ಬನಹಟ್ಟಿ : ಇಂದಿನ ದಿನಮಾನಗಳಲ್ಲಿ ಅರಣ್ಯ ಬೆಳೆಸುವುದು ಅನಿವಾರ್ಯವಾಗಿದೆ. ಅದನ್ನು ಬೆಳೆಸುವುದರ ಜತೆಗೆ ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ನಗರದಲ್ಲಿ ಅರಣ್ಯ ಇಲಾಖೆ ವತಿಯಿಂದ ಎಸ್‌ಸಿಪಿ, ಎಸ್‌ಟಿಪಿ ಯೋಜನೆಯಡಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಸೋಲಾರ್ ವಾಟರ್ ಹೀಟರ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪರಿಸರದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಮುಂದಿನ ಪೀಳಿಗೆಗೆ ಅರಣ್ಯ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರು ಕಕೈ ಜೋಡಿಸಿ ಪರಿಸರ ಉಳಿಸುವ ಅಳಿಲು ಸೇವೆ ಮಾಡಬೇಕು. ಸರಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಮಖಂಡಿ ತಾಲೂಕು ಅರಣ್ಯಾಧಿಕಾರಿ ಎಸ್. ಡಿ. ಬಬಲಾದಿ, ಸರಕಾರ ಪರಿಸರ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಹಿಂದುಳಿದ ವರ್ಗಗಳ ಜನರಿಗಾಗಿ ಸೋಲಾರ ವಾಟರ್ ಹೀಟರ್ ನೀಡುತ್ತಿದ್ದು ಸರಕಾರ ನೀಡುವ ವಸ್ತುಗಳನ್ನು ದುರ್ಬಳಕೆ ಮಾಡದೇ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ 32 ಸಾವಿರ ವೆಚ್ಚದ 5 ಜನ ಫಲಾನುಭವಿಗಳಿಗೆ ಸೋಲಾರ ವಾಟರ್ ಹೀಟರ್ ಸೆಟ್‌ನ್ನು ವಿತರಿಸಲಾಯಿತು. ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಪ್ರಭು ಪೂಜಾರಿ, ತಾಪಂ ಸದಸ್ಯ ಹಣಮಂತ ತೇಲಿ, ಬಾಳಪ್ಪ ಜಗದಾಳ ಪ್ರಭು ಬಾಗಿ, ಈರಣ್ಣ ಚಿಂಚಖಂಡಿ, ಅರಣ್ಯ ಅಧಿಕಾರಿಗಳಾದ ಮಲ್ಲು ನಾವಿ, ಎಸ್. ಆರ್. ರಾಠೊಡ, ಅಕ್ಷತಾ ಜಂಬಗಿ ಇದ್ದರು.