Advertisement

ಅಭಿವೃದ್ಧಿ ಹೆಸರಲ್ಲಿ ‘ದೇವರಕಾಡು’ನಾಶ !

03:05 AM Jul 07, 2017 | Karthik A |

ಪಡುಬಿದ್ರಿ: ಪರಿಸರಾಸಕ್ತರ ಹೋರಾಟದ ಫಲವಾಗಿ ಉಳಿದುಕೊಂಡಿದ್ದ ನಂದಿಕೂರು ಶ್ರೀ ದುರ್ಗಾ ಪರಮೇಶ್ವರೀ ದೇವರಿಗೆ ಸಂಬಂಧಿಸಿದ ‘ದೇವರ ಕಾಡು’ ಅಭಿವೃದ್ಧಿಯ ಹೆಸರಲ್ಲಿ ವಿನಾಶ ಕಾಣುತ್ತಿದೆ. ನೂರಾರು ಎಕ್ರೆ ಪ್ರದೇಶದಲ್ಲಿ ಬಹು ಅಮೂಲ್ಯ ಗಿಡ ಮರಗಳನ್ನು ಹೊಂದಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದ ಈ ಕಾಡು ಸುಜ್ಲಾನ್‌ ಯೋಜನೆಗಾಗಿ ಗುರುತಿಸಲ್ಪಟ್ಟಿತ್ತು. ಇದೀಗ ವಿಶೇಷ ಆರ್ಥಿಕ ವಲಯ ವಿಸ್ತರಣೆಗಾಗಿ ಬಲಿಯಾಗುತ್ತಿದೆ.

Advertisement

ಜನರ ವಿರೋಧದ ನಡುವೆಯೇ ತಲೆ ಎತ್ತಿದ್ದ ಯುಪಿಸಿಎಲ್‌, ಸುಜ್ಲಾನ್‌ ಇನ್‌ಫ್ರಾಸ್ಟ್ರಕ್ಚರ್‌ ಯೋಜನೆಗಳಿಗಾಗಿ ಈಗಾಗಲೇ ಸಾವಿರಾರು ಮರಗಳನ್ನು ನಾಶ ಮಾಡಲಾಗಿದೆ. ಯುಪಿಸಿಎಲ್‌ ಯೋಜನೆಯಲ್ಲಂತೂ ಪರಿಸರಾಸಕ್ತರ ಹೋರಾಟದ ಫಲವಾಗಿ 300 ಎಕ್ರೆ ಪ್ರದೇಶಗಳ ಮರಗಳನ್ನು ಕಡಿದಿರುವುದಕ್ಕೆ ಸ್ವತಃ ಯುಪಿಸಿಎಲ್‌ ಅರಣ್ಯ ಇಲಾಖೆಗೆ 2 ಕೋಟಿ ರೂ.ಗಳಿಗೂ ಅಧಿಕ ದಂಡವನ್ನು ಪಾವತಿಸಿತ್ತು ಎಂಬುವುದನ್ನೂ ಇಲ್ಲಿ ಸ್ಮರಿಸಬಹುದು.

