Advertisement

ಉತ್ತರಕನ್ನಡದ ಅರಣ್ಯ ಸಂಪತ್ತು ಕಾಯ್ದುಕೊಂಡು ಬರಬೇಕಾಗಿದೆ: ಸಚಿವ ವೈದ್ಯ

06:58 PM Jul 01, 2023 | Team Udayavani |

ಭಟ್ಕಳ: ರಾಜ್ಯದಲ್ಲಿ ಶೇ.33 ರಷ್ಟು ಅರಣ್ಯವಿದ್ದರೆ, ನಮ್ಮ ಜಿಲ್ಲೆಯಲ್ಲಿ ಶೆ.80ರಷ್ಟು ಅರಣ್ಯ ಇದೆ, ಅದನ್ನು ನಾವು ಕಾಯ್ದುಕೊಂಡು ಬರಬೇಕಾಗಿದೆ ಎಂದು ಮೀನುಗಾರಿಕಾ, ಬಂದರು, ಒಳನಾಡು ಜಲಸಾರಿಗೆ ಮತ್ತು ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

Advertisement

ಅವರು ಇಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಗಿಡವನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಇರುವ ಅರಣ್ಯವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಜಿಲ್ಲೆಯ ಜನತೆಯೇ ಕಾಳಜಿ ವಹಿಸಿದ್ದರಿಂದಲೇ ಇಲ್ಲಿಯ ತನಕ ಹಾಗೆಯೇ ಉಳಿದುಕೊಂಡು ಬಂದಿದೆ. ಜಿಲ್ಲೆಯಲ್ಲಿ ಅತಿಕ್ರಮಣವಾಗಿದ್ದರೆ ಅದು ಅನಿವಾರ್ಯ ಪ್ರಸಂಗದಲ್ಲಿ ಮಾತ್ರ ಆಗಿದ್ದು ಅತಿಕ್ರಮಣದಾರರೂ ಕೂಡಾ ಅರಣ್ಯ ಉಳಿಸಿ ಬೆಳೆಸುವಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಅಧಿಕಾರಿಗಳೇನಿದ್ದರೂ ನಮ್ಮ ಅರಣ್ಯವನ್ನು ನೋಡಿಕೊಳ್ಳಲು ಮಾತ್ರ ಸಾಕು ಎಂದ ಅವರು ಜಿಲ್ಲೆಯ ಜನತೆಯ ಅರಣ್ಯ ಕಾಳಜಿಯನ್ನು ಶ್ಲಾಘಿಸಿದರು.

ಜಿಲ್ಲೆಯಲ್ಲಿ ಅರಣ್ಯದ ಮಧ್ಯೆ ಬದುಕುಕಟ್ಟಿಕೊಂಡಿರುವ ಸುಮಾರು1 ಲಕ್ಷ ಜನರಿದ್ದಾರೆ. ಅವರಿಗೆ ಪಟ್ಟಾ ಕೊಡುವ ಜವಾಬ್ದಾರಿ ನಮ್ಮದಿದ್ದು ಮುಂದಿನ ದಿನಗಳಲ್ಲಿ ಪಟ್ಟಾ ಕೊಡುವ ಕುರಿತು ಕ್ರಮ ವಹಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಹೊಸದಾಗಿ ಅತಿಕ್ರಮಣ ಮಾಡುವವರಿಗೆ ಎಚ್ಚರಿಕೆ ನೀಡಿದ ಅವರು ಅಧಿಕಾರಿಗಳು ನಮ್ಮ ಸಹಕಾರಕ್ಕಿದ್ದರೂ ಸಹ ಹೊಸದಾಗಿ ಅತಿಕ್ರಮಣ ಮಾಡುವವರಿಗೆ ಕಠಿಣ ಕ್ರಮ ಕಾದಿದೆ ಎಂದರು.

ಯಾವುದೇ ಇಲಾಖೆಯಲ್ಲಿ ಸಂತಸ್ತರಾದವರಿಗೆ ತಕ್ಷಣ ಪರಿಹಾರ ನೀಡುವ ಕಾರ್ಯವಾಗಬೇಕು. ಕಾಡು ಪ್ರಾಣಿಗಳಿಂದ ಹಾನಿಗೊಳಗಾದರೆ, ಜೀವ ಹಾನಿಯಾದರೆ ಪರಿಹಾರ ಕೊಡುವಲ್ಲಿ ವಿಳಂಬವಿಲ್ಲದೇ ಕಾರ್ಯನಿರ್ವಹಿಸುವಂತೆ ಕರೆ ನೀಡಿದ ಅವರು ಹಾವುಗಳು ಅರಣ್ಯವಾಸಿ ಪ್ರಾಣಿಗಳು, ಆದರೆ ಹಾವು ಕಚ್ಚಿ ಮೃತರಾದರೆ ಕೃಷಿ ಇಲಾಖೆ ಪರಿಹಾರ ಕೊಡಬೇಕು. ಅದು ಸರಿಯಲ್ಲ, ಶೀಘ್ರದಲ್ಲಿ ಇದಕ್ಕೆ ಬದಲಾವಣೆ ತಂದು ಹಾವು ಕಡಿದು ಮೃತರಾದರೂ ಸಹ ಅರಣ್ಯ ಇಲಾಖೆಯೇ ಪರಿಹಾರ ಕೊಡುವಂತೆ ತಿದ್ದುಪಡಿ ಮಾಡಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದ ಸಚಿವರು ಜಿಲ್ಲೆಯಲ್ಲಿ ಅಕೇಶಿಯಾ ನೆಡುವುದನ್ನು ತಡೆಯಲಾಗಿದೆ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅಕೇಶಿಯಾ ನೆಡುತೋಪು ನಿರ್ಮಾಣ ಮಾಡಲಾಗುವುದು ಎಂದರು.

Advertisement

ಈ ಸಂದರ್ಭದಲ್ಲಿ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಮುಂದಿನ 7 ದಿನಗಳಲ್ಲಿ 41 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅರಣ್ಯದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡುವಂತೆ ಕರೆ ನೀಡಿದರು.

ಉಪಸ್ಥಿತರಿದ್ದ ಹೊನ್ನಾವರದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ಮಾತನಾಡಿ ನಮ್ಮ ರಾಜ್ಯದಲ್ಲಿ ಇರುವ ಶೇ.21 ಅರಣ್ಯವನ್ನು ಶೇ.33 ಕ್ಕೆ ಹೆಚ್ಚಿಸುವ ಕುರಿತು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ ಇಲಾಖೆಯು ಸಾರ್ವಜನಿಕ ಸಹಭಾಗಿತ್ವದೊಂದಿಗೆ 1 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದವರಿಗೆ, ವಿವಿಧ ರೀತಿಯಲ್ಲಿ ಸಂತಸ್ತçರಾದವರಿಗೆ ಇಲಾಖೆಯ ವತಿಯಿಂದ ಪರಿಹಾರದ ಸಚಿವರು ಚೆಕ್ ವಿತರಣೆಮಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಬೋರಯ್ಯ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಅಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next