Advertisement
ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಲೋಕೇಶ್ ಕಾಪಾರು ಅವರ ಮೇಲೆ ಸುಳ್ಳು ಆಪಾದನೆ ಹೊರಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಿಳಿನೆಲೆ ಅರಣ್ಯ ರಕ್ಷಕ ಅಶೋಕ್ ಅವರನ್ನು ಅಮಾನತುಗೊಳಿಸಲು ಒತ್ತಾಯಿಸಿ ಕೊಂಬಾರು ಗ್ರಾಮಸ್ಥರು ನ್ಯಾಯಪರ ಸಂಘಟನೆಗಳ ಬೆಂಬಲದೊಂದಿಗೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ಕಚೇರಿ ಮುಂದೆ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಮಾತನಾಡಿ, ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ನಿಯಮ ಹಾಗೂ ಸಂಯಮ ಮೀರಿ ನಡೆದುಕೊಂಡಿರುವುದು ಸ್ಪಷ್ಟ. ಅಧಿಕಾರ ಇದೆ ಎಂದು ಬಡಪಾಯಿಗಳ ಮೇಲೆ ದಬ್ಟಾಳಿಕೆ ಸರಿಯಲ್ಲ. ಘಟನೆ ಸಂಬಂಧ ಎಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಮಾನವ ಹಕ್ಕು ಸಹಿತ ನ್ಯಾಯಪರ ವ್ಯವಸ್ಥೆಗಳ ಮೂಲಕ ನ್ಯಾಯ ಪಡೆಯುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆದು ಅಮಾಯಕನಿಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ ಎಂದರು. ಅರಣ್ಯ ಸಂರಕ್ಷಣೆ ನಮ್ಮದೂ ಜವಾಬ್ದಾರಿ
ಕೊಂಬಾರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಶಿಧರ್ ಬೊಟ್ಟಡ್ಕ ಮಾತನಾಡಿ, ಕೊಂಬಾರು ಜನತೆ ಕಾಡಿನ ಜತೆಯಲ್ಲೆ ಬೆಳೆದು ಬಂದವರು. ಕಾಡಿಗೆ ಬೆಂಕಿ ಬಿದ್ದಾಗ ರಕ್ಷಣೆ ನಡೆಸಿದವರು. ಅರಣ್ಯ ಇಲಾಖೆಗೆ ಇರುವಷ್ಟೆ ಅರಣ್ಯ ಸಂರಕ್ಷಣೆ ಜವಾಬ್ದಾರಿ ನಾಗರಿಕರಾದ ನಮಗೂ ಇದೆ. ಅರಣ್ಯ ರಕ್ಷಣೆಯ ಹೆಸರಿನಲ್ಲಿ ಗ್ರಾಮದ ಅಮಾಯಕರನ್ನು ಬಲಿಪಶು ಮಾಡಲು ಬಿಡುವುದಿಲ್ಲ. ಸಿಬಂದಿಯನ್ನು ರಕ್ಷಿಸಲು ಅಮಾಯಕನನ್ನು ಅಪರಾಧಿಯಾಗಿಸಿದಲ್ಲಿ ತಕ್ಕ ಉತ್ತರ ನೀಡಲು ಸಿದ್ಧ. ನಮ್ಮ ಮೌನ ಮುಂದುವರಿದರೆ ನಾಳೆ ನಮ್ಮೆಲ್ಲರ ಮೇಲೂ ಆರೋಪ ಹೊರಿಸಿ ಜೈಲಿಗೆ ಅಟ್ಟಬಹುದು ಎಂದರು.
Related Articles
ಸುಬ್ರಹ್ಮಣ್ಯ ಅರಣ್ಯ ಆರ್‌ಎಫ್ಒ ತ್ಯಾಗರಾಜ್ ಸ್ಥಳಕ್ಕೆ ಬರುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು. ಮಧ್ಯಾಹ್ನದ ವೇಳೆ ಪೊಲೀಸರು ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲುಪಿಸುವುದಾಗಿ ಭರವಸೆ ಇತ್ತರು. ಬಳಿಕ ಧರಣಿ ವಾಪಸ್ ಪಡೆಯಲಾಯಿತು. ಅರಣ್ಯ ರಕ್ಷಕ ಅಶೋಕ್ ಅವರನ್ನು ಅಮಾನತುಗೊಳಿಸಬೇಕು. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ 31 ಗ್ರಾಮಸ್ಥರ ಮೇಲೆ ಕಡಬ ಠಾಣೆಯಲ್ಲಿ ಅರಣ್ಯ ಇಲಾಖೆ ಸಿಬಂದಿ ನೀಡಿದ ದೂರು ವಾಪಸ್ ಪಡೆಯುವಂತೆ ಮನವಿಯಲ್ಲಿ ಒತ್ತಾಯಿಸಲಾಗಿತ್ತು.
