Advertisement

ಕೆಡುಕನ್ನು ಮರೆಯುವುದೇ ಯಶಸ್ವಿ ಜೀವನದ ಸೂತ್ರ: ಚಿನ್ಮಯಾನಂದ ಸರಸ್ವತಿ

11:56 PM Feb 16, 2020 | Sriram |

ಯಾರು ಏನೇ ಹೇಳಲಿ ಎಲ್ಲವನ್ನೂ ಕೇಳಿಸಿಕೊಳ್ಳಿ. ಅದರಲ್ಲಿ ಒಳ್ಳೆಯದೇನಿದೆಯೋ ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೆಟ್ಟದನ್ನು ಅಲ್ಲಿಯೇ ಮರೆತುಬಿಡಿ. ಇದೇ ಯಶಸ್ವಿ ಜೀವನದ ಸೂತ್ರ ಎಂದವರು ಚಿನ್ಮಯಾನಂದ ಸರಸ್ವತೀ ಸ್ವಾಮೀಜಿ. ಸಂತ ನೀಡಿದ ಜೀವನ ಸಂದೇಶವನ್ನು ಸುಶ್ಮಿತಾ ಜೈನ್‌ ಅವರು ಇಲ್ಲಿ ಉಲ್ಲೇಖೀಸಿದ್ದಾರೆ.

Advertisement

ಇ ವರು 1916 ಮೇ 8ರಂದು ಕೇರಳದ ಎರ್ನಾಕುಳಂನಲ್ಲಿ ಜನಿಸಿದರು. ವಡಾಕ್ಕೆ ಕುರುಪ್ಪಾತು ಕುಟ್ಟನ್‌ ಮೆನನ್‌ ಮತ್ತು ಪರುಕುಟ್ಟಿ ಅಮ್ಮ ಇವರ ಹೆತ್ತವರು. ಚಿನ್ಮಯಾನಂದ ಸರಸ್ವತೀ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಬಾಲಕೃಷ್ಣ ಮೆನನ್‌. ಇವರು ತಮ್ಮ ಔಪಚಾರಿಕ ಶಿಕ್ಷಣವನ್ನು ಕೊಚ್ಚಿಯ ಶ್ರೀ ರಾಮ ವರ್ಮ ಹೈಸ್ಕೂಲ್‌ ವಿವೇಕೋದ್ಯಮ ಶಾಲೆ ತೃಶ್ಶೂರಿನಲ್ಲಿ ಪೂರೈಸಿದರು. ಫೆಲೋ ಆಫ್ ಆರ್ಟ್ಸ್ ಕೋರ್ಸನ್ನು ಎರ್ನಾಕುಳಂನ ಮಹಾರಾಜಾ ಕಾಲೇಜಿನಲ್ಲಿ ಮತ್ತು ಬಿಎ ಪದವಿಯನ್ನು ತೃಶ್ಶೂರ್‌ನ ಸೇಂಟ್‌ ಥಾಮಸ್‌ ಶಾಲೆಯಲ್ಲಿ ಪೂರೈಸಿದರು. ಅನಂತರ ಲಕ್ನೋ ವಿಶ್ವ ವಿದ್ಯಾಲಯಕ್ಕೆ ತೆರಳಿ ಅಲ್ಲಿ ಸಾಹಿತ್ಯ ಮತ್ತು ಕಾನೂನು ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿದರು.

ಕೊಡುವುದರಲ್ಲಿ ಸಂತೋಷ
ಕೊಡುವುದರಲ್ಲಿ ಸಂತೋಷವಿದೆ ಹೊರತು ನಾವು ಬೇರೆಯವರಿಂದ ತೆಗದುಕೊಳ್ಳುವುದರಲ್ಲಿ ಸಂತೋಷವಿಲ್ಲ ಎಂದ ಚಿನ್ಮಯಾನಂದ ಸರಸ್ವತಿ ಶ್ರೀಗಳು, ಹಿಂದೂ ಧರ್ಮದ ವೇದಾಂತ ಸಾರವನ್ನು ಚಿನ್ಮಯ ಮಿಷನ್‌ ಮೂಲಕ ಜಗತ್ತಿಗೆ ತಿಳಿಸಿದವರು.

ಜೀವನದ ಸುಖ, ನೆಮ್ಮದಿಯ ಸಾರವನ್ನು ತಮ್ಮ ಅನುಭವಗಳ ಮೂಲಕ ಸಾರಿದ ಶ್ರೀಗಳು ಭಗವದ್ಗೀತೆ ಗ್ರಂಥ ಪೂಜಿಸಲು ಮಾತ್ರವಲ್ಲ , ಸೃಷ್ಟಿಯ ಜತೆಯಲ್ಲಿ ಉಗಮವಾಗುವ, ಪರಮಾತ್ಮನ ಧ್ಯಾನದಿಂದ ಕರಗತವಾದ ಭಗವದ್ಗೀತೆ ಅಲ್ಲಿನ ಸಂದೇಶಗಳನ್ನು ನಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆ ನಿಲ್ಲುತ್ತದೆ ಎಂದು ಮನವರಿಕೆ ಮಾಡಿಕೊಟ್ಟವರು.

