Advertisement

ಎಲ್ಲರಿಗುಂಟು ಬೆಲೆ

11:02 AM Jun 20, 2019 | Team Udayavani |

ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ ನೀವು ಗಳಿಸಿರುವ ಸಂಖ್ಯೆಯ ಬಗ್ಗೆ ಚಿಂತಿತರಾಗದಿರಿ. ನಿಮ್ಮ ಪ್ರತಿಯೊಂದು ಮಾತನ್ನೂ ನಾವು ಆಲಿಸುತ್ತೇವೆ. ಸದನದಲ್ಲಿ ನಿಮ್ಮಿಂದ ಬರುವ ಪ್ರತಿಯೊಂದು ಶಬ್ದಕ್ಕೂ ಬೆಲೆ ಕೊಡುತ್ತೇವೆ’ ಎಂದು ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.

Advertisement

17ನೇ ಲೋಕಸಭೆಯ ಆರಂಭಿಕ ದಿನವಾದ ಸೋಮವಾರ, ಸಂಸತ್ತಿಗೆ ಆಗಮಿಸಿದ ಅವರು ಸದನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಕ್ರಿಯ ವಿರೋಧ ಪಕ್ಷಗಳು ಪ್ರಮುಖವಾದವು. ಹಾಗಾಗಿ, ಈಗಿನ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ತಾವು ಚುನಾವಣೆಯಲ್ಲಿ ಅಲ್ಪ ಸ್ಥಾನಗಳನ್ನು ಗಳಿಸಿರುವುದಕ್ಕೆ ಚಿಂತಿತರಾಗಬೇಕಿಲ್ಲ. ವಿಪಕ್ಷಗಳ ಪ್ರತಿಯೊಂದು ಶಬ್ದಕ್ಕೂ ನಾವು ಗೌರವ, ಬೆಲೆ ನೀಡುತ್ತೇವೆ. ಆದ್ದರಿಂದ, ಎಲ್ಲಾ ವಿಪಕ್ಷಗಳ ನಾಯಕರು ಸದನದ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದರು.

ರಾಷ್ಟ್ರದ ವಿಚಾರದಲ್ಲಿ ನಿಷ್ಪಕ್ಷಪಾತ: ಇನ್ನು, ರಾಷ್ಟ್ರದ ಹಿತಾಸಕ್ತಿಯ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚಿಸುವಾಗ ಪಕ್ಷಭೇದ ಮರೆಯಬೇಕು ಎಂದ ಅವರು, ”ನಾವು ಸದನಕ್ಕೆ ಬರುವಾಗ, ನಾವು ಆಡಳಿತ ಪಕ್ಷದವರು, ನಾವು ಪ್ರತಿಪಕ್ಷದವರು ಎಂಬ ಭಾವನೆಯನ್ನು ಬಿಟ್ಟು, ನಾವೆಲ್ಲರೂ ಪಕ್ಷಾತೀತರು ಎಂಬ ಭಾವನೆಯೊಂದಿಗೆ ಸದನ ಪ್ರವೇಶಿಸಬೇಕು. ‘ಪಕ್ಷ’-‘ವಿಪಕ್ಷ’ ಎನ್ನುವುದನ್ನು ಮರೆತು ‘ನಿಷ್ಪಕ್ಷ’ವಾಗಿ ಕೆಲಸ ಮಾಡಬೇಕು. ಅದೇ ಭಾವವನ್ನು ನಾವು ನಮ್ಮ ಕೆಲಸದಲ್ಲಿ ತೋರಿಸಬೇಕು. ಸಂಸತ್ತು ಸರಾಗವಾಗಿ ನಡೆದರೆ ಮಾತ್ರ ನಾವು ಜನರ ಆಶಯಗಳನ್ನು ಈಡೇರಿಸಲು ಸಾಧ್ಯ” ಎಂದರು.

ಮಹಿಳಾ ಸಂಸದರಿಗೆ ಶುಭಾಶಯ: ಹಿಂದೆಂದಿಗಿಂತಲೂ ಹೆಚ್ಚು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಎಲ್ಲಾ ಮಹಿಳಾ ಸಂಸದರಿಗೆ ಮೋದಿ ಶುಭಾಶಯ ಸಲ್ಲಿಸಿದರು. ಈ ಬಾರಿಯ ಲೋಕಸಭೆಯಲ್ಲಿ 78 ಮಹಿಳಾ ಸಂಸದರಿದ್ದಾರೆ.

ತಾತ್ಸಾರ ಮನೋಭಾವ ಇನ್ನಾದ್ರೂ ಬಿಡುವಿರಾ?: ‘ಸಂಸತ್ತನ್ನು ರಬ್ಬರ್‌ ಸ್ಟಾಂಪ್‌ನಂತೆ ಬಳಸಿಕೊಳ್ಳುವ ಮನೋಭಾವವನ್ನು ಈ ಬಾರಿಯಾದರೂ ಬಿಡುವಿರಾ?’ ಎಂದು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದೆ.

Advertisement

ವಿಪಕ್ಷಗಳು ಸದನದಲ್ಲಿ ತಾವು ಹೊಂದಿರುವ ಸಂಖ್ಯೆಯ ಬಗ್ಗೆ ಚಿಂತಿತರಾಗುವುದು ಬೇಡ. ನಿಮ್ಮ ಪ್ರತಿಯೊಂದು ಮಾತಿಗೂ ನಾವು (ಸರ್ಕಾರ) ಬೆಲೆ ಕೊಡುತ್ತೇವೆ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಈ ಮಾತಿನ ಚಾಟಿ ಬೀಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ, ”ಸದನದಲ್ಲಿ ಚರ್ಚಿಸದ ವಿಚಾರಗಳನ್ನು ಸುಗ್ರೀವಾಜ್ಞೆ ಮೂಲಕ ಕಾನೂನಾಗಿ ಜಾರಿಗೊಳಿಸುವಂಥ ಕ್ರಮಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಮಾತನ್ನು ಹೇಳಲು ಕಳೆದೈದು ವರ್ಷ ಸರ್ಕಾರ ನಡೆದುಕೊಂಡ ರೀತಿಯೇ ಕಾರಣ. ಈಗ ನೀವು ಹೊಸ ಮಾತು ಮಾತನಾಡುತ್ತೀರಿ. ಅದನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸುತ್ತೀರಿ ಎಂಬುದನ್ನು ನಾವೂ ಕಾದು ನೋಡುತ್ತೇವೆ” ಎಂದಿದ್ದಾರೆ.

ಕನ್ನಡದ ಕಂಪು
ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್‌ ಜೋಷಿ, ಕರ್ನಾಟಕದ ಸಂಸದರಾದ ಸುಮಲತಾ, ಪ್ರತಾಪ್‌ ಸಿಂಹ, ತುಮಕೂರು ಸಂಸದ ಜಿ.ಎಸ್‌. ಬಸವರಾಜ್‌, ತೇಜಸ್ವಿ ಸೂರ್ಯ ಮುಂತಾದವರು ಕನ್ನಡದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಸದನದಲ್ಲಿ ಕನ್ನಡದ ಕಂಪನ್ನು ಪಸರಿಸಿದರು. ಡಿ.ಕೆ. ಸುರೇಶ್‌ ಅವರು ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಜಿ.ಎಸ್‌. ಬಸವರಾಜು ಅವರು ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದು ವಿಶೇಷವಾಗಿತ್ತು. ಸುಮಲತಾ ಅವರು ಪ್ರಮಾಣ ಸ್ವೀಕರಿಸಲು ಮೇಲೆದ್ದಾಗ ಅವರಿಗೂ ಸ್ಮತಿಯವರಿಗೆ ನೀಡಿದಂತೆ ಭರ್ಜರಿ ಚಪ್ಪಾಳೆಯ ಪ್ರೋತ್ಸಾಹ ನೀಡಲಾಯಿತು.
ವೀರೇಂದ್ರ ಕುಮಾರ್‌ ಹಂಗಾಮಿ ಸ್ಪೀಕರ್‌

ಬಿಜೆಪಿಯ ಹಿರಿಯ ಸಂಸದ ವೀರೇಂದ್ರ ಕುಮಾರ್‌, ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅವರ ಉಪಸ್ಥಿತಿಯಲ್ಲೇ ಎಲ್ಲಾ ಸಂಸದರೂ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಪ್ರದೇಶದ ಟಿಕಂಗಢ ಕ್ಷೇತ್ರದಿಂದ ಆಯ್ಕೆಯಾಗಿರುವ ಅವರು, ನೂತನ ಸ್ಪೀಕರ್‌ ಆಯ್ಕೆಯಾಗುವವರೆಗೆ ಹಂಗಾಮಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
•ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಹೆಜ್ಜೆ
•ದೇಶದ ಹಿತಾಸಕ್ತಿ ವಿಚಾರಗಳಲ್ಲಿ ಪಕ್ಷಾತೀತವಾಗಿರಿ ಎಂದು ಸಲಹೆ
•ಪ್ರತಿಪಕ್ಷಗಳ ಪ್ರತಿ ಮಾತಿಗೂ ಬೆಲೆ ಕೊಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ
Advertisement

Udayavani is now on Telegram. Click here to join our channel and stay updated with the latest news.

Next