Advertisement

Illegal resort, home stay; ಇಂದಿನಿಂದ ಪಶ್ಚಿಮಘಟ್ಟಗಳಲ್ಲಿ ಅರಣ್ಯ ಒತ್ತುವರಿ ತೆರವು

11:06 PM Aug 04, 2024 | Team Udayavani |

ಬೆಂಗಳೂರು: ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಇಂದಿನಿಂದಲೇ (ಸೋಮವಾರ) ನಡೆಯಲಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

Advertisement

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ರಾಜ್ಯದ 10 ಜಿಲ್ಲೆಗಳಲ್ಲಿ ಆವರಿಸಿರುವ ಪಶ್ಚಿಮಘಟ್ಟ ಸೇರಿದಂತೆ ಎಲ್