Advertisement

ಅಳಿದುಳಿದ ಆಹಾರ ನಾಶಪಡಿಸಿದ ಅರಣ್ಯ ಸಿಬ್ಬಂದಿ

07:32 AM Dec 15, 2018 | |

ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪುರ ವಲಯ, ಯಡಿಯಾರಳ್ಳಿ ಮೀಸಲು ಅರಣ್ಯದೊಳಗಿದೆ. ಗ್ರಾಮ ಕಂದಾಯ ಪ್ರದೇಶದಲ್ಲಿದ್ದು, ಮಾರಮ್ಮ ದೇವಾಲಯ ಅರಣ್ಯ ಪ್ರದೇಶಕ್ಕೆ ಸೇರಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದೆಂದು ಅರಣ್ಯಾಧಿಕಾರಿಗಳು ದೇವಾಲಯಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸಿರಲಿಲ್ಲ. ಶುಕ್ರವಾರ ವಿಷಯುಕ್ತ ಆಹಾರ ಸೇವನೆಯಿಂದ 11 ಜನರು ಮೃತಪಟ್ಟು, ಕಾಗೆಗಳೂ ಸತ್ತಿದ್ದರಿಂದ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅರಣ್ಯದಂಚಿನಲ್ಲೇ ದೇವಾಲಯ
ಇರುವುದರಿಂದ ಎಲೆಗಳಲ್ಲಿದ್ದ ಅಳಿದುಳಿದ ವಿಷಯುಕ್ತ ಆಹಾರ ವನ್ಯಜೀವಿಗಳು ತಿನ್ನಬಾರದೆಂದು ಕ್ರಮ ಕೈಗೊಂಡರು. ಸತ್ತಿದ್ದ ಕಾಗೆಗಳನ್ನೂ ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಂಡರು. ಸ್ಥಳದಲ್ಲೇ ಪೊಲೀಸ್‌ ಮತ್ತು ಅರಣ್ಯ
ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಇಡೀ ಪ್ರದೇಶವನ್ನು ಕಾಯುತ್ತಿದ್ದಾರೆ. ತೀವ್ರ ಮುನ್ನೆಚ್ಚರಿಕೆ ವಹಿಸಿದ್ದಾರೆ.

Advertisement

ಎಲ್ಲಿದೆ ಸುಳ್ವಾಡಿ?
ಸುಳ್ವಾಡಿ ಗ್ರಾಮ ಕೊಳ್ಳೇಗಾಲ ತಾಲೂಕಿನ ಹನೂರಿ ನಿಂದ ಸುಮಾರು 35 ಕಿ.ಮೀ. ಅಂತರದಲ್ಲಿದೆ. ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಹನೂರಿನಿಂದ ಹೊರಟು, ರಾಮಾಪುರ ಹಾದು, ನಾಲ್‌ರೋಡ್‌
ನಿಂದ ಎಡಕ್ಕೆ ಹೋದರೆ ಈ ಗ್ರಾಮ ಸಿಗುತ್ತದೆ. ಸುಳ್ವಾಡಿ ಗ್ರಾಮ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಯಡಿಯಾರಳ್ಳಿ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿದೆ. ರಾಮಾಪುರ ವಲಯಕ್ಕೆ ಸೇರಿದೆ. ಈ ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆಯಿದೆ. ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನ ಪುಟ್ಟದಾಗಿದ್ದು, ಇದಕ್ಕೆ ಗೋಪುರ ನಿರ್ಮಾಣ ಮಾಡುವ ಸಂಬಂಧ ನಡೆದ ಕಾರ್ಯಕ್ರಮವೇ ಎಂಟು ಜನರ ಪ್ರಾಣಕ್ಕೆ ಎರವಾಗಿದ್ದು ವಿಪರ್ಯಾಸ. 

ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದೇವೆ. ನಿಖರವಾದ ಕಾರಣವನ್ನು ಈಗಲೇ ಹೇಳಲಾಗುವುದಿಲ್ಲ. ಆಹಾರದ ಮಾದರಿ,
ವಾಂತಿಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪೋಸ್ಟ್‌ಮಾರ್ಟಂ ವರದಿ ಹಾಗೂ ಆಹಾರ ಮಾದರಿ
ಪರೀಕ್ಷೆ ಎಲ್ಲವೂ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ.

 ●ಠರ್ಮೇಂದರ್‌ ಕುಮಾರ್‌ ಮೀನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next