Advertisement

ಮಾತು ಮರೆಯುವ ಹೊತ್ತಿದು…

09:32 AM Apr 02, 2020 | Suhan S |

ಮೊನ್ನೆ ನಾವು ಒಂದಿಷ್ಟು ಸಹೋದ್ಯೋಗಿಗಳು ಊಟದ ವಿರಾಮದಲ್ಲಿ ಹರಟುತ್ತ ಕೂತಿದ್ದೆವು. ಲೋಕಾಭಿರಾಮದ ಮಾತು ಎಂದುಕೊಂಡರೂ, ನಾವು ಚರ್ಚಿಸುವುದು ಮಾತ್ರ ನಮ್ಮ ಇಲಾಖೆಗೆ ಸಂಬಂಧಿಸಿದ, ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿಚಾರಗಳನ್ನೇ.

Advertisement

ಅದೇ ರೀತಿ, ಆರೋಗ್ಯ ಸಹಾಯಕಿಯಾಗಿರುವ ಗೆಳತಿಯೊಬ್ಬಳು ತಾಯಿ ಕಾರ್ಡು ಹಂಚುವಾಗಿನ ಸಮಸ್ಯೆಗಳನ್ನು ಹೇಳಿಕೊಂಡಳು. ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾದ ಹೆಣ್ಣು ಮಗಳೊಬ್ಬಳು, ತನಗೆ ಎರಡು ತಿಂಗಳು ಎಂದು ಕಾರ್ಡು ಪಡೆದಿದ್ದು, ಅದಾದ ಒಂದೂವರೆ ತಿಂಗಳಿನಲ್ಲಿಯೇ ಆಕೆಗೆ ಹೆರಿಗೆಯಾದದ್ದನ್ನು ಹೇಳಿ, ಮುಂದೆ ಅವಳ ಕತೆ ಏನೋ ಎನ್ನುತ್ತಾ ಮಾತು ನಿಲ್ಲಿಸಿದಳು. ಅಲ್ಲಿಯೇ ಕೂತಿದ್ದ ಇನ್ನಿಬ್ಬರು ಸಹೋದ್ಯೋಗಿಗಳು ಥಟ್ಟನೆ- “ಈ ಹೆಂಗಸರಿದ್ದಾರಲ್ಲ, ಇವರು ಮಹಾನ್‌ ಕ್ರಿಮಿನಲ್‌ಗ‌ಳು’ ಎಂದುಬಿಟ್ಟರು.

ನಾವು ಉಳಿಕೆಯವರು ತಗಾದೆ ತೆಗೆದಾಗ ಆ ವಿಚಾರ ಅಲ್ಲಿಗೆ ಮುಗಿಯಿತಾದರೂ, ನಂತರ ವಾರ ಕಳೆದರೂ ಆ ವಿಚಾರದ ಕುರಿತಾದ ಕೀಟವೊಂದು ನನ್ನೊಳಗೆ ಸೇರಿಯೇ ಬಿಟ್ಟಿತು. ನಾವು ಹೆಂಗಸರು ಯಾಕೆ ಹೀಗೆ? ತಪ್ಪು ಹೆಣ್ಣು ಮಗಳದ್ದು ಮಾತ್ರವಾ? ಸ್ತ್ರೀಯರು ಪ್ರತಿಯೊಂದು ಘಟನೆಗೂ ತಾವುಗಳಷ್ಟೇ ಕಾರಣ ಎಂದುಕೊಳ್ಳುವುದು ಅಥವಾ ಇನ್ಯಾವುದೋ ಸ್ತ್ರೀ ಮಾತ್ರವೇ ಕಾರಣ ಎಂದು ಸಾರಾಸಗಟು ತೀರ್ಪು ನೀಡುವುದು ದುರಂತವೇ ಸರಿ. ನೀವು ಯಾವುದೇ ಘಟನೆಯನ್ನಾದರೂ ತೆಗೆದುಕೊಳ್ಳಿ, ಅದು ರಾಮಾಯಣದ ಶೂರ್ಪನಖೀಯಿಂದ ಹಿಡಿದು ಈಗಿನ ನಿರ್ಭಯಾ ಹತ್ಯೆಯವರೆಗೂ ಎಲ್ಲ ಅವಘಡಗಳಿಗೂ ಸ್ತ್ರೀಯರೇ ಕಾರಣ ಎಂದು ಬಿಂಬಿಸಲಾಗುತ್ತದೆ. ನಮ್ಮ ಮಾತು, ನಮ್ಮ ಬಟ್ಟೆ, ನಮ್ಮ ನಗು, ನಮ್ಮ ವ್ಯವಹಾರ, ಅಲಂಕಾರ, ನಮ್ಮ ಸೌಂದರ್ಯ, ನಮ್ಮ ವ್ಯಕ್ತಿತ್ವ, ಎಲ್ಲವನ್ನೂ ಅನುಮಾನದ ನೆಲೆಯಲ್ಲಿಯೇ ನೋಡುವ ಕ್ರಮವೊಂದು ತೀರಾ ಹಿಂದಿನಿಂದಲೂ ಬೆಳೆದು ಬಂದಿದೆ.

