ಮೈಸೂರು: ಕಟ್ಟಡ, ಸ್ಮಾರಕಗಳಷ್ಟೇ ಪಾರಂಪರಿಕ ತಾಣಗಳಲ್ಲ. ಜೀವವೈವಿಧ್ಯದ ಆಗರವಾಗಿರುವ ಕಾಡುಗಳು, ನದಿ, ಕಣಿವೆ, ಗಿರಿಶ್ರೇಣಿಗಳು ಪಾರಂಪರಿಕವೇ ಆಗಿದೆ ಎಂದು ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ಹೇಳಿದರು.
ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವಸ್ತುಪ್ರದರ್ಶನ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಪಾರಂಪರಿಕ ಸಪ್ತಾಹದಲ್ಲಿ ಮಾತನಾಡಿದರು.
ಸ್ಮಾರಕಗಳು ಮಾನವನ ಸಾಧನೆಯ ಪ್ರತಿಬಿಂಬ ಗಳಾಗಿವೆ. ನಾವೆಲ್ಲ ಕಟ್ಟಡ, ಸ್ಮಾರಕಗಳನ್ನಷ್ಟೇ ಪಾರಂಪರಿಕ ಎಂದು ಭಾವಿಸುತ್ತೇವೆ. ಆದರೆ ನಮ್ಮ ಸುತ್ತಲಿನ ಜೀವವೈವಿಧ್ಯದ ಆಗರವಾಗಿರುವ ಕಾಡುಗಳು, ನದಿ ಕಣಿವೆ, ಗಿರಿಶ್ರೇಣಿಗಳು ಪಾರಂಪರಿಕ ತಾಣಗಳಾಗಿವೆ ಎಂದು ತಿಳಿಸಿದರು.
ದೇಶದ ಹಿಮಾಲಯ ರಾಷ್ಟ್ರೀಯ ಉದ್ಯಾನ, ನಂದಾದೇವಿ ಹೂಕಣಿವೆ, ಪಶ್ಚಿಮ ಘಟ್ಟಗಳು, ಸುಂದರ್‌ಬನ್ಸ್ ಕೂಡ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿವೆ. ಇವೆಲ್ಲವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
Related Articles
ಇತಿಹಾರ ತಜ್ಞ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ದೇಗುಲ, ಮಸೀದಿ, ಚರ್ಚ್ ಸೇರಿ ದಂತೆ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು ಕೇವಲ ಆಯಾ ಸಮುದಾಯಕ್ಕೆ ಮಾತ್ರ ಸೀಮಿತ ವಲ್ಲ. ಅದು ಎಲ್ಲರಿಗೂ ಸೇರಿದ ಆಸ್ತಿಯಾಗಿದ್ದು, ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಶ್ರೀರಂಗಪಟ್ಟಣದ ದರಿಯಾದೌಲತ್, ನಗರದ ಸೇಂಟ್ ಫಿಲೋಮಿನಾ, ಹಳೇಬೇಡಿನ ಹೊಯ್ಸಳೇಶ್ವರ ದೇಗುಲ ಎಲ್ಲವೂ ನಮ್ಮವೇ. ಅವುಗಳನ್ನು ಉಳಿಸಬೇಕಾಗಿರುವುದು ಜವಾಬ್ದಾರಿ. ಯಾರಾದರೂ ಕಿಡಿಗೇಡಿಗಳು ಪಾರಂಪರಿಕ ಕಟ್ಟಡಗಳ ಸ್ವರೂಪ ಹಾಳು ಮಾಡುತ್ತಿದ್ದರೆ, ಹೆಸರು ಬರೆದು ವಿಕೃತಿ ಮೆರೆಯುತ್ತಿದ್ದರೆ ಪ್ರಶ್ನಿಸಬೇಕು ಎಂದು ಹೇಳಿದರು.
ಯುನೆಸ್ಕೋ ಘೋಷಿಸಿರುವ 40 ವಿಶ್ವ ಪಾರಂಪರಿಕ ತಾಣಗಳು ದೇಶದಲ್ಲಿವೆ. ಭಾರತವನ್ನೇ ವಿಶ್ವ ಪಾರಂಪರಿಕ ತಾಣವಾಗಿ ಮಾಡುವಷ್ಟು ಐತಿಹಾಸಿಕ ಸ್ಥಳಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಪಾಕಿಸ್ತಾನ, ಅಘ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ದಕ್ಷಿಣಾ ಏಷ್ಯದಲ್ಲಿ ಸಾವಿರಾರು ಪಾರಂಪರಿಕ ಸ್ಥಳಗಳಿದ್ದು, ಐತಿಹಾಸಿಕ ಮಹತ್ವವನ್ನು ಯಾರೂ ಮರೆಯಬಾರದು ಎಂದರು.
ವಿಶ್ವ ಪಾರಂಪರಿಕ ತಾಣವೆಂದು ಘೋಷಣೆ ಯಾದರೆ ಯುನೆಸ್ಕೋ ನಿಯಮಾವಳಿ ಪಾಲಿಸಬೇಕು. ಮೇಲುಕೋಟೆ, ನಂಜನಗೂಡಿನಂತ ಪಾರಂಪರಿಕ ಊರುಗಳಲ್ಲಿ ಮನೆ ದುರಸ್ತಿ ಮಾಡಬೇಕೆಂದರೆ ಅನುಮತಿ ಬೇಕು. ಅದನ್ನು ಸಮಸ್ಯೆಯೆಂದು ಭಾವಿಸದೇ ಜವಾಬ್ದಾರಿಯೆಂದೇ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಆಧುನಿಕ ಕಟ್ಟಡವಾದರೂ ನಿರ್ವಹಣೆ ಮಾಡದಿದ್ದರೆ ಶಿಥಿಲಗೊಳ್ಳುತ್ತದೆ. 100 ವರ್ಷದ ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು, ನಮ್ಮ ಕಣ್ಣೆದುರೇ ಒಂದು ಭಾಗ ಬಿದ್ದಿದೆ. ಹೀಗಾಗಿ ಹಳೆಯ ಕಟ್ಟಡಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅದಕ್ಕಾಗಿ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ನವ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನಿಡಿದರು.
ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ಟೆರಿಷಿಯನ್ ಕಾಲೇಜು, ಮೈಸೂರು ವಿಶ್ವವಿದ್ಯಾಲ ಯದ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಲಾಖೆಯ ವಸ್ತುಸಂಗ್ರಹಾಲ ಯವನ್ನು ವೀಕ್ಷಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದರು. ಇತಿಹಾಸ ತಜ್ಞರಾದ ಡಾ.ಎನ್.ಎಸ್. ರಂಗರಾಜು, ಡಾ.ಎಚ್.ಎಂ. ಸಿದ್ದನಗೌಡರ್, ಇಲಾಖೆಯ ಉಪನಿರ್ದೇಕಿ ಸಿ.ಎನ್.ಮಂಜುಳಾ, ಎಂಜಿನಿಯರ್ ಸಿ.ಟಿ.ಮಹೇಶ ಇದ್ದರು.