Advertisement

ಅರಣ್ಯ ಖಾತೆಗೆ ಸುಧಾಕರ್‌ ಬೇಡಿಕೆ?

09:48 AM Dec 14, 2019 | Team Udayavani |

ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಸತತ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಕೀರ್ತಿಗೆ ಪಾತ್ರರಾದ ಡಾ.ಕೆ.ಸುಧಾಕರ್‌, ಈಗ ಅರಣ್ಯ ಖಾತೆಗೆ ಪಟ್ಟು ಹಿಡಿದಿದ್ದಾರೆಂಬ ಮಾತು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸುಧಾಕರ್‌ ನೇಮಕಗೊಂಡಿದ್ದರು. ಆದರೆ, ಅವರ ಆಯ್ಕೆ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಹೈಕೋರ್ಟ್‌ ಮೇಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ಅಂತಿಮ ತೀರ್ಪು ಬರುವ ಮೊದಲೇ ಸುಧಾಕರ್‌ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ರಾಜೀನಾಮೆ ಕೊಟ್ಟಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದೇ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಸುಧಾಕರ್‌ ಇದರ ಮೇಲೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಉಪ ಚುನಾವಣೆ ಫ‌ಲಿತಾಂಶ ಹೊರ ಬಿದ್ದ ನಂತರ ಗೆದ್ದ 12 ಮಂದಿ ಬಿಜೆಪಿ ಶಾಸಕರು ಸಚಿವ ಸಂಪುಟ ವಿಸ್ತರಣೆ ಬಗ್ಗೆ, ವಿಶೇಷವಾಗಿ ಖಾತೆ ಹಂಚಿಕೆ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿ ಚರ್ಚಿಸಿದ್ದು, ಈ ವೇಳೆ ಸುಧಾಕರ್‌ ಅರಣ್ಯ ಖಾತೆ ಬಗ್ಗೆ ಒಲವು ತೋರಿದ್ದಾರೆಂದು ತಿಳಿದು ಬಂದಿದೆ. ಆದರೆ, ಸುಧಾಕರ್‌ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್‌ ಬಳಿ ಇರುವ ಉನ್ನತ ಶಿಕ್ಷಣ ಖಾತೆ ಅಥವಾ ವೈದ್ಯಕೀಯ ಶಿಕ್ಷಣ ಖಾತೆ ಹಂಚಿಕೆ ಮಾಡುವ ಕುರಿತು ಯಡಿಯೂರಪ್ಪ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಯಾವ ಖಾತೆ ಕೊಡಬೇಕು ಎನ್ನುವುದು ಸಿಎಂ ವಿವೇಚನಗೆ ಬಿಟ್ಟಿದ್ದು. ನೂತನ ಶಾಸಕರ ನೈಪುಣ್ಯತೆ, ಕೌಶಲ್ಯ ನೋಡಿಕೊಂಡು ಖಾತೆ ಹಂಚಿಕೆ ಆಗುವ ವಿಶ್ವಾಸವಿದೆ. ಮೊದಲೇ ಹೇಳಿದಂತೆ ಮಂತ್ರಿ ಸ್ಥಾನಕ್ಕೆ ಯಾವುದೇ ಲಾಬಿ ಮಾಡುವುದಿಲ್ಲ. ಪಕ್ಷ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
 -ಡಾ.ಕೆ.ಸುಧಾಕರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next