Advertisement

ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ

01:10 AM Apr 19, 2021 | Team Udayavani |

ಕಾರ್ಕಳ : “ಮನೆಯಲ್ಲಿ ನಮ್ಮನ್ನೇ ನಂಬಿ ಸಂಸಾರವಿದೆ. ನಾವು ಹಗಲು -ರಾತ್ರಿ ಕಾಡಿನಲ್ಲಿರುತ್ತೇವೆ. ನಮಗೂ  ಮನೆಯಲ್ಲಿರುವರಿಗೂ ರಕ್ಷಣೆಯಿಲ್ಲ…’

Advertisement

ಹೀಗೆ ಅಳಲು ತೋಡಿಕೊಂಡವರು ರಾಜ್ಯ ವನ್ಯಜೀವಿ ವಿಭಾಗದ ಹೊರಗುತ್ತಿಗೆ ನೌಕರರು. ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಇವರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಬಂಡೀಪುರ, ಚಾಮರಾಜನಗರ, ನಾಗರಹೊಳೆ, ಭದ್ರಾ, ದಾಂಡೇಲಿ, ಬನ್ನೇರುಘಟ್ಟ, ಕೊಡಗು, ಕುದುರೆಮುಖ ವನ್ಯಧಾಮಗಳಲ್ಲಿ 1,500ಕ್ಕೂ ಅಧಿಕ ಹೊರ ಗುತ್ತಿಗೆ ನೌಕರರಿದ್ದಾರೆ. ಕಳ್ಳಬೇಟೆ, ಮರ ಕಳವು, ಕಾಳ್ಗಿಚ್ಚು ತಡೆ, ಒತ್ತುವರಿ ತಡೆ, ಶಿಬಿರ ಕೇಂದ್ರ ಉಸ್ತುವಾರಿ, ಗಸ್ತು ಇತ್ಯಾದಿ ನಿರ್ವಹಿಸುವ ಇವರ ಶ್ರಮಕ್ಕೆ ತಕ್ಕ ಫ‌ಲ ಸಿಗುತ್ತಿಲ್ಲ.

ಅಲ್ಪ ವೇತನ
ನಿಯಮಾನುಸಾರ ದಿನಕ್ಕೆ 8 ತಾಸುಗಳ ದುಡಿಮೆಯ ಅವಧಿ ಇವರದು. ಆದರೆ ದಿನದ 24 ತಾಸು ದುಡಿಸಿಕೊಳ್ಳಲಾಗುತ್ತಿದೆ. 14,885 ರೂ. ವೇತನ ಕೈಸೇರಬೇಕಿದ್ದರೂ ಗುತ್ತಿಗೆದಾರರು 11,200 ರೂ. ಮಾತ್ರ ನೀಡು ತ್ತಿದ್ದಾರೆ. ಹೆಚ್ಚುವರಿ ದುಡಿಮೆಗೆ ಚಿಕ್ಕಾಸಿಲ್ಲ. ಪಿಎಫ್, ಇಎಸ್‌ಐ ಇದ್ದರೂ ಖಾತೆಗೆ ಹಣ ಜಮೆ ಆಗುವ ಖಾತರಿಯಿಲ್ಲ.

ಅರಣ್ಯ ಗಸ್ತು ಸಂದರ್ಭ ಭದ್ರತೆಯಿಲ್ಲ. ಪೆಟ್ರೋಲ್‌ ವೆಚ್ಚ ಕೈಯಿಂದಲೇ ಭರಿಸಬೇಕು. ದಿನವಿಡೀ ದುಡಿದರೂ 8 ತಾಸುಗಳ ದುಡಿಮೆಗೆ ಮಾತ್ರ ಸಂಬಳ ನೀಡುತ್ತಾರೆ ಎಂದು ನೌಕರರು ಬೇಸರ ವ್ಯಕ್ತಪಡಿಸುತ್ತಾರೆ.

Advertisement

ರಕ್ಷಣೆಯಿಲ್ಲದ ಬದುಕು
ಒಂದೊಂದು ವಲಯಗಳಲ್ಲಿ ಒಟ್ಟು 4 ಕಳ್ಳಬೇಟೆ ತಡೆ ಶಿಬಿರಗಳಿವೆ. ಒಟ್ಟು 4 ದಿನಗೂಲಿ ನೌಕರರು ಹಗಲು-ರಾತ್ರಿ ಅಲ್ಲೇ ಇರಬೇಕು. ಕುದುರೆಮುಖ ವನ್ಯಜೀವಿ ವಿಭಾಗದ ಬೆಳ್ತಂಗಡಿ, ಕೆರೆಕಟ್ಟೆ, ಕುದುರೆಮುಖ, ಕಾರ್ಕಳ, ಹೆಬ್ರಿ, ಸಿದ್ದಾಪುರ, ಕೊಲ್ಲೂರು, ಅಮಾಸೆಬೈಲು ಈ ಎಂಟು ವಲಯಗಳಲ್ಲಿ 120ಕ್ಕೂ ಹೆಚ್ಚು ದಿನಗೂಲಿ ನೌಕರರಿದ್ದಾರೆ.

ಬದಲಾಯಿತು ಚಿತ್ರಣ
2017ಕ್ಕೂ ಪೂರ್ವದಲ್ಲಿ ಇವರು ಅರಣ್ಯ ಇಲಾಖೆಯ ದಿನಗೂಲಿ ನೌಕರರೇ ಆಗಿದ್ದರು. ಖಾಯಂ ಆಗ ಬಹುದೆಂಬ ಆಶಾಭಾವನೆಯಿಂದ 20ರಿಂದ 25 ವರ್ಷಗಳಿಂದ ಕೆಲಸ ನಿರ್ವಹಿಸುತ್ತ ಬಂದಿದ್ದರು. 2017ರಲ್ಲಿ ಏಕಾಏಕಿ ಇಲಾಖೆಯು ಇವರನ್ನು ಹೊರಗುತ್ತಿಗೆ ನಿಯಮದಡಿ ತಂದಿತು.

ಆಗಸ್ಟ್‌ನಲ್ಲಿ ಪ್ರತಿಭಟನೆ
ಅನ್ಯಾಯ, ತಾರತಮ್ಯ ವಿರೋಧಿಸಿ ಮುಂದಿನ ಆಗಸ್ಟ್‌ ನಲ್ಲಿ ವನ್ಯಜೀವಿ ವಿಭಾಗಗಳ ರಕ್ಷಣ ಶಿಬಿರಗಳನ್ನು ಬಂದ್‌ ಮಾಡಿ ಪ್ರತಿಭಟಿಸಲು ವಾಚರ್‌ಗಳ ಸಂಘಟನೆ ನಿರ್ಧರಿಸಿದೆ.

ಗುತ್ತಿಗೆ ನೌಕರರಿಗೆ ಅನ್ಯಾಯ ಕುರಿತು ದೂರು ಬಂದಿಲ್ಲ. ವಂಚನೆಯಾಗುತ್ತಿದ್ದಲ್ಲಿ ಆಯಾ ಡಿಎಫ್ಒಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.
- ಪ್ರಕಾಶ್‌ ನಾಟಲ್ಕರ್‌, ಸಿಸಿಎಫ್, ಮಂಗಳೂರು ವೃತ್ತ ವನ್ಯಜೀವಿ ವಿಭಾಗ

ಸಂಬಳ, ಸವಲತ್ತು, ಪರಿಹಾರ ಎಲ್ಲದರಲ್ಲೂ ತಾರತಮ್ಯವಿದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ.
– ನಾಗರಾಜ್‌, ಅರಣ್ಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next