ಶಿರಸಿ: ನಗರದ ಪ್ರಸಿದ್ಧ ಕದಂಬ ಆಗ್ರ್ಯಾನಿಕ್ ಹಾಗೂ ಮಾರ್ಕೆಟಿಂಗ್ ಟ್ರಸ್ಟ್ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಕದಂಬ ಸಂಸ್ಥೆ ಆವಾರದಲ್ಲಿ ನಡೆಯಲಿರುವ ಸಸ್ಯಸಂತೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ ಹೆಗಡೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರ ಹತ್ತಾರು ಯೋಜನೆಗಳ ಮೂಲಕ ಅರಣ್ಯೀಕರಣ ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಗಿಡಗಳನ್ನು ನೀಡಲು ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ ಎಂದರು.
ಅರಣ್ಯ ಇಲಾಖೆಗೆ ಅಗತ್ಯವಿರುವ ಗಿಡಗಳನ್ನು ಪ್ರತ್ಯೇಕವಾಗಿ ಬೆಳೆಸಿ ಅರಣ್ಯದಲ್ಲಿ ನಾಟಿ ಮಾಡಲಾಗುತ್ತದೆ. ರಾಷ್ಟೀಯ ಅರಣ್ಯೀಕರಣ ನೀತಿ ಅಡಿ ಅರಣ್ಯೇತರ ಪ್ರದೇಶಗಳಲ್ಲೂ ಗಿಡಗಳನ್ನು ವಿಸ್ತರಿಸುವ ಯೋಜನೆಯನ್ನು ಇಲಾಖೆ ರೂಪಿಸಿದೆ. ಆಸಕ್ತ ರೈತರು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲೆಗಳನ್ನು ನೀಡಿ ಯೋಜನೆಯ ಅನುದಾನಗಳನ್ನು ಬಳಸಿಕೊಳ್ಳಬಹುದಾಗಿದೆ. ಮೂರು ಹಂತದಲ್ಲಿ ಅನುದಾನ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದರು.
ಸಸ್ಯಸಂತೆ ಕುರಿತು ಹೆಚ್ಚಿನ ಮಾಹಿತಿ ನೀಡಿದ ಕದಂಬ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ಟ ಕೋಟೆಮನೆ, ಅಪರೂಪದ ಗಿಡಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಜೊತೆಯಲ್ಲಿ ರೈತರು ಮನೆಯಲ್ಲಿ ಕಾಳಜಿಯಿಂದ ಬೆಳೆಸಿದ ಗಿಡಗಳಿಗೂ ಸಹ ಸಸ್ಯಸಂತೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರ ಅನುಕೂಲಕ್ಕಾಗಿ ಕೈಗೆಟಕುವ ದರದಲ್ಲಿ ಗಿಡಗಳನ್ನು ನೀಡುತ್ತಿರುವುದರಿಂದ ಆಸಕ್ತರು ಸಸ್ಯಸಂತೆಯ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ರಘು, ವಲಯ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಚವ್ಹಾಣ್, ಕದಂಬ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ, ಪ್ರಮುಖರಾದ ಆರ್.ಜಿ. ಭಟ್ಟ, ಸಚಿನ್ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.