Advertisement

ಮಜಲು ದಾಟಿದರೂ ಅತಿಕ್ರಮಣದಾರರಿಗೆ ಸಿಗದ “ನ್ಯಾಯ’ :ಮೂರು ದಶಕಗಳಿಂದ ಅರಣ್ಯವಾಸಿಗಳ ಹೋರಾಟ

03:24 PM Sep 12, 2020 | Team Udayavani |

ಶಿರಸಿ: ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಅರಣ್ಯ ವಾಸಿಗಳ ಅರಣ್ಯ ಭೂಮಿ ಹಕ್ಕಿನ ಸಮಸ್ಯೆಗೆ ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ಮಾಡಿದರೂ ಫಲ ಸಿಕ್ಕಿಲ್ಲ. ಬೀದಿಗಿಳಿದು ಹಾಗೂ ಕಾನೂನು ಹೋರಾಟ ಮಾಡಿದರೂ ಈವರೆಗೂ ನ್ಯಾಯ ಸಿಕ್ಕಿಲ್ಲ.

Advertisement

ಕಳೆದ ಮೂವತ್ತು ವರ್ಷಗಳಿಂದ ನಡೆಯುತ್ತಲೇ ಇರುವ ಹೋರಾಟಕ್ಕೆ ಸೆ. 13ಕ್ಕೆ 30ನೇ ವರ್ಷ ತುಂಬುತ್ತಿದೆ. ಕಾಡು, ನಾಡಿನ ಸಾಂಘಿನ ಹೋರಾಟ ಬದುಕು ಬವಣೆಯ ನಡುವೆ ನಡೆಯುತ್ತಲೇ ಇದೆ.

ಓಟ್‌ ಬ್ಯಾಂಕ್‌ ಆಗಿ ಬಳಸಿಕೊಂಡ ಪಕ್ಷಗಳು ಇನ್ನೂ ಸಾಮಾಜಿಕ ನ್ಯಾಯ ಕೊಟ್ಟಿಲ್ಲ. ಎಲ್ಲ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಹಾಗೂ ನಿವೃತ್ತ ನ್ಯಾಯಾಧೀಶ ಎಚ್‌.ಎನ್‌. ನಾಗಮೋಹನದಾಸ್‌ ಮಾರ್ಗದರ್ಶನದಲ್ಲಿ ಹೋರಾಟಗಾರ ಎ. ರವೀಂದ್ರ ನಾಯ್ಕ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡುತ್ತಲೇ ಇದ್ದಾರೆ.

ಆದರೂ ಕ್ರಮಿಸಿದ ದೂರದಲ್ಲಿನ ಅನೇಕ ಮೈಲಿಗಲ್ಲುಗಳು ಆಳುವ ಸರಕಾರಕ್ಕೆ ಬಿಸಿ ಮುಟ್ಟಿಸಿವೆ. ಅಂಥ ಕಾವು ಜಿಲ್ಲೆಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂಥದ್ದು. ಸಾರ್ವಜನಿಕ ಹೋರಾಟಗಳಲ್ಲಿ ಬಹುಮುಖೀ ಚಳವಳಿಯಾಗಿ ಕೂಡ ಗುರುತಿಸಿಕೊಳ್ಳುವಂಥದ್ದಾಗಿದೆ.

ಯಾಕಿಷ್ಟು ಮಹತ್ವ?: ಅರಣ್ಯ ಭೂಮಿಯಲ್ಲಿ ವಾಸ್ತವ್ಯಕ್ಕೆ ಮನೆ ಕಟ್ಟಿಕೊಂಡ, ತುತ್ತು ಅನ್ನಕ್ಕೆ ಉಳುಮೆ ಮಾಡಿಕೊಂಡ ಜನರ ಬದುಕಿನ ಉಳಿವಿಗೆ ಇಷ್ಟೊಂದು ಹೋರಾಟ ಆಗತ್ಯವಿತ್ತೇ? ಇದ್ದರೂ ಆಳುವ ಸರಕಾರಗಳು ಯಾಕೆ ಮನಸ್ಸು ಮಾಡಿಲ್ಲ ಎಂಬುದು ಪ್ರಶ್ನೆ. ಜಿಲ್ಲೆಯ ಭೌಗೋಳಿಕ 10,571 ಚದರ್‌ ಕಿಲೋ ಮೀಟರ್‌ನಲ್ಲಿ 8,500 ಚದರ್‌ ಕಿಲೋ ಮೀಟರ್‌ ಅರಣ್ಯದಿಂದ ಆವೃತ್ತವಾಗಿರುವ ಜಿಲ್ಲೆಯು ಭೌಗೋಳಿಕ ಹಿನ್ನೆಲೆಯಲ್ಲಿ ವಾಸಿಸಿರುವ 14 ಲಕ್ಷ ಜನಸಂಖ್ಯೆಯ ಜನಜೀವನಕ್ಕೆ ಅರಣ್ಯ ಭೂಮಿಯ ವಾಸ್ತವ್ಯ ಹಾಗೂ ಸಾಗುವಳಿಗೆ ಅನಿವಾರ್ಯವಾಗಿದೆ.

Advertisement

ಇಂದು ಅರಣ್ಯ ಭೂಮಿ ಅರಣ್ಯ ವಾಸಿಗಳಿಗೆ ಪರ್ಯಾಯ ಜೀವನದ ವ್ಯವಸ್ಥೆಯ ಅಂಗವಾಗಿದೆ. ಈ ಕಾರಣಕ್ಕೆ ಕಾಡು ಹಾಗೂ ಬದುಕು ಎರಡೂ ವಿರುದ್ಧ ದಿಕ್ಕಾದ್ದರಿಂದಲೇ ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಅನಿವಾರ್ಯ ಮೂಡಿ ಬಂತು. 1991ರ ಸೆಪ್ಟೆಂಬರ್‌ 12 ಹೋರಾಟಕ್ಕೆ ನಾಂದಿ ಹಾಡಿದ ವೇದಿಕೆ ಇಂದು 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಸುಪ್ರೀಂ ಕೋರ್ಟ್‌ ತನಕ: ನಿರಂತರ 29 ವರ್ಷ ಹೋರಾಟದಲ್ಲಿ ಜಿಲ್ಲೆಯಲ್ಲಿರುವ ಅರಣ್ಯ ವಾಸಿಗಳಿಗೆ ಶೇ. 4ರಷ್ಟು ಅರಣ್ಯ ಹಕ್ಕು ಸಿಕ್ಕಿದೆ. ಇಂದಿನವೆರೆಗೆ ಜಿಲ್ಲೆಯಲ್ಲಿ 1978ರ ಪೂರ್ವದ ಅರಣ್ಯವಾಸಿಗೆ ಮಂಜೂರಿಗೆ ಕೇಂದ್ರ ಸರಕಾರ 2,531, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 2,807 ಒಟ್ಟು 5,338 ಹಕ್ಕುಪತ್ರ ಅರ್ಹತೆ ಪಡೆದಿದೆ. ಇನ್ನುಳಿದ 80 ಸಾವಿರಕ್ಕಿಂತ ಮಿಕ್ಕಿ ಅರಣ್ಯ ವಾಸಿಗಳಿಗೆ ನ್ಯಾಯ ಕೊಡಿಸಲು ನವ ದೆಹಲಿಯ ಸರ್ವೋತ್ಛ ನ್ಯಾಯಾಲಯ ಹಾಗೂ ಕರ್ನಾಟಕ ಉತ್ಛ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿಯ ರಿಟ್‌ಪಿಟೇಷನ್‌ ಹೋರಾಟಗಾರರ ವೇದಿಕೆ ದಾಖಲಿಸಿದೆ. ಇದು ಒಂದರ್ಥದಲ್ಲಿ ಅರಣ್ಯ ವಾಸಿಗಳ ನೈತಿಕ ಸ್ಥೆರ್ಯ ಹೆಚ್ಚಿಸಿದೆ.

ಹೋರಾಟವೇ ಬದುಕು: ಹೋರಾಟಕ್ಕೆ ಮಾದರಿ ರೀತಿಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ 5 ಬೃಹತ್‌ ಪ್ರಮಾಣದ ಪಾದಯಾತ್ರೆ, ಕಾರವಾರ ಚಲೋ, ಜೈಲ್‌ಬರೋ, ರ್ಯಾಲಿ, ಉರುಳುಸೇವೆ, ಸಮಾವೇಶ, ದೌರ್ಜನ್ಯ ವಿರುದ್ಧ ಅರಣ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ, ಮೇಲ್ಮನವಿ ಅಭಿಯಾನ, ಬೆಂಗಳೂರು ಚಲೋ, ಕಾನೂನು ಜಾಗೃತಿ ಕಾರ್ಯಕ್ರಮ, 5 ಲಕ್ಷ ಅರಣ್ಯ ಹಕ್ಕು ಕಾಯಿದೆಯ ಮುಖ್ಯಾಂಶದ ಕರಪತ್ರ ಪ್ರಕಟಣೆ ಒಂದೆರಡೇ ಅಲ್ಲ, ವಿವಿಧ ರೀತಿಯ ವಿಭಿನ್ನ ಹಾಗೂ ಪರಿಣಾಮಕಾರಿ ಹೋರಾಟ ನಡೆಸುತ್ತಲೇ ಇಂದಿಗೂ ವೇದಿಕೆ ಕ್ರಿಯಾಶೀಲವಾಗಿದೆ.

ಮುಂದೇನು?: ಹೋರಾಟ ನಿರಂತರವಾಗಿದ್ದರೂ ಸಿಗಬೇಕಾದ ನ್ಯಾಯ ಇನ್ನೂ ಸಿಕ್ಕಿಲ್ಲ. ಸ್ವಾತಂತ್ರಾÂ ಚಳವಳಿ ಬಳಿಕ ಇಷ್ಟೊಂದು ದೀರ್ಘ‌ ಕಾಲದ ಹೋರಾಟ ನಡೆದಿರಲಿಕ್ಕಿಲ್ಲ. ಎಲ್ಲ ಪಕ್ಷಗಳಿಗೂ ಅತಿಕ್ರಮಣದಾರರ ಅಜೆಂಡ ಆಗಿದ್ದರೂ ಈಡೇರಿಲ್ಲ. ಈ ವೇದಿಕೆ ಎಲ್ಲ ಪಕ್ಷಗಳಿಗೂ ಬಿಸಿ ಮುಟ್ಟಿಸುತ್ತ ಜನರ ಪರವಾಗಿ ನ್ಯಾಯ ಕೇಳುತ್ತಲೇ ಹೋರಾಟ ಮಾಡುತ್ತಿದೆ. ಈ ವೇದಿಕೆಯ ಮುಂದಿನ ಹೋರಾಟ ಏನು? ಸರಕಾರಗಳಿಗೆ ಯಾವ ರೀತಿ ಬಿಸಿ ತಲುಪಿಸುತ್ತದೆ. ಅರಣ್ಯ ರೋದನವಾಗಿರುವ ಕೂಗಿಗೆ ನ್ಯಾಯ ಕೊಡುವುದು ಹೇಗೆ? ಈ ಮಿಲಿಯನ್‌ ಡಾಲರ್‌ ಪ್ರಶ್ನೆ ಜೊತೆಗೆ ಮೂವತ್ತನೇ ಮೈಲಿಗಲ್ಲಿನ ಬಳಿ ಬಂದು ನಿಂತಿದೆ.

– ರಾಘವೇಂದ್ರ ಬೆಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next