ಉದಾಹರಣೆಗೆ, ಯಾರದೋ ಮನೆಯ ಮಗ ಕಳ್ಳತನ ಮಾಡಿದರೆ ಅವನ ಅಮ್ಮ ಸರಿಯಿಲ್ಲ ಅನ್ನುವುದು, ಮಗಳು ಯಾರನ್ನೋ ಪ್ರೀತಿಸಿದರೆ, ಅಮ್ಮನೂ ಅಂಥವಳೇ ಅನ್ನುವುದು, ಗಂಡ ಕುಡಿದು ರಸ್ತೆಯಲ್ಲಿ ತೂರಾಡತೊಡಗಿದರೆ ಆಗಲೂ, ಅವನ ಹೆಂಡತಿ ಸರಿಯಿಲ್ಲ ಎಂದು ದೂರುವುದು, ವ್ಯಕ್ತಿಯೊಬ್ಬ ಮಹಾನ್‌ ಲಂಚಕೋರನಾಗಿದ್ದರೆ, ಅವನ ಹೆಂಡತಿ ಭಾರೀ ದುರಾಸೆಯವಳು ಅನ್ನುವುದು, ಗಂಡಸೊಬ್ಬ ಎಲ್ಲೇಲ್ಲೋ ಸಾಲ ಮಾಡಿದರೆ ಅವನ ಹೆಂಡತಿ ದುಂದುವೆಚ್ಚ ಮಾಡ್ತಾಳೆ ಅನ್ನುವುದು! ಅದೂ ಬೇಡ, ಹೆಣ್ಣು ಮಗಳೊಬ್ಬಳನ್ನು ನಾಲ್ಕೈದು ಜನ ಸೇರಿ ಅತ್ಯಾಚಾರ ಮಾಡಿ ಸಾಯಿಸಿದರೆ, ಆಕೆ ಅಲ್ಲಿಗೆ ಹೋದದ್ದೇ ತಪ್ಪು ಎಂದು ಬಿಡುವುದು ಹೀಗೆ…

ಇನ್ನು ವಿಧವೆಯರ ಮತ್ತು ಗಂಡನಿಂದ ದೂರಾದವರ ಪಾಡಂತೂ ಹೇಳುವುದೇ ಬೇಡ. ಅವರನ್ನು ಖಳನಾಯಕಿಯರ ಹಾಗೆ ನೋಡುವ ದೊಡ್ಡ ಹೆಂಗಸರ ಗುಂಪೇ ನಮ್ಮ ನಡುವಿದೆ. ಪ್ರತಿಯೊಂದು ತಪ್ಪಿಗೂ ಹೆಂಗಸರನ್ನೇ ಹೊಣೆಯಾಗಿಸುತ್ತ, ಪುರುಷರನ್ನು ಅಮಾಯಕರಂತೆ ಕಟ್ಟಿಕೊಡುವ ಕೆಲಸವನ್ನು ಈ ಸಮಾಜ ಮಾಡುತ್ತಲೇ ಬಂದಿದೆ. ನಾವು ಇಂಥ ಮನಸ್ಥಿತಿಗಳಿಂದ ಹೊರಗೆ ಬರಬೇಕಾದ ಅನಿವಾರ್ಯತೆಯೊಂದು ಎದುರಿಗಿದೆ. ನಮ್ಮ ನೋವಿಗೆ ನಾವೇ ಮದ್ದು ಅರೆದುಕೊಳ್ಳದಿದ್ದಲ್ಲಿ ಗಾಯ ಮಾಯುವ ಮಾತಾದರೂ ಎಲ್ಲಿಂದ ಬರಬೇಕು? ­

Advertisement

 

-ದೀಪ್ತಿ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next