ಗದಗ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಚಿಂತನೆ ಹೊಂದಿದ್ದರೆ ತಕ್ಷಣ ಹಿಂಪಡೆಯಬೇಕು. ನೈಸರ್ಗಿಕ ಸಂಪತ್ತು ನಾಶ ಮಾಡುವಂಥ ಕೃತ್ಯಕ್ಕೆ ಸರಕಾರ ಮುಂದಾದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರೂಪದ ಸಸ್ಯ ಕಾಶಿ, ಖನಿಜ ಸಂಪತ್ತಿನಿಂದ ಕೂಡಿರುವ ಕಪ್ಪತ್ತಗುಡ್ಡ ಈ ಭಾಗದ ಜನರ ಜೀವನಾಡಿಯಾಗಿದೆ. ಕಪ್ಪತ್ತಗುಡ್ಡದಿಂದಲೇ ಈ ಭಾಗದಲ್ಲಿ ಅಲ್ಪಸ್ವಲ್ಪ ಮಳೆ-ಬೆಳೆ ಕಾಣುತ್ತಿದ್ದೇವೆ. ಅದು ಇಲ್ಲವಾದರೆ ಈ ಭಾಗದ ಜನರಿಗೆ ಉಳಿಗಾಲವಿಲ್ಲ. ಇದಕ್ಕೆ ಬಳ್ಳಾರಿ ಜಿಲ್ಲೆಯೇ ಉತ್ತಮ ಉದಾಹರಣೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಪ್ಪತ್ತಗುಡ್ಡಕ್ಕೆ ಸಂರಕ್ಷಿತ ಅರಣ್ಯ, ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರ ಕಾಳಜಿಯಿಂದ ವನ್ಯಜೀವಿಧಾಮ ಸ್ಥಾನಮಾನ ದೊರಕಿತ್ತು. ಇದರಿಂದ ಪರಿಸರವಾದಿಗಳಲ್ಲಿ ಸಮಾಧಾನ ತಂದಿತ್ತು. ಅದಕ್ಕೂ ಮುನ್ನ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕಪ್ಪತ್ತಗುಡ್ಡದಲ್ಲಿ ಫೋಸ್ಕೋ ಕಂಪನಿ ನೆಲೆಯೂರಲು ಮುಂದಾಗಿತ್ತು. ಆಗ ಲಿಂ|ಜ| ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟ ಫೋಸ್ಕೋ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ಯಡಿಯೂರಪ್ಪನವರ ಅವಧಿಯಲ್ಲೇ ಕಪ್ಪತ್ತಗುಡ್ಡದಲ್ಲಿ ಗಣಿಕಾರಿಕೆ ಆರಂಭ ಗುಮಾನಿ ಎದ್ದಿದೆ. ಈ ರೀತಿಯ ಕೃತ್ಯಗಳು ಪ್ರಕೃತಿ ಮೇಲೆ ಅತ್ಯಾಚಾರ ನಡೆಸಿದಂತೆ ಎಂದು ವಾಗ್ಧಾಳಿ ನಡೆಸಿದರು. ಕಪ್ಪತ್ತಗುಡ್ಡದಲ್ಲಿ ಗಣಿಕಾರಿಕೆಗೆ ಕೆಲ ಚುನಾಯಿತ ಪ್ರತಿನಿಧಿಗಳು, ಉದ್ಯಮಿಗಳು ಸರಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗುತ್ತಿದೆ. ಜನಪ್ರತಿನಿಧಿಗಳು – ಆಳುವ ಸರಕಾರಗಳು ಪ್ರಕೃತಿ ಸಂರಕ್ಷಿಸುವ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಮುಂದಿನ ಪೀಳಿಗೆಯ ಹಿತಕ್ಕಾಗಿ ಕೆಲಸ ಮಾಡಬೇಕೇ ಹೊರತು, ಮುಂದಿನ ಚುನಾವಣೆಗೆ ಹಣ ಮಾಡುವುದು, ಅಧಿಕಾರದ ಆಮಿಷಕ್ಕಾಗಿ ಅಲ್ಲ. ಅದು ಒಳ್ಳೆಯ ಲಕ್ಷಣವೂ ಅಲ್ಲ ಎಂದು ತರಾಟೆ ತೆಗೆದುಕೊಂಡರು.
ಕಪ್ಪತ್ತಗುಡ್ಡದ ಸಂರಕ್ಷಣೆಗೆ ಈ ಭಾಗದ ಜನರು ಕಳೆದ ಒಂದು ದಶಕದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕಪ್ಪತ್ತಗುಡ್ಡ ವನ್ಯಜೀವಿಧಾಮ ಆಗಿದ್ದರೂ ಗಣಿಗಾರಿಕೆಯ ಆತಂಕ ದೂರವಾಗುತ್ತಿಲ್ಲ. ಗಣಿ ಧಣಿಗಳು ಸ್ವಾರ್ಥ ಸಾಧ ನೆಗೆ ತೆರೆಮರೆಯಲ್ಲಿ ಕಸರತ್ತು ಮುಂದುವರಿಸಿದ್ದಾರೆ. ಕಪ್ಪತ್ತಗುಡ್ಡದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಲು ಬಿಡಲ್ಲ.
ಎಸ್.ಆರ್.ಹಿರೇಮಠ, ಸಾಮಾಜಿಕ ಕಾರ್ಯಕರ್ತ