Advertisement

Forest: ವನ್ಯಜೀವಿ ಉತ್ಪನ್ನಗಳಿದ್ದರೆ ಮರಳಿಸಿ- ಜನರಿಗೆ ಅರಣ್ಯ ಸಚಿವರ ಮನವಿ

10:30 PM Oct 26, 2023 | Team Udayavani |

ಬೆಂಗಳೂರು: “ಎಲ್ಲರಿಗೂ ಕಾನೂನು ಒಂದೇ. ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಹೊಂದಿರುವವರು ಸರ್ಕಾರಕ್ಕೆ ಮರಳಿಸಲು ಕೊನೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುತ್ತದೆ”

Advertisement

– ಹೀಗೆಂದು ರಾಜ್ಯ ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಮಾತುಗಳಲ್ಲಿ ಗುರುವಾರ ತಿಳಿಸಿದ್ದಾರೆ. ಚಂದನವನದ ಕೆಲ ಪ್ರಮುಖರಿಗೆ ಹುಲಿ ಉಗುರು ಇರಿಸಿಕೊಂಡ ಬಗ್ಗೆ ತನಿಖೆ, ನೋಟಿಸ್‌ ನೀಡುವ ಪ್ರಕ್ರಿಯೆ ಬಿರುಸುಗೊಂಡಂತೆಯೇ ಸಚಿವರು ಈ ಮಾತುಗಳನ್ನಾಡಿದ್ದಾರೆ.

ಗುರುವಾರ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಂತರ ಮಾತನಾಡಿದ ಸಚಿವ ಈಶ್ವರ ಖಂಡ್ರೆ “ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಟ್ರೋಫಿ, ಫ‌ಲಕ, ಪೆಂಡೆಂಟ್‌ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲೀಕತ್ವದ ಹಕ್ಕು ಪಡೆದುಕೊಳ್ಳಲು 2003ರವರೆಗೆ ಹಲವು ಅವಕಾಶ ನೀಡಲಾಗಿತ್ತು. ಹಲವರು ತಮ್ಮ ಬಳಿ ಇದ್ದ ವನ್ಯಜೀವಿ ಉತ್ಪನ್ನಗಳಿಗೆ ಮಾಲೀಕತ್ವದ ಹಕ್ಕು ಪಡೆದಿದ್ದಾರೆ. ಇನ್ನೂ ಅನೇಕರು ದೃಢೀಕರಣ ಮತ್ತು ಪ್ರಮಾಣ ಪತ್ರ ಪಡೆದಿಲ್ಲ. ಅಂತಹವರಿಗೆ ವನ್ಯಜೀವಿ ಉತ್ಪನ್ನಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲು ಕೊನೆಯ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ವನ್ಯಜೀವಿಯ ಯಾವುದೇ ಆಭರಣ ತಯಾರಿಸುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂಬ ಫ‌ಲಕ ಹಾಕುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಕಾನೂನು ಎಲ್ಲರಿಗೂ ಒಂದೇ:
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರೂ ಸರಿಸಮಾನರು. ಈ ಹಿನ್ನೆಲೆಯಲ್ಲಿ ಈಗಾಗಲೇ ಗಣ್ಯರೂ ಸೇರಿದಂತೆ ಹಲವರಿಗೆ ನೋಟಿಸ್‌ ನೀಡಲಾಗಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ನಟ ಜಗ್ಗೇಶ್‌ ಸೇರಿದಂತೆ ಬಹುತೇಕ ಎಲ್ಲರೂ ತನಿಖೆಗೆ ಸಹಕಾರ ನೀಡಿದ್ದಾರೆ. ವರ್ತೂರು ಸಂತೋಷ್‌ ಮಾತ್ರ ಸಹಕಾರ ಕೊಡದೆ ಇರುವುದಕ್ಕೆ ಬಂಧಿಸಲಾಗಿದೆ. ಆರೋಪಿ ತಪ್ಪೊಪ್ಪಿಕೊಂಡ ನಂತರ ಬಂಧಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಅಳಿವಿನಂಚಿನಲ್ಲಿರುವ, ಅಮೂಲ್ಯ ಮತ್ತು ಅಪರೂಪದ ವನ್ಯ ಜೀವಿಗಳಾದ ಹುಲಿ, ಚಿರತೆ, ಚಿಂಕಾರ, ಕೃಷ್ಣಮೃಗ, ಸಾಂಬಾರ್‌, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನು ಪರಿಶಿಷ್ಟ 1ರಲ್ಲಿ ಪಟ್ಟಿ ಮಾಡಲಾಗಿದ್ದು, ಇಂತಹ ಪ್ರಾಣಿಗಳನ್ನು ಕೊಲ್ಲುವುದು, ಬೇಟೆ ಆಡುವುದು, ಅಂತಹ ಪ್ರಾಣಿಗಳ ದೇಹದ ಯಾವುದೇ ಭಾಗದಿಂದ ತಯಾರಿಸಿದ ವಸ್ತುವನ್ನು ಅಲಂಕಾರಿಕವಾಗಿ ಮನೆಯಲ್ಲಿಡುವುದು, ಧರಿಸುವುದು ಕೂಡ ಅಪರಾಧ ಎಂದು ತಿಳಿಸಿದರು.

