Advertisement

ವೈಮನಸ್ಸು ಮರೆತು ಪಕ್ಷ ಸಂಘಟಿಸಿ: ಕರಡಿ

03:55 PM Aug 13, 2018 | Team Udayavani |

ಸಿಂಧನೂರು: ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ನಿರಾಶೆ ತಂದಿದೆ. ಪಕ್ಷದ ಮುಖಂಡರಲ್ಲಿ ಏನೇ ವೈಮನಸ್ಸು ಇದ್ದರೂ ಅದನ್ನು ಮರೆತು ಪಕ್ಷ ಸಂಘಟನೆ ಮಾಡಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಬೇಕು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

Advertisement

ನಗರಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ತಾಲೂಕು ಘಟಕದಿಂದ ರವಿವಾರ ನಗರದ ಸತ್ಯಾಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷವೆಂದರೇ ಎಲ್ಲ ಮುಖಂಡರು ಸಹೋದರರು ಇದ್ದಂತೆ. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಮರೆತು ಪಕ್ಷ ಸಂಘಟನೆ ಮಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗಳಿಸಿದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕುಗ್ಗಲಿಲ್ಲ. ಅತ್ಯಂತ ಕ್ರಿಯಾಶೀಲರಾಗಿ ರಾಜ್ಯ ಪ್ರವಾಸ ಮಾಡುತ್ತ ಆಡಳಿತ ಪಕ್ಷದ ಲೋಪಗಳನ್ನು ಎತ್ತಿಹಿಡಿಯುತ್ತಿದ್ದು, ಅವರ ದಾರಿಯಲ್ಲಿ ನಾವೆಲ್ಲ ಸಾಗಬೇಕು ಎಂದರು. 

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಜಲಾಶಯಗಳಲ್ಲಿ ನೀರು ತುಂಬಿ ಹರಿದರೂ ರೈತರಿಗೆ ಮಾತ್ರ ಅನುಕೂಲವಾಗುತ್ತಿಲ್ಲ. ಬರದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಬಿಜೆಪಿಯಿಂದ ಹೋರಾಟ ರೂಪಿಸಿ ರಾಜ್ಯ ಸರ್ಕಾರದ ಆಡಳಿತ ವಿರೋಧಿ  ನೀತಿಯನ್ನು ಖಂಡಿಸಲಾಗುವುದು ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಡವರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿ ತಂದು
ಅನುಕೂಲ ಮಾಡಿಕೊಟ್ಟಿದೆ. ಪ್ರಧಾನಿ ಮೋದಿಯನ್ನು ತೆಗಳುವ ವಿವಿಧ ಪಕ್ಷಗಳು ತಾವು 60 ವರ್ಷದಲ್ಲಿ ಮಾಡಿದ ಅಭಿವೃದ್ಧಿ ನೋಡಲಿ. ಇತ್ತ ಪ್ರಧಾನಿ ನರೇಂದ್ರ ಮೋದಿ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ನೋಡಲಿ. ಮುಂದೊಂದು ಇಡೀ ವಿಶ್ವದಲ್ಲೇ ಭಾರತವನ್ನು ಅಗ್ರಗಣ್ಯ ಸ್ಥಾನಕ್ಕೆ ಮೋದಿ ಕೊಂಡೊಯ್ಯುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿದರೆ ಮೋದಿ ವಿಶ್ವ ನಾಯಕರಾಗಿ ಬೆಳೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಜವಳಗೇರಾ ಸಿಎಸ್‌ಎಫ್‌ನಲ್ಲಿ ಕೃಷಿ ಕೇಂದ್ರಿಯ ವಿಶ್ವವಿದ್ಯಾಲಯ ಇಲ್ಲವೇ ಕೃಷಿ ಸಂಶೋಧನಾ ಕೇಂದ್ರ
ಮಂಜೂರಾತಿಗೆ ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ ಮನವಿ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಕೊಟ್ಟಿದ್ದಾರೆ. ಅಭಿವೃದ್ಧಿ ವಿಷಯ ಬಂದಾಗ ಪಕ್ಷ ಬೇಧ ಮರೆತು ರಾಜ್ಯ ಸರ್ಕಾರದ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಜನರಿಗೆ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.