ಬದಲಾವಣೆ ಸಹಜ ಗುಣ
ಮನುಷ್ಯನ ಕೊನೆಯ ದಿನಗಳವರೆಗೆ ತಮ್ಮವರನ್ನೂ ಪ್ರೀತಿಸುತ್ತಿರಬೇಕು. ಇದೊಂದು ಭಾವನಾತ್ಮಕ ಸಂಗತಿ. ಮಾನವ ಸಂತೋಷ ಜನರನ್ನು ಪ್ರೀತಿಸುವುದರಲ್ಲಿದೆ ಎಂದು ಜೀವನದ ಬದುಕಿನ ಕ್ಷಣಗಳ ಬಗ್ಗೆ ಚಿನ್ಮಯಾನಂದ ಸ್ವಾಮೀಜಿ ಹೀಗೆ ಹೇಳುತ್ತಾರೆ. ಬದಲಾವಣೆ ಎಂಬುದು ಮಾನವನ ಸಹಜ ಗುಣ. ಅದನ್ನು ಮನಗಾಣಿಸಿಕೊಂಡು ಕೇವಲ ಮಾತಿಗೆ ಈ ಸಂದೇಶ ಸೀಮಿತವಾಗದೇ ಕೆಲಸದ ಮೂಲಕ ಸಾಬೀತುಪಡಿಸಬೇಕು. ಆಗ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ ಎಂದಿದ್ದಾರೆ.

Advertisement

ಸಹನೆ ಒಂದಿದ್ದರೆ ಜಗತ್ತನ್ನೇ ಗೆಲ್ಲಬಹುದು
ನಾನು ಹಿರಿಯರಿಂದ ತಿಳಿದ ವಿಷಯಗಳನ್ನು ನಿಮಗೆ ಹೇಳುತ್ತೇನೆ. ನೀವು ಅದನ್ನು ಮುಂದಿನವರಿಗೆ ಹೇಳಿ ಎಂದು ಸ್ಫೂರ್ತಿ ತುಂಬಿದವರು ಚಿನ್ಮಯಾನಂದ ಸರಸ್ವತೀ ಸ್ವಾಮೀಜಿ. ಯಾವುದೇ ಸಾಧನೆ ಮಾಡಲು ಸಹನೆ ಅತೀ ಅಗತ್ಯ. ಸಹನೆಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಅವರು, ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಯಾವುದೇ ಕೆಲಸಕ್ಕೂ ಇನ್ನೊಬ್ಬರನ್ನು ಅವಲಂಬಿಸಬಾರದು ಎಂಬ ಸಂದೇಶ ನೀಡಿದವರು.

ಮಕ್ಕಳು ದೇಶ ಬೆಳಗಿಸುವ ದೀಪಗಳು
ಪ್ರೀತಿಗಿಂತ ದೊಡ್ಡದಾದುದು ಈ ಜಗತ್ತಲ್ಲಿ ಬೇರೇನೂ ಇಲ್ಲ. ಈ ಜಗತ್ತು ನಿಂತಿರುವುದೇ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗಳ ಮೇಲೆ. ಆದ್ದರಿಂದ ನಿಮ್ಮ ಮಕ್ಕಳ ಮೇಲೆ ನಿಮಗೆ ನಂಬಿಕೆ ಇರಲಿ, ವಾತ್ಸಲ್ಯವಿರಲಿ, ಅವರಲ್ಲಿನ ಮುಗ್ಧತನವನ್ನು ಸ್ವಾರ್ಥಕ್ಕಾಗಿ ಕದಡಬೇಡಿ. ಅವರು ದೇಶದ ಮಕ್ಕಳು; ಭವಿಷ್ಯದ ಪ್ರಜೆಗಳು. ಯಾವುದೇ ವಿಷಯಕ್ಕೂ ಅವರ ಮೇಲೆ ಒತ್ತಡವನ್ನು ಹಾಕಬಾರದು. ಯಾಕೆಂದರೆ ಅವರು ತುಂಬುವ ಹಡಗುಗಳಲ್ಲ. ಬೆಳಗಬೇಕಾದ ದೀಪಗಳು. ಸಮಾಜದ ಮುಂದಿನ ಭವಿಷ್ಯ ನಿರ್ಧರಿಸುವುದು ಇಂದಿನ ಮಕ್ಕಳಿಂದ ಎಂದಿದ್ದಾರೆ.

ದೇವರನ್ನು ನಂಬಿ
ಬೇರೆಯವರನ್ನು ನಂಬಿ ನಾವು ಮೋಸ ಹೋಗುವುದು, ನಿರಾಸೆಗೆ ಒಳಗಾಗುವುದು ಜಾಸ್ತಿ. ಜನರನ್ನು ನಂಬಿ ಮೋಸ ಹೋಗುವ ಬದಲು ದೇವರನ್ನು ನಂಬುವುದು ಒಳಿತು. ಏಕೆಂದರೆ ಜಗತ್ತಲ್ಲಿ ನಮ್ಮನ್ನು ನಿರಾಸೆಗೊಳಿಸದ, ನಮಗೆ ಮೋಸ ಮಾಡದ ವ್ಯಕ್ತಿಯಿದ್ದರೆ ಅದು ದೇವರು ಮಾತ್ರ. ಪ್ರಾರಂಭದಲ್ಲಿ ಅವನ ಇಚ್ಛೆಗಳ, ನಿಯಮಗಳ ಒಳಾರ್ಥವನ್ನು ಅರಿಯದೇ ದುಃಖೀಸುತ್ತೇವೆ.

ಆದರೆ ಅವನ ಪ್ರತಿಯೊಂದು ನಿರ್ಣಯದ ಹಿಂದೆಯೂ ಸಾತ್ವಿಕ ಅರ್ಥ ಇರುತ್ತದೆ. ಆ ನಿರ್ಣಯ ನಿಮ್ಮ ಜೀವನವನ್ನು ಉತ್ಕೃಷ್ಟಗೊಳಿಸುತ್ತದೆ. ಆದ ಕಾರಣ ಪರಮಾತ್ಮನನ್ನು ನಂಬಿ ಎಂದು ಹೇಳುತ್ತಾರೆ.

ಕೆಲವೊಮ್ಮೆ ನಮ್ಮ ಸಂತೋಷದ ಕೀಲಿ ಕೈಯನ್ನು ಬೇರೆಯವರಲ್ಲಿ ಕೊಟ್ಟು ಬದುಕುತ್ತೇವೆ. ಜೀವನದ ಸುಖ ದುಃಖಗಳಿಗೆಲ್ಲ ನಾವು ಮತ್ತೂಬ್ಬರನ್ನು ಅವಲಂಬಿಸಿ ಬದುಕಬಾರದು. ಏಕೆಂದರೆ ಜೀವನ ನಮ್ಮದು.

ಒಂದು ಕೆಲಸವನ್ನು ಮಾಡುವಾಗ ನಮ್ಮ ಗಮನ ಅದರ ಕಡೆಗೆ ಸರಿಯಾಗಿ ಕೇಂದ್ರೀಕೃತ ವಾಗದಿರುವುದೇ ನಮ್ಮ ಸೋಲಿಗೆ ಹಲವು ಬಾರಿ ಕಾರಣವಾಗಿಬಿಡುತ್ತದೆ. ಅದೇ ನಮ್ಮ ಬುದ್ಧಿ, ಹೃದಯ ಮತ್ತು ಆತ್ಮವನ್ನು ಒಂದೇ ಕೆಲಸದಲ್ಲಿ ತೊಡಗಿಸಿಕೊಂಡಾಗ ಗೆಲುವು ಸುಲಭವಾಗುತ್ತದೆ.

ಚಿನ್ಮಯ ಮಿಷನ್‌ ರೂವಾರಿ
ದೇಶ ಸಂಚಾರದ ಸಂದರ್ಭ ಇವರಿಂದ ಪ್ರಭಾವಿತರಾಗಿದ್ದ ಅನುಯಾಯಿಗಳು ವೇದಾಂತ ಆಧ್ಯಯನಕ್ಕಾಗಿ ವೇದಿಕೆ ನಿರ್ಮಿಸಲು ಒತ್ತಾಯಿಸಿದರು. ಅನುಯಾಯಿಗಳ ಒತ್ತಾಯಕ್ಕೆ ಮಣಿದ ಚಿನ್ಮಯಾನಂದ ಸರಸ್ವತೀ ಸ್ವಾಮೀಜಿ, ನನ್ನ ಹೆಸರನ್ನು ಯಾವುದೇ ಕಾರಣಕ್ಕೂ ಇಲ್ಲಿ ಬಳಸಬಾರದು ಎಂದಿದ್ದರು. ಅವರ ಷರತ್ತಿನಂತೆಯೇ ಅನುಯಾಯಿಗಳು ಚಿನ್ಮಯ ಮಿಷನ್‌ ಅನ್ನು 1953ರಲ್ಲಿ ಅಸ್ತಿತ್ವಕ್ಕೆ ತಂದರು. ಇಲ್ಲಿ ಚಿನ್ಮಯ ಎಂಬುದು ಅವರ ಹೆಸರನ್ನು ಸೂಚಿಸುತ್ತಿಲ್ಲ. ಬದಲಾಗಿ ಚಿನ್ಮಯ ಅಂದರೆ ಸಂಸ್ಕೃತದಲ್ಲಿ ಶುದ್ಧ ಜ್ಞಾನ ಎಂದರ್ಥ. ಇಂದು ದೇಶ /ವಿದೇಶಗಳಲ್ಲಿ 500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಚಿನ್ಮಯ್‌ ಮಿಷನ್‌ ಸೇವೆ ಅನನ್ಯ.

Advertisement

Udayavani is now on Telegram. Click here to join our channel and stay updated with the latest news.

Next