ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ನಿರ್ದಿಷ್ಟ ದಾಖಲೆಗಳ ಸಾಕ್ಷ್ಯಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಮಾನದಂಡ ಕಾನೂನಿನಲ್ಲಿ ಅಡಕವಾಗಿದ್ದಾಗಲೂ ಸಹಿತ ಉತ್ತರ ಕನ್ನಡ ಜಿಲ್ಲೆಯಲ್ಲಿ 70,000 ಅರಣ್ಯವಾಸಿಗಳ ಅರ್ಜಿಗಳನ್ನು ಕಾನೂನು ಬಾಹಿರವಾಗಿ ತೀರಸ್ಕಾರವಾಗಿರುವುದು ಖಂಡನಾರ್ಹ. ಅರಣ್ಯವಾಸಿಗಳಿಗೆ ಉಂಟಾದ ಅನ್ಯಾಯಕ್ಕೆ ಜನಪ್ರತಿನಿಧಿಗಳೇ ಕಾರಣ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ತಾಲೂಕಿನ ಹುಲೇಕಲ್ ವಲಯ ಅರಣ್ಯ ವ್ಯಾಪ್ತಿಯ ಅರಣ್ಯವಾಸಿಗಳನ್ನು ಉಳಿಸಿ- ಜಾಥ ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು.
ಅರಣ್ಯ ಹಕ್ಕು ಕಾಯಿದೆಯ ಮಂಜೂರಿಯು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿದೇ ಅರ್ಜಿ ವಿಲೇವಾರಿ ಮಾಡಿರುವುದು ವಿಷಾದಕರ. ಅರಣ್ಯ ಅತೀಕ್ರಮಣದಾರರ ಸಾಗುವಳಿ ಪ್ರದೇಶವು ಮೂರು ತಲೆಮಾರಿನ ಜನವಸತಿ ಪ್ರದೇಶವೆಂಬ ಮಾನದಂಡ ಆಧಾರದ ಮೇಲೆ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ನೀಡಬೇಕು ವಿನಹ, ಅರಣ್ಯವಾಸಿ ಅತೀಕ್ರಮಿಸಿರುವ ಮೂರು ತಲೆಮಾರಿನ ದಾಖಲೆಗೆ ಮಂಜೂರಿಗೆ ಒತ್ತಾಯಿಸುವುದು ಕಾನೂನು ಬಾಹಿರವೆಂದು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 15 ವರ್ಷಗಳಾದರೂ ಆಡಳಿತ ವ್ಯವಸ್ಥೆಯ ಇಚ್ಛಾಶಕ್ತಿ ಹಾಗೂ ಜನಪ್ರತಿನಿಧಿಗಳಿಗೆ ಕಾನೂನಿನ ಜ್ಞಾನದ ಕೊರತೆಯಿಂದ ಅರಣ್ಯವಾಸಿಗಳು ಭೂಮಿ ಮಂಜೂರಿಗೆ ವಂಚಿತರಾಗುವ ಪ್ರಸಂಗ ಒದಗಿದೆ ಎಂದು ರವೀಂದ್ರ ನಾಯ್ಕ ಖಾರವಾಗಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಜಿಲ್ಲಾದ್ಯಂತ ಅರಣ್ಯಸಿಬ್ಬಂದಿಗಳಿಂದ ಅರಣ್ಯವಾಸಿಗಳ ಮೇಲೆ ಜರಗುತ್ತಿರುವ ದೌರ್ಜನ್ಯ, ಕಿರುಕುಳ ವಿರುದ್ಧ ಸಭೆಯಲ್ಲಿ ಅರಣ್ಯವಾಸಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು