Advertisement

ಕೃತಕ ಬುದ್ಧಿಮತ್ತೆಯ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಮುನ್ನುಡಿ

11:37 AM Sep 20, 2019 | Suhan S |

ಹುಬ್ಬಳ್ಳಿ: ಕೃತಕ ಬುದ್ಧಿಮತ್ತೆ(ಆರ್ಟಿಫಿಷಲ್‌ ಇಂಟಲಿಜೆನ್ಸಿ) ಬಗ್ಗೆ ವಿಶ್ವವೇ ಹೆಚ್ಚು ಒತ್ತು ನೀಡತೊಡಗಿದೆ. ಹಲವು ಕ್ಷಿಷ್ಟಕರ ಹಾಗೂ ಸವಾಲಿನ ಕೆಲಸಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಜನಕಾರಿ ಆಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಮೊದಲ ಕೃತಕ ಬುದ್ಧಿಮತ್ತೆ ಸೆಂಟರ್‌ ಆಫ್ ಎಕ್ಸಲೆನ್ಸ್‌ ಆರಂಭಕ್ಕೆ ಇಲ್ಲಿನ ಎನ್‌.ಎಸ್‌.ಇನ್ಫೋಟೆಕ್‌ ಮಹತ್ವದ ಯತ್ನಕ್ಕೆ ಮುಂದಾಗಿದೆ.

Advertisement

ಕೇಂದ್ರ ಸರಕಾರದ ಭಾರತೀಯ ಸಾಫ್ಟ್ ವೇರ್‌ ತಂತ್ರಜ್ಞಾನ ಪಾರ್ಕ್‌(ಎಸ್‌ಟಿಪಿಐ) ಸಹಕಾರದೊಂದಿಗೆ ಹುಬ್ಬಳ್ಳಿಯಲ್ಲಿ ಕೃತಕ ಬುದ್ಧಿಮತ್ತೆ ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ಆರಂಭಿಸಲು ಯೋಜಿಸಲಾಗಿದೆ. ಇದು ಸಾಧ್ಯವಾದರೆ ದೇಶದ ವಿವಿಧ ಕ್ಷೇತ್ರಗಳ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು, ಹೊಸ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿ ಬಳಸಿಕೊಳ್ಳಲು ಸಹಕಾರಿ

ಆಗಲಿದೆ. ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆ, ಕೌಶಲ ತರಬೇತಿಯಲ್ಲಿ ತನ್ನದೇ ಸಾಧನೆ ತೋರಿರುವ, ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿರುವ ಎನ್‌.ಎಸ್‌. ಇನ್ಫೋಟೆಕ್‌ ಕಂಪೆನಿ ಕೃತಕ ಬುದ್ಧಿಮತ್ತೆ ನಿಟ್ಟಿನಲ್ಲಿ ಹಲವು ಕಾರ್ಯ ನಿರ್ವಹಿಸುತ್ತಿದೆ. 3ಡಿ ಪ್ರಿಂಟಿಂಗ್‌ ಇನ್ನಿತರ ಹೊಸ ತಂತ್ರಜ್ಞಾನ ಬಳಕೆಯ ಹಲವು ಯತ್ನಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಕೃತಕ ಬುದ್ಧಿಮತ್ತೆ ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ಆರಂಭಿಸುವ ಸಾಹಸಕ್ಕೆ ಮುಂದಾಗಿದೆ. ಇದರಿಂದ ಉತ್ತರ ಕರ್ನಾಟಕದ ನವೋದ್ಯಮಿಗಳಿಗೆ ಕೃತಕ ಬುದ್ಧಿಮತ್ತೆಮೇಲೆ ಹೆಚ್ಚಿನ ಪ್ರಯೋಗ, ಸಂಶೋಧನೆಗೂ ಮಹತ್ವದ ಸಹಕಾರಿ ಆಗಲಿದೆ.

ಕೃಷಿ-ಆರೋಗ್ಯಕ್ಕೆ ಒತ್ತು ಅವಶ್ಯ: ದೇಶದಲ್ಲಿ ಶೇ.58 ಕುಟುಂಬಗಳಿಗೆ ಕೃಷಿಯೇ ಜೀವನಾಧಾರ. ದೇಶದ ರಫ್ತು ಪ್ರಮಾಣದಲ್ಲಿ ಶೇ.10 ಪಾಲು ಕೃಷಿಯದ್ದಾಗಿದೆ. ಹೀಗಾಗಿ ಕೃತಕ ಬುದ್ಧಿಮತ್ತೆ ಬಳಸಿ ಭಾರತದಲ್ಲಿ ಕೃಷಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಹವಾಮಾನ, ಬಿತ್ತನೆ ಇನ್ನಿತರ ವಿಷಯಗಳ ಕುರಿತಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ರೈತರು ತಮ್ಮ ಮೊಬೈಲ್‌ಗ‌ಳಿಗೆ ಸಂದೇಶಗಳ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶಗಳ ರೈತರು ಹವಾಮಾನ ಕುರಿತಾಗಿ ಧ್ವನಿಯಾಧಾರಿತ ಮಾಹಿತಿ ಪಡೆಯುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳ ನಿವಾರಣೆಗೆ ರೋಗ-ಕೀಟ ತಡೆಗೆ ಮಹತ್ವದ ಯತ್ನಗಳು ನಡೆಯುತ್ತಿವೆ. ಹುಬ್ಬಳ್ಳಿಯ ನವೋದ್ಯಮಿಯೊಬ್ಬರು, ಪ್ರಖ್ಯಾತ ಕ್ರಿಮಿನಾಶಕ ಕಂಪೆನಿ ಬೇಡಿಕೆ ಮೇರೆಗೆ ಸೈನಿಕ ಹುಳುಗಳ ಹತೋಟಿಗೆ ರೋಬೊಟಿಕ್‌ ತಯಾರಿಕೆಯಲ್ಲಿ ತೊಡಗಿದ್ದಾರೆ.

Advertisement

ಕೃಷಿ ಕ್ಷೇತ್ರದ ಸವಾಲು-ಸಂಕಷ್ಟಮಯ ಸಮಸ್ಯೆಗಳ ಪರಿಹಾರಕ್ಕೆ ಕೃತಕ ಬುದ್ಧಿಮತ್ತೆಯಿಂದ ಇನ್ನಷ್ಟು ಪರಿಹಾರ ಕೈಗೆಟುಕುವ ದರದಲ್ಲಿ ದೊರೆಯಲಿ ಎಂದು ರೈತರು ಎದುರು ನೋಡುತ್ತಿದ್ದಾರೆ. ಗ್ರಾಮೀಣ ಜನರ ಆರೋಗ್ಯ ಸುರಕ್ಷತೆ ಹಾಗೂ ರೋಗ ಪತ್ತೆ, ಗುಣಮಟ್ಟದ ಶಿಕ್ಷಣ ನೀಡಿಕೆ ನಿಟ್ಟಿನಲ್ಲಿಯೂ ಇದರ ಪಾತ್ರ ಪ್ರಮುಖವಾಗಿದೆ.

 

ವಿಶ್ವವೇ ಒತ್ತು : ಕೃತಕ ಬುದ್ಧಿಮತ್ತೆಯಿಂದ ವಿಶ್ವದೆಲ್ಲೆಡೆ ಕ್ರಾಂತಿಕಾರಕ ಬೆಳವಣಿಗೆ ಕಾಣತೊಡಗಿದೆ. ಕೆಲ ದೇಶಗಳು ಇದಕ್ಕಾಗಿಯೇ ಪ್ರತ್ಯೇಕ ಸಚಿವಾಲಯ, ಇಲಾಖೆ ಆರಂಭಿಸಿವೆ. ಅಮೆರಿಕ, ಫ್ರಾನ್ಸ್‌, ಜಪಾನ್‌, ಚೀನಾ ಇನ್ನಿತರ ದೇಶಗಳು ಕೃತಕ ಬುದ್ಧಿಮತ್ತೆ ಕುರಿತಾಗಿ ನೀತಿ ರೂಪಿಸಿವೆ, ಕಾಯ್ದೆ ಜಾರಿಗೊಳಿಸಿವೆ. ಚೀನಾ ಮತ್ತು ಬ್ರಿಟನ್‌ 2030ರ ವೇಳೆಗೆ ಇದಕ್ಕೆ ಸಂಬಂಧಿಸಿದ ವ್ಯವಹಾರದಿಂದ ತಮ್ಮ ಜಿಡಿಪಿಗೆ ಕ್ರಮವಾಗಿ ಶೇ.26 ಮತ್ತು ಶೇ.10 ಪಾಲು ಪಡೆದುಕೊಳ್ಳಲು ಯೋಜಿಸಿವೆ. ಬ್ರಿಟನ್‌ 2025ರ ವೇಳೆಗೆ ಕೃತಕ ಬುದ್ಧಿಮತ್ತೆಯಲ್ಲಿ ಸುಮಾರು 1,000 ಸಂಶೋಧಕರನ್ನು ರೂಪಿಸಲು ಮುಂದಾಗಿದ್ದರೆ, ಚೀನಾ ಐದು ವರ್ಷದ ಯೋಜನೆ ರೂಪಿಸಿ 500 ಶಿಕ್ಷಕರು ಹಾಗೂ 5,000 ವಿದ್ಯಾರ್ಥಿಗಳ ತರಬೇತಿಗೆ ಕ್ರಮ ಕೈಗೊಂಡಿದೆ. ಭಾರತವೂ ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.

 ರಾಷ್ಟ್ರೀಯ ಸ್ಟ್ರಾ ಟಜಿ ರೂಪಣೆಗೆ ಕ್ರಮ :  ಕೇಂದ್ರ ಹಣಕಾಸು ಸಚಿವರು 2018-19ನೇ ಸಾಲಿನ ಬಜೆಟ್‌ನಲ್ಲಿ ಭಾರತದ ಆರ್ಥಿಕತೆ ಬೇಡಿಕೆಗಳಿಗೆ ಅನುಗುಣವಾಗಿ ಕೃತಕ ಬುದ್ಧಿಮತ್ತೆ ಸ್ಟ್ರಾ ಟಜಿ ರೂಪಣೆ ಕುರಿತಾಗಿ ಪ್ರಸ್ತಾಪಿಸಿದ್ದರು. ಇದಕ್ಕೆ ಪೂರಕವಾಗಿ ನೀತಿ ಆಯೋಗ ವಿವಿಧ ತಜ್ಞರು ಹಾಗೂ ಇದೇ ಕ್ಷೇತ್ರದಲ್ಲಿ ಸೇವೆಯಲ್ಲಿರುವ ಸಂಸ್ಥೆ-ವ್ಯಕ್ತಿಗಳ ಅನುಭವದ ಸಾರದೊಂದಿಗೆ ಕೃತಕ ಬುದ್ಧಿಮತ್ತೆ ರಾಷ್ಟ್ರೀಯ ಸ್ಟ್ರಾ ಟಜಿ ರೂಪಣೆಗೆ ಕ್ರಮ ಕೈಗೊಂಡಿದೆ. ಕೃತಕ ಬುದ್ಧಿಮತ್ತೆ ಪರಿಣಾಮಕಾರಿ ಬಳಕೆಯಿಂದ 2035ರ ವೇಳೆಗೆ ಭಾರತದ ಬೆಳವಣಿಗೆ ದರ ವಾರ್ಷಿಕ 1.3ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಎನ್‌.ಎಸ್‌. ಇನ್ಫೋಟೆಕ್‌ನ ಆರೋಗ್ಯ ಸಂಬಂಧಿ ಸೇವೆಗಳು ಅಮೆರಿಕದ ಗ್ರಾಹಕರಿಗೆ ದೊರೆಯುತ್ತಿವೆ. ಇದೀಗ ಕೃತಕ ಬುದ್ಧಿಮತ್ತೆ ಸೆಂಟರ್‌ ಆಫ್ ಎಕ್ಸಲೆನ್ಸ್‌ ಆರಂಭಕ್ಕೆ ಚಿಂತಿಸುತ್ತಿದ್ದು, ಇದು ಸಂಪೂರ್ಣವಾಗಿ ಭಾರತದ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಎಸ್‌ಟಿಪಿಐ ಜತೆ ಚರ್ಚೆ ನಡೆಸಲಾಗುತ್ತದೆ.    –ಸಂತೋಷ ಹುರಳಿಕೊಪ್ಪ, ಸಿಇಒ, ಎನ್‌.ಎಸ್‌. ಇನ್ಫೋಟೆಕ್‌

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next