Advertisement

ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಮಾತನಾಡಿ, ಆಡಳಿತ ಚುಕ್ಕಾಣಿ ಸಿಕ್ಕಿಲ್ಲವೆಂದು ಯಾವ ಕಾರ್ಯಕರ್ತರು ಧೃತಿಗೆಡಬಾರದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಸಿಂಧನೂರಿನಲ್ಲೂ ಬಿಜೆಪಿ ಬಾವುಟ ಹಾರಿಸಲಾಗುವುದು. ಸತತ ಪ್ರಯತ್ನದಿಂದ ಮಾತ್ರ ಯಾವುದೇ ವ್ಯಕ್ತಿಗಾಗಲಿ, ಪಕ್ಷಕ್ಕಾಗಲಿ ಜಯ ದೊರೆಯುತ್ತದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಕನಕಗಿರಿ ಶಾಸಕ ಬಸವರಾಜ ದಢೇಸೂಗುರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್‌ ಮಾತನಾಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಮಾಜಿ ಶಾಸಕ ಈರಪ್ಪ ಕೆಸರೆಟ್ಟಿ, ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ತಾಪಂ ಸದಸ್ಯ ಹನುಮೇಶ, ಬಿಜೆಪಿ ನಗರ ಅಧ್ಯಕ್ಷ ಅಡಿವೆಪ್ಪ ಓತೂರು, ಮುಖಂಡರಾದ ದೇವೇಂದ್ರಪ್ಪ ಯಾಪಲಪರ್ವಿ, ಮಧ್ವರಾಜ ಆಚಾರ್‌, ಎಸ್‌ಟಿ ಮೋರ್ಚಾ ಅಧ್ಯಕ್ಷ ನಾಗರಾಜ ಬಿಲಗಾರ್‌, ಸಿದ್ದಪ್ಪ ಯರಕಲ್‌, ಶೈಲಜಾ ಷಡಕ್ಷರಪ್ಪ ಇತರರು ಇದ್ದರು. ಇದೇ ಸಂದರ್ಭದಲ್ಲಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು.

ರಾಜಕಾರಣ ನಿಂತ ನೀರಲ್ಲ
ಸಿಂಧನೂರು: ರಾಜಕಾರಣ ನಿಂತ ನೀರಲ್ಲ. ಬಿಜೆಪಿ ತನ್ನದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿದೆ. ನಮ್ಮೆಲ್ಲರಿಗೆ ಪಕ್ಷ ಅನಿವಾರ್ಯತೆ ಇದೆ ಹೊರತು ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಬಿಜೆಪಿ ಮುಖಂಡರಲ್ಲಿನ ವೈಮನಸ್ಸು ಬಗ್ಗೆ ಪ್ರತಿಕ್ರಿಯಿಸಿದ ಅವರು, ನಗರಸಭೆ ಚುನಾವಣೆ ಟಿಕೆಟ್‌ ವಿಚಾರದಲ್ಲಿ ಗೊಂದಲ ಇರುವುದು ಸಾಮಾನ್ಯ. ಆದರೆ ಟಿಕೆಟ್‌ ಸಿಗದಿದ್ದರೂ ಪ್ರತಿಯೊಬ್ಬರು ಪಕ್ಷ ನೇಮಿಸಿದ ಅಭ್ಯರ್ಥಿಗೆ ಬೆಂಬಲಿಸಿ ಕೆಲಸ ಮಾಡಬೇಕು. ಯಾರು ಯಾವುದೇ ಪಕ್ಷಕ್ಕೆ ಹೋದರೂ ಪಕ್ಷ ತನ್ನದೇ ಆದ ಹೊಸ ನಾಯಕರನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಇರುತ್ತದೆ. ಎಲ್ಲ ಮುಖಂಡರನ್ನು ವೈಯಕ್ತಿಕ ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಸಿಂಧನೂರು ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಲಾಗುವುದು ಎಂದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್‌, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next