ಸುಜ್ಲಾನ್‌ ಯೋಜನೆ ಆರಂಭದ ದಿನದಲ್ಲಿಯೇ ನಂದಿಕೂರಿನ ದೇವರ ಕಾಡನ್ನು ಸ್ವಾಧೀನಪಡಿಸಲು ಕೆಐಎಡಿಬಿ ಮುಂದಾಗಿತ್ತಾದರೂ ಸ್ಥಳೀಯರು ಹಾಗೂ ಪರಿಸರಾಸಕ್ತರ ಹೋರಾಟದ ಫಲವಾಗಿ ಉಳಿದು ಕೊಂಡಿತ್ತು. ಭೂ ಸ್ವಾಧೀನವ‌ನ್ನು ಪ್ರಶ್ನಿಸಿ ನಂದಿ ಕೂರು ಜನಜಾಗೃತಿ ಸಮಿತಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿತ್ತು. ಅರ್ಜಿದಾರರ ವಾದವನ್ನು ಪುರಸ್ಕರಿಸಿ ನ್ಯಾಯಾಲಯ ನಾಲ್ಕು ವರ್ಷಗಳ ಕಾಲ ಭೂಸ್ವಾಧಿನಕ್ಕೆ ತಡೆ ಯಾಜ್ಞೆಯನ್ನೂ ನೀಡಿತ್ತು. ದೇವರ ಕಾಡು ಎಂಬ ಬಗ್ಗೆ ಸರಿಯಾದ ದಾಖಲೆ ಇಲ್ಲದ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಐತಿಹಾಸಿಕ ಮಹತ್ವ
115 ಎಕರೆ ಪ್ರದೇಶ ವಿಸ್ತೀರ್ಣದ ಈ ಕಾಡಿನಲ್ಲಿ ಸುಗಂಧ ಭರಿತ ಮರಗಳ ಜತೆಗೆ ಔಷಧೀಯ ಮರಗಳಿತ್ತು. ಇಲ್ಲಿ ಸುಮಾರು 8 ಕಟ್ಟೆಗಳಿದ್ದು, ವರ್ಷಕ್ಕೆ ಎರಡು ಬಾರಿ ನಂದಿಕೂರು ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪ್ರಸಾದ ತಂದು ಕಟ್ಟೆಗಳಿಗೆ ಪೂಜೆ ಸಲ್ಲಿಸಿ ‘ಕೊಡಿ’ ಕಟ್ಟುವ ಕ್ರಮವಿತ್ತು. ಈ ಭಾಗದ ಕೃಷಿಕರು ಮರಗಳ ಸೊಪ್ಪು ಕಟಾವು ಮಾಡುತ್ತಿದ್ದರೆಂದು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರಧಾನ ಅರ್ಚಕ ಮಧ್ವರಾಯ ಭಟ್‌ ಹೇಳುತ್ತಾರೆ. ಕಾರ್ಕಳ – ಕುದುರೆಮುಖ ರಾಜ್ಯ ಹೆದ್ದಾರಿಯ ಸನಿಹದಲ್ಲಿಯೇ ಇರುವ ಈ ಪ್ರದೇಶ ವರ್ಷವಿಡೀ ತಂಪಿನಿಂದ ಕೂಡಿತ್ತು. ಇದೀಗ ಈ ಪ್ರದೇಶದಲ್ಲಿನ ಈ ಕಾಡು ನಾಶದಿಂದ ಜನ ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ.

2010ರಲ್ಲಿ ದೇವರಕಾಡನ್ನು ಸ್ವಾಧೀನಪಡಿಸುವುದರ ವಿರುದ್ಧ ನಂದಿಕೂರು ಜನಜಾಗೃತಿ ಸಮಿತಿ ಚೆನ್ನೈಯ ಹಸಿರು ಪೀಠದಲ್ಲಿ ದಾವೆ ಹೂಡಿತ್ತು. ಆದರೆ ಅರಣ್ಯ ಇಲಾಖೆ ಮತ್ತು ಸಂಬಂಧಿಸಿದ ಇತರ ಇಲಾಖೆಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಈ ಭಾಗದ ಜನರಿಗೆ ದ್ರೋಹ ಮಾಡಿವೆ. ಯುಪಿಸಿಎಲ್‌ ಸ್ಥಾಪನೆಯಿಂದ ಈ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಳವಾದರೂ ಇಂತಹಾ ಕಾಡಿನಿಂದಾಗಿ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಿತ್ತು. 
– ಜಯಂತ್‌ ಕುಮಾರ್‌, ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷರು

Advertisement

ಸರಕಾರ ಪರಿಸರರಕ್ಷಣೆ ನಮ್ಮ ಹೊಣೆ ಎನ್ನುತ್ತ ಪ್ರತೀ ವರ್ಷ ವನ ಮಹೋತ್ಸವ ಆಚರಿಸುತ್ತಿದೆ. ಉದ್ದಿಮೆಗಳ ಸ್ಥಾಪನೆಗಾಗಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಅರಣ್ಯವನ್ನು ನಾಶ ಮಾಡುವುದು ಸರಿಯಲ್ಲ.
– ದಿನೇಶ್‌ ಕೋಟ್ಯಾನ್‌, ತಾ.ಪಂ. ಸದಸ್ಯರು

ಈ ಕಾಡಿನ ಕುರಿತಾಗಿ ಹಸಿರು ಪೀಠದ ತೀರ್ಪು ನಮ್ಮ ಪರವಾಗಿ ಬಂದಿದೆ. ಹಾಗಾಗಿ ಅರಣ್ಯ ಇಲಾಖೆ ಪರವಾನಿಗೆಯೊಂದಿಗೆ ಗಿಡಗಂಟಿಗಳ ಕಟಾವು ಮಾಡಲಾಗುತ್ತಿದೆ.
– ಅಶೋಕ್‌ ಶೆಟ್ಟಿ, ಸುಜ್ಲಾನ್‌ ಇನ್‌ಫ್ರಾಸ್ಟ್ರಕ್ಚರ್‌ ಹಿರಿಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next