Advertisement
ಪ್ರತಿಭಟನೆಯಲ್ಲಿ ಕ.ದ.ಸ.ಸ. ಸಮಿತಿಯ ಗಣೇಶ್ ಗುರಿಕಾನ, ಕಡಬ ತಾಲೂಕು ದಲಿತ ಸಂಘಟನೆಯ ಉಮೇಶ್ ಕೊಡಿಯಾಳ, ದಲಿತ ಸಂಘದ ಪುಟ್ಟಣ್ಣ ತೋಡಂತಿಲ, ಮಾನವ ಹಕ್ಕು ಹೋರಾಟಗಾರ ಸಂದೇಶ್, ಕೊಂಬಾರು ಗೌಡ ಸಂಘದ ಪ್ರಮುಖರಾದ ಕಿಶೋರು ಹೊಳ್ಳಾರ್, ಜಾನಿ ಕೊಡಂಕೇರಿ, ಕಿರಣ ಕೊಡಂಕೇರಿ, ಲೊಕೇಶ್ ಸರಪಾಡಿ, ಗೋಪಾಲ ಮರುವಂಜಿ, ಮರಿಯಪ್ಪ ಕಾಪಾರು, ವಿಶ್ವನಾಥ ಕಾಪಾರು, ಬಾಲಕೃಷ್ಣ ಹೊಳ್ಳಾರು, ಕೊರಗ ಕೋಲ್ಕಜೆ ಸಹಿತ ಕೊಂಬಾರು ಒಕ್ಕಲಿಗ ಗೌಡ ಸಂಘದವರು, ದಲಿತ ಸಂಘದ ಸದಸ್ಯರು, ಸ್ಥಳೀಯ ನಾಗರಿಕರು, ಊರವರು ಸೇರಿ ನೂರಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸಂಘದ ಕಾರ್ಯದರ್ಶಿ ರಾಮಕೃಷ್ಣ ಕೊಂಬಾರು ಸ್ವಾಗತಿಸಿ, ವಂದಿಸಿದರು. ಬೆಳ್ಳಾರೆ ಠಾಣೆಯ ಎಸ್‌ಐ ಈರಯ್ಯ ಹಾಗೂ ಸುಬ್ರಹ್ಮಣ್ಯ ಠಾಣೆಯ ಎಎಸ್‌ಐ ಚಂದಪ್ಪ ಗೌಡ ನೇತ್ರತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.
ಸಿಬಂದಿ ಮೇಲೆ ಸಂಶಯಭಾಗಿ ಮಲೆ ಮೀಸಲು ಅರಣ್ಯದಲ್ಲಿ ಎರಡು ಬಾರಿ ಮರ ಕಳ್ಳತನ ಆಗಿದೆ. ಅಂದು ಬೀಟ್ ಅರಣ್ಯ ಸಿಬಂದಿ ರಜೆ ಮೇಲೆ ತೆರಳಿದ್ದರು. ಸಿಬಂದಿ ಮರ ಕಳ್ಳತನದಲ್ಲಿ ಭಾಗಿಯಾಗಿರುವ ಸಂಶಯವಿದೆ. ಈ ಕುರಿತು ಪತ್ರಿಕೆಯಲ್ಲಿ ಸಮಗ್ರ ವರದಿ ಬಂದ ತತ್‌ಕ್ಷಣ ಬಣ್ಣ ಬಯಲಾಗುತ್ತದೆ ಎಂದು ಭಾವಿಸಿದ ಅ ಧಿಕಾರಿಗಳು ಲೋಕೇಶ್ ಅವರನ್ನು ಸಿಲುಕಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಆನಂದ ಮಿತ್ತಬೈಲು ಹೇಳಿದರು. ಅಮಾನತುಗೊಳಿಸಿ
ಅರಣ್ಯ ಇಲಾಖೆ ಅಧಿಕಾರಿಗಳ ಉದ್ಧಟತನವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಮಾಯಕನ ಮೇಲೆ ಹಲ್ಲೆ ಮಾಡಿದ ಸಿಬಂದಿಯನ್ನು ತತ್‌ಕ್ಷಣ ಅಮಾನತುಗೊಳಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ಸಾಮಾಜಿಕ ನ್ಯಾಯದಡಿ ಮತ್ತು ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ. ಹೈಕೋರ್ಟ್ ತನಕ ಈ ಪ್ರಕರಣವನ್ನು ಒಯ್ಯುತ್ತೇವೆ. ಸಿಬಂದಿಯನ್ನು ಅಮಾನತುಗೊಳಿಸುವ ತನಕ ವಿರಮಿಸುವುದಿಲ್ಲ ಎಂದು ಆನಂದ ಹೇಳಿದರು.