ಹಾವೇರಿ: ಹಾನಗಲ್ಲ ತಾಲೂಕಿನ ಹಿರೇಬಾಸೂರ ಗ್ರಾಮದ 69 ಜನರಿಗೆ ಸಾಗುವಳಿ ಪಟ್ಟಾ ವಿತರಣೆ, ಹಾನಗಲ್ಲ ನಗರದ 88 ಜನರಿಗೆ ವಿವಿಧ ವಸತಿ ಯೋಜನೆಯಲ್ಲಿ ಮಂಜೂರಾದ ಮನೆ ನಿರ್ಮಾಣದ ಕಾರ್ಯಾದೇಶ ಪತ್ರ ವಿತರಣೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಂಕೇತಿಕವಾಗಿ ಗುರುತಿನಚೀಟಿ ವಿತರಣೆ ಕಾರ್ಯಕ್ರಮ ರವಿವಾರ ಹಾನಗಲ್ಲ ನಗರದ ಶ್ರೀ ಕುಮಾರೇಶ್ವರ ಮಠದ ವಿರಕ್ತಮಠದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ಬಹಳ ಕಡೆಗಳಲ್ಲಿ ಅರಣ್ಯ ಭೂಮಿ ಒತ್ತುವರಿ ಮೂಲಕ ಸಾಗುವಳಿ ಜಮೀನುಗಳಾಗುತ್ತಿವೆ. 1978ರ ಮೊದಲು ಅರಣ್ಯ ಸಾಗುವಳಿ ಮಾಡುತ್ತಿರುವ ಕುರಿತು ದಾಖಲೆ ಇರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ನಂತರದ ದಿನಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಹೀಗಾಗಿ 1978ರ ನಂತರದ ದಿನಗಳಲ್ಲಿ ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಹಾಗೂ ಇತರರಿಗೆ ತಿಳಿಸಬೇಕು ಎಂದರು.
ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ತಾಲೂಕಿನಲ್ಲಿ 17600 ಮನೆಗಳಿಗೆ ಅರ್ಜಿ ಬಂದಿದ್ದು, ರಾಜೀವ ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ಗೆ ಕಳುಹಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ದೊರಕಿಸುವ ನಿಟ್ಟಿನಲ್ಲಿ ಆಧಾರ್ ಲಿಂಕ್ ಮಾಡಲಾಗಿದೆ. ಆಧಾರ್ ಲಿಂಕ್ ನಿಂದ 1.50 ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗಿದೆ ಎಂದರು.
ಸಿಎಂ ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದ 74ದಿನಗಳಲ್ಲಿ ಹಾನಗಲ್ಲ ತಾಲೂಕಿಗೆ 506ಕೋಟಿ ರೂ.ಗಳ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತ ಮಂಜೂರಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ.ಉದಾಸಿ ಮಾತನಾಡಿ, 1978ರ ಮೊದಲು ಅರಣ್ಯ ಸಾಗುವಳಿ ಮಾಡುತ್ತಿದ್ದ ಅವರ ದಾಖಲೆ ಆಧರಿಸಿ ಹಕ್ಕು ಪತ್ರ ನೀಡಲಾಗುತ್ತಿದೆ. ಹಕ್ಕು ಪತ್ರ ನೀಡಲಾದ ಫಲಾನುಭವಿಗಳಿಗೆ ಒಂದು ವಾರದಲ್ಲಿ ಪಹಣಿ ಪತ್ರ ನೀಡುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ. ಇಂತಹ ಕಾರ್ಯಗಳಲ್ಲಿ ಮಧ್ಯವರ್ತಿಗಳ ಆಮಿಷಗಳಿಗೆ ಬಲಿಯಾಗಿ ಯಾರಿಗೂ ಹಣ ನೀಡಬೇಡಿ ಎಂದರು.
ತಾಲೂಕಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾಳಾದ ರಸ್ತೆ ಹಾಗೂ ಮೂಲ ಸೌಕರ್ಯ ಕಾಮಗಾರಿಗಳಿಗೆ 5.75 ಕೋಟಿ ರೂ. ಮಂಜೂರಾಗಿದೆ. ಎಸ್‌ಎಸ್ ಎಲ್‌ಸಿ ಪಾಸ್ ಅಥವಾ ಅನುತ್ತೀರ್ಣರಾದ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡುವ ಕಾಲೇಜ್‌ನ್ನು ಶೀಘ್ರದಲ್ಲಿ ತಾಲೂಕಿನಲ್ಲಿ ಆರಂಭಿಸಲಾಗುವುದು ಎಂದರು. ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಹಾನಗಲ್ಲ ಎಪಿಎಂಸಿ ಅಧ್ಯಕ್ಷ ಶೇಖಪ್ಪ ಮಹಾರಾಜಪೇಟ, ಉಪಾಧ್ಯಕ್ಷೆ ಸುಜಾತಾ ಪಸಾರದ, ತಹಶೀಲ್ದಾರ್ ಗಂಗಪ್ಪ ಎಂ., ಎಂ.ಬಿ. ಕಲಾಲ, ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪುರ ಹಾಗೂ ಇತರರಿದ್ದರು.