಿಜನ್‌ ಅನ್ನು ಬೇಡಿಕೆಗೆ ಅನುಸಾರವಾಗಿ ಪೂರೈಸಲು ಆಗುತ್ತಿಲ್ಲ. ಇದರಿಂದ ಸೋಂಕುಪೀಡಿತರ ಚಿಕಿತ್ಸೆಗೆ ತೀವ್ರ ಹಿನ್ನಡೆಯಾಗಿದೆ. ಭಾರತದಲ್ಲಿ ಆಮ್ಲಜನಕ, ವೆಂಟಿಲೇಟರ್‌, ಸರ್ಜರಿ ಮಾಸ್ಕ್ ಸಹಿತ ಅನೇಕ ಅಗತ್ಯ ವಸ್ತುಗಳ ಕೊರತೆಯೂ ಎದುರಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ನೆರವಿನ ಮಹಾಪೂರವೇ ಹರಿದುಬಂದಿದೆ. ಅಮೆರಿಕ, ಜರ್ಮನ್‌, ಥಾಯ್ಲೆಂಡ್‌, ಫ್ರಾನ್ಸ್‌, ಸೌದಿ, ಸಿಂಗಾಪುರ, ರಷ್ಯಾ ಮತ್ತು ದುಬಾೖ ಸಹಿತ ಹಲವು ದೇಶಗಳು ಭಾರತಕ್ಕೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಮೂಲಸೌಕರ್ಯ ವಸ್ತುಗಳನ್ನು ಪೂರೈಸಿವೆ, ಇಲ್ಲವೇ ಪೂರೈಸಲು ಮುಂದಾಗಿವೆ. ಯಾವ್ಯಾವ ದೇಶಗಳು ಭಾರತದ ನೆರವಿಗೆ ಧಾವಿಸಿ ಬಂದಿವೆ ಎಂಬ ಮಾಹಿತಿ ಇಲ್ಲಿದೆ.

Advertisement

ಇಂಗ್ಲೆಂಡ್‌ :

ಇಂಗ್ಲೆಂಡ್‌ ಭಾರತಕ್ಕೆ ಈ ವಾರ 495 ಆಮ್ಲಜನಕ ಟ್ಯಾಂಕರ್‌ಗಳು, 120 ವೆಂಟಿಲೇಟರ್‌ಗಳು ಮತ್ತು 20 ಹ್ಯಾಂಡ್‌ ವೆಂಟಿಲೇಟರ್‌ಗಳನ್ನು ಕಳುಹಿಸುವುದಾಗಿ ಹೇಳಿದೆ. ಈ ಪೈಕಿ 100 ವೆಂಟಿಲೇಟರ್‌ಗಳು ಮತ್ತು 95 ಆಮ್ಲಜನಕ ಸಾಂದ್ರಕಗಳು ಈಗಾಗಲೇ ತಲುಪಿವೆ.

ಫ್ರಾನ್ಸ್‌  :

ನಮ್ಮ ಮಿತ್ರ ರಾಷ್ಟ್ರ ಫ್ರಾನ್ಸ್‌ ಗೆಳೆಯನ ನೆರವಿಗೆ ಧಾವಿಸಿ ಬಂದಿದೆ. ಎರಡು ಹಂತಗಳಲ್ಲಿ ನಮ್ಮಿಂದ ಸಾಧ್ಯವಾಗುವ ನೆರವನ್ನು ಕಳುಹಿಸು ವುದಾಗಿ ಹೇಳಿದ್ದು ಮೊದಲ ಹಂತದ ಕೊಡುಗೆ ಈ ವಾರ ತಲುಪಲಿದೆ. ಇದರಲ್ಲಿ ಆಮ್ಲಜನಕ ಉತ್ಪಾದಿಸುವ ಎಂಟು ದೊಡ್ಡ ಪ್ಲಾಂಟ್‌ಗಳು, ದ್ರವರೂಪದ (ಲಿಕ್ವಿಡ್‌) ಆಮ್ಲಜನಕ, 28 ವೆಂಟಿಲೇಟರ್‌ಗಳು, ಅವುಗಳ ತಯಾರಿಕ ವಸ್ತುಗಳು ಮತ್ತು 200 ವಿದ್ಯುತ್‌ ಸಿರಿಂಜ್‌ ಫ‌ುಶರ್‌ಗಳನ್ನು ಕಳುಹಿಸುವುದಾಗಿ ತಿಳಿಸಿದೆ. ಮುಂದಿನ ವಾರ ಎರಡನೇ ಹಂತದಲ್ಲಿ ಐದು ಲಿಕ್ವಿಡ್‌ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಕಳುಹಿಸುವುದಾಗಿ ಹೇಳಿದೆ.

Advertisement

ಐರ್ಲೆಂಡ್‌ :

ಭಾರತೀಯ ಸಮುದಾಯದವರು ಅಧಿಕ ಪ್ರಮಾಣದಲ್ಲಿರುವ ಐರ್ಲೆಂಡ್‌ ದೇಶವು ಭಾರತದ ಪರಿಸ್ಥಿತಿಯನ್ನು ಸೂಕ್ಷ ವಾಗಿ ಗಮನಿಸುತ್ತಿದೆ. ಐರ್ಲೆಂಡ್‌ 700 ಆಮ್ಲಜನಕ ಟ್ಯಾಂಕರ್‌ಗಳನ್ನು ಕಳುಹಿಸ ಲಿದೆ. ಇದು ಈ ವಾರ ಭಾರತಕ್ಕೆ ಬರಲಿದೆ.

ಜರ್ಮನಿ  :

ಜರ್ಮನಿ ಭಾರತದ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನೆರವಾಗುವುದಾಗಿ ಹೇಳಿದೆ. ಇದರಡಿಯಲ್ಲಿ ಮೊಬೈಲ್‌ ಆಮ್ಲಜನಕ ಉತ್ಪಾದನ ಘಟಕಗಳು (ಮೊಬೈಲ್‌ ಆಕ್ಸಿಜನ್‌ ಮ್ಯಾನುಫ್ಯಾಕ್ಚರಿಂಗ್‌ ಪ್ಲಾಂಟ್‌), 120 ವೆಂಟಿಲೇಟರ್‌ಗಳು, 80 ದಶಲಕ್ಷಕ್ಕೂ ಹೆಚ್ಚಿನ ಕೆಎನ್‌ 95 ಮಾಸ್ಕ್ಗಳನ್ನು ಕಳುಹಿಸುವುದಾಗಿ ಚಾನ್ಸಲರ್‌ ಏಂಜೆಲಾ ಮಾರ್ಕೆಲ್‌ ಘೋಷಿಸಿದ್ದಾರೆ.

ಸೌದಿ ಅರೇಬಿಯಾ :

ಸೌದಿ ಅರೇಬಿಯಾ 80 ಮೆಟ್ರಿಕ್‌ ಟನ್‌ ದ್ರವ ರೂಪದ ಆಮ್ಲಜನಕವನ್ನು ಕಳುಹಿ ಸಿದ್ದು, ಸಾಗರ ಮಾರ್ಗದ ಮೂಲಕ ಭಾರತಕ್ಕೆ ಬಂದಿದೆ. ದುಬಾೖಯಿಂದ 6 ಮೆಡಿಕಲ್‌ ಆಕ್ಸಿಜನ್‌ ಟ್ಯಾಂಕರ್‌ಗಳನ್ನು ಭಾರತೀಯ ವಾಯುಪಡೆಯ ವಿಮಾನದಲ್ಲಿ ಏರ್‌ಲಿಫ್ಟ್ ಮಾಡಲಾಗಿದೆ.

ಆಸ್ಟ್ರೇಲಿಯಾ :

ದ್ವೀಪ ರಾಷ್ಟ್ರ ಆಸ್ಟ್ರೇಲಿಯಾ ಕೂಡ ಭಾರತದ ಸ್ಥಿತಿಗೆ ಮಮ್ಮಲ ಮರು ಗಿದೆ. ಈ ಸಂದರ್ಭ ತಾನು ಏನಾ ದರೂ ಸಹಾಯ ಮಾಡುವುದಾಗಿ ಹೇಳಿರುವ ಆಸ್ಟೇಲಿಯಾ 500 ವೆಂಟಿಲೇ ಟರ್‌ಗಳು, ಒಂದು ಮಿಲಿಯನ್‌ ಸರ್ಜಿಕಲ್‌ ಮಾಸ್ಕ್, 5,00,000 ಪಿ 2 ಮತ್ತು ಎನ್‌ 95 ಮುಖವಾಡಗಳು, 1 ಲಕ್ಷ ಸೋಂಕು ನಿರೋಧಕ ಕನ್ನಡಕಗಳು, 1 ಲಕ್ಷ ಜೋಡಿ ಕೈಗವಸುಗಳು ಮತ್ತು 20 ಸಾವಿರ ಫೇಸ್‌ ಮಾಸ್ಕ್ಗಳನ್ನು ಕಳುಹಿಸುವುದಾಗಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪ್ರಕಟಿಸಿದ್ದಾರೆ.

ಸಿಂಗಾಪುರ, ಹಾಂಕಾಂಗ್‌: ಸಿಂಗಾಪುರವು 500 ಬೈಪಿಎಪಿಗಳು, 250 ಆಮ್ಲಜನಕ ಟ್ಯಾಂಕರ್‌ಗಳು, ನಾಲ್ಕು ಕ್ರಯೋಜೆನಿಕ್‌ ಆಕ್ಸಿಜನ್‌ ಕಂಟೇನರ್‌ಗಳು ಮತ್ತು ಇತರ ವೈದ್ಯ ಕೀಯ ಉಪಕರಣಗಳನ್ನು ಕಳುಹಿಸಿಕೊ ಡುವ ಭರವಸೆ ನೀಡಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಿಂದ ನಾಲ್ಕು ಕ್ರಯೋಜೆನಿಕ್‌ ಆಮ್ಲಜನಕ ಟ್ಯಾಂಕರ್‌ಗಳನ್ನು ಭಾರತೀಯ ವಾಯು ಪಡೆಯ ಸಿ -17 ವಿಮಾನ ಈಗಾಗಲೇ ಹೊತ್ತು ತಂದಿದೆ. ಇನ್ನು ಹಾಂಕಾಂಗ್‌ 800 ಆಮ್ಲಜನಕ ಟ್ಯಾಂಕರ್‌ಗಳನ್ನು ಭಾರತಕ್ಕೆ ಕಳುಹಿಸಿಕೊಡುವುದಾಗಿ ಹೇಳಿದೆ.

ಪಾಕಿಸ್ಥಾನ: ನೆರೆಯ ರಾಷ್ಟ್ರ ಪಾಕಿಸ್ಥಾನ ಕೂಡ ಭಾರತಕ್ಕೆ ನೆರವು ನೀಡಲು ಮುಂದಾಗಿದೆ. ವೆಂಟಿಲೇಟರ್‌ಗಳು, ಬೈ-ಪಿಎಪಿ, ಡಿಜಿಟಲ್‌ ಎಕ್ಸ್‌ರೇ ಯಂತ್ರಗಳು, ಪಿಪಿಇಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ನೀಡು ವುದಾಗಿ ತಿಳಿಸಿದೆ. ಆದರೆ ಈ ಪ್ರಸ್ತಾವಕ್ಕೆ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ. ಪಾಕಿಸ್ಥಾ ನದ ಎದಿ ಫೌಂಡೇಶನ್‌ ಭಾರತದ ನೆರವಿಗೆ ನಿಲ್ಲುತ್ತೇನೆ ಎಂದು ಹೇಳಿದೆ.

ಚೀನ: 2019ರಲ್ಲಿ ಚೀನದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ ಕಾಣಿಸಿಕೊಂಡಾಗ ವುಹಾನ್‌ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನ ಭಾರತವೇ ಕಳುಹಿಸಿಕೊಟ್ಟಿತ್ತು. ಅಂದು ಭಾರತ ಮಾಡಿದ ಸಹಾಯ ನಮಗೆ ನೆನಪಿದೆ. ನಾವೂ ನಿಮಗೆ ಸಹಾಯ ಮಾಡುವು ದಾಗಿ ಚೀನ ಹೇಳಿದೆ. 25,000 ಆಮ್ಲ ಜನಕ ಕಂಟೇನರ್‌ಗಳನ್ನು ನೀಡಲಾ ಗುವುದು. ಇದಕ್ಕಾಗಿ ಸರಕು ವಿಮಾನ ಗಳನ್ನು ನಿಯೋಜಿಸಲಾಗಿದೆ ಎಂದು ಚೀನ ರಾಯಭಾರಿ ತಿಳಿಸಿದ್ದಾರೆ.

 ಅಮೆರಿಕ :

ಕೋವಿಡ್‌ನಿಂದ ಹೊರಬರುತ್ತಿರುವ ಅಮೆರಿಕ ಆರಂಭದಲ್ಲಿ ಕೋವಿಡ್‌ ಲಸಿಕೆ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಪೂರೈಕೆಗೆ ತಡೆ ಒಡ್ಡಿತ್ತಾದರೂ ಆ ಬಳಿಕ ಇದನ್ನು ಹಿಂಪಡೆದದ್ದೇ ಅಲ್ಲದೆ ಭಾರತಕ್ಕೆ ಅಗತ್ಯವಿರುವ ವೈದ್ಯಕೀಯ ನೆರವು ನೀಡುವುದಾಗಿ ಘೋಷಿಸಿದೆ. ವೆಂಟಿಲೇಟರ್‌ ಮತ್ತು ಲಸಿಕೆಯನ್ನು ತಯಾರಿಸಲು ಅಗತ್ಯವಿರುವ ಕಚ್ಚಾವಸ್ತುಗಳು ಸಹಿತ ಸಾಧ್ಯವಿರುವ ಎಲ್ಲ ನೆರವನ್ನು ಭಾರತಕ್ಕೆ ನೀಡುವುದಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಅಮೆರಿಕ 100 ಮಿಲಿಯನ್‌ ಡಾಲರ್‌ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಭಾರತಕ್ಕೆ ತಲುಪಿಸಲಿದೆ ಎಂದು ಶ್ವೇತಭವನ ಹೇಳಿದೆ. ತುರ್ತು ಆರೋಗ್ಯ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನ ಈಗಾಗಲೇ ಹೊರಟಿದೆ. ಇದರಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳು ಮತ್ತು ನಿಯಂತ್ರಕಗಳು ಸೇರಿವೆ. ಇದನ್ನು ಕ್ಯಾಲಿಫೋರ್ನಿಯಾ ಭಾರತಕ್ಕೆ ನೀಡಿದೆ. 1 ಲಕ್ಷ ಎನ್‌95 ಫೇಸ್‌ ಶೀಲ್ಡ್‌ಗಳು, ಆಮ್ಲಜನಕ ಕಾನ್ಸಂಟ್ರೇಟರ್‌ಗಳು, ಆಮ್ಲಜನಕ ಉತ್ಪಾದನ ಘಟಕಗಳು, ಪಿಪಿಇ ಕಿಟ್‌ ಮೊದಲಾದ ಪರಿಕರಗಳು ಇವುಗಳಲ್ಲಿ ಸೇರಿವೆ.

16 ವರ್ಷಗಳ ಬಳಿಕ ವಿದೇಶಿ ನೆರವು :

ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರವು ವಿದೇಶಿ ಮೂಲಗಳಿಂದ ಸಹಾಯವನ್ನು ಸ್ವೀಕರಿಸದಿರಲು ನಿರ್ಧರಿಸಿತ್ತು. 2004ರ ಸುನಾಮಿ ಅನಂತರ ಯಾವುದೇ ಪ್ರಾಕೃತಿಕ ವಿಕೋಪ, ದುರ್ಘ‌ಟನೆಗಳನ್ನು ಎದುರಿಸಲು ದೇಶ ಸಮರ್ಥವಾಗಿದ್ದು ವಿದೇಶಗಳ ನೆರವು ಪಡೆಯದಿರಲು ಮತ್ತು ಅ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರವೇ ವಿದೇಶಗಳ ನೆರವು ಯಾಚಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಈಗ 16 ವರ್ಷಗಳ ಬಳಿಕ ದೇಶದಲ್ಲಿ ಕೋವಿಡ್‌ನ‌ 2ನೇ ಅಲೆ ವ್ಯಾಪಕವಾಗಿ ಆರೋಗ್ಯ ರಕ್ಷಣೆಯ ಸೌಕರ್ಯಗಳ ಕೊರತೆ ಎದುರಾದಾಗ ಭಾರತ ವಿದೇಶಗಳಿಂದ ನೆರವು ಪಡೆಯಲು ನಿರ್ಧರಿಸಿದೆ.

ಯಾವಾಗೆಲ್ಲ ವಿದೇಶದಿಂದ ನೆರವು? :

1991 ಉತ್ತರಕಾಶಿ ಭೂಕಂಪ

1993 ಲಾತೂರ್‌ ಭೂಕಂಪ

2001 ಗುಜರಾತ್‌ ಭೂಕಂಪ

2002 ಬಂಗಾಲ ಚಂಡಮಾರುತ

2004 ಬಿಹಾರ ಪ್ರವಾಹ

ನೆರವು ನಿರಾಕರಣೆ :

2005ರಲ್ಲಿ ಕಾಶ್ಮೀರ ಭೂಕಂಪ, 2013ರಲ್ಲಿ ಉತ್ತರಾ ಖಂಡ್‌ ಪ್ರವಾಹ, 2014ರಲ್ಲಿ ಕಾಶ್ಮೀರ ಪ್ರವಾಹದ ಸಂದರ್ಭ ಭಾರತ ವಿದೇಶಿ ನೆರವು ನಿರಾಕರಿಸಿದೆ. 2018ರ ಆಗಸ್ಟ್‌ನಲ್ಲಿ  ಕೇರಳ ಭೀಕರವಾದ ಪ್ರವಾಹಕ್ಕೆ ತುತ್ತಾಗಿತ್ತು. ಈ ವೇಳೆ ಅತೀ ಹೆಚ್ಚು ಮಲಯಾಳಿ ಗಳಿರುವ ಯುಎಇ 700 ಕೋ.ರೂ. ಗಳನ್ನು ಪ್ರವಾಹ ಪರಿಹಾರವಾಗಿ ನೀಡಲು ಮುಂದಾಗಿದ್ದನ್ನು ರಾಜ್ಯ ಸರಕಾರ ಹೇಳಿದಾಗ, ಕೇಂದ್ರವು ಯಾವುದೇ ಅಂತಾರಾಷ್ಟ್ರೀಯ ಸಹಾಯವನ್ನು ಸ್ವೀಕರಿಸುವುದಿಲ್ಲ ಎನ್ನುವ ಮೂಲಕ ಇದನ್ನು ನಿರಾಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next