ಹೊಸದಿಲ್ಲಿ: ಭಾರತದ ಒಕ್ಕೂಟ ವ್ಯವಸ್ಥೆಯ ಉತ್ಸಾಹವನ್ನು ಕೇಂದ್ರ ಸರಕಾರ ಮರೆತಿದೆ. ಪ್ರಜಾಪ್ರಭುತ್ವದ ಬಗೆಗಿನ ಬದ್ಧತೆಯನ್ನು ನೆಪಮಾತ್ರಕ್ಕಾದರೂ ತೋರುತ್ತಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ. ಕೊರೊನಾ ಪರಿಸ್ಥಿತಿಯನ್ನು ಕೇಂದ್ರ ಸರಕಾರ ನಿರ್ವಹಿಸಿರುವ ರೀತಿಯ ಬಗ್ಗೆ ಚರ್ಚಿಸಲು 22 ಪ್ರತಿಪಕ್ಷಗಳ ನಾಯಕರು ಶುಕ್ರವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅವರು ಮಾತನಾಡಿದರು. “ಕೋವಿಡ್ ಬಿಕ್ಕಟ್ಟಿನ ಈ ಕಾಲಘಟ್ಟದಲ್ಲಿ ನಮ್ಮ ಜನಸಂಖ್ಯೆಯ ಕೆಳಗಿನ ಅರ್ಧದಷ್ಟು ಜನರಿಗೆ ಆರ್ಥಿಕ ಸಹಾಯವೇ ಇಲ್ಲ ಅರ್ಥ ವ್ಯವಸ್ಥೆಯನ್ನು ಮೇಲೆತ್ತುವ ಉಪಾಯಗಳನ್ನು ಮಾಡಬೇಕೆಂದು ದೇಶದ ಪ್ರತಿಷ್ಠಿತ ಆರ್ಥಿಕ ತಜ್ಞರು ಸಲಹೆ ಕೊಟ್ಟಿದ್ದರೂ, ಅದೆಲ್ಲವನ್ನೂ ನಿರ್ಲಕ್ಷಿಸಿದ ಪ್ರಧಾನಿ ಮೋದಿಯವರು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದರು. ಐದು ದಿನಗಳ ಕಾಲ ವಿತ್ತ ಸಚಿವರು ಅದನ್ನು ಪ್ರಕಟಣೆ ಮಾಡಿದರು’ ಎಂದು ಟೀಕಿಸಿದರು. ಬಿಎಸ್‌ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಾರ್ಟಿಯ ಅಖೀಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿರಲಿಲ್ಲ.