Advertisement

ನಕಲಿ ಹುಲಿ ಉಗುರೂ ಬೇಡ:
ಚಿತ್ರನಟರು, ಗಣ್ಯರು ನಕಲಿ ಹುಲಿ ಉಗುರಿನ ಲಾಕೆಟ್‌ ಕೂಡ ಧರಿಸಿದರೂ ಇತರರಿಗೆ ಪ್ರೇರಣೆ ಸಿಗುತ್ತದೆ. ಅವರಿಗೆ ಸಾವಿರಾರು ಅಭಿಮಾನಿಗಳು ಇರುತ್ತಾರೆ. ಅವರು ಕೂಡ ತಮ್ಮ ನಾಯಕನಂತೆ ಹುಲಿ ಉಗುರಿನ ಲಾಕೆಟ್‌ ಧರಿಸಲು ಬಯಸುತ್ತಾರೆ. ಆಗ ಬೇಡಿಕೆ ಹೆಚ್ಚುತ್ತದೆ. ವನ್ಯಜೀವಿಗಳ ಹತ್ಯೆ ಆಗುತ್ತದೆ. ಹೀಗಾಗಿ ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಗಣ್ಯರು, ನಟರು ನಕಲಿ ಪೆಂಡೆಂಟ್‌ ಕೂಡ ಧರಿಸಬಾರದು ಎಂದು ಮನವಿ ಮಾಡಿದರು.

1926
ವನ್ಯಜೀವಿ ಅಂಗಾಂಗಗಳಿಂದ ತಯಾರಿಸಿದ ಉತ್ಪನ್ನಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆ ಸಹಾಯವಾಣಿ 1926ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

ಏನೇನು ಧರಿಸುವಂತಿಲ್ಲ?
* ವನ್ಯಜೀವಿ ಅಂಗಾಂಗದಿಂದ ತಯಾರಿಸಿದ ಟ್ರೋಫಿ, ಫ‌ಲಕ, ಪೆಂಡೆಂಟ್‌
*ಹುಲಿ ಉಗುರು ಹಾಗೂ ಆನೆ ಕೂದಲಿರುವ ಆಭರಣ
* ಜಿಂಕೆ ಚರ್ಮ
* ಆನೆ ದಂತದಿಂದ ಮಾಡಿದ ಕಲಾಕೃತಿಗಳು
* ಜಿಂಕೆ, ಸಾರಂಗದ ಕೊಂಬು
* ನವಿಲು ಗರಿ
ಈ ಎಲ್ಲಾ ವಿಚಾರಗಳಲ್ಲಿಯೂ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅನ್ವಯ ಆರೋಪ ಸಾಬೀತಾದರೆ 3ರಿಂದ 7 ವರ್ಷಗಳ ಕಾಲ ಜೈಲು, 10 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶ ಇದೆ

Advertisement

Udayavani is now on Telegram. Click here to join our channel and stay updated with the latest news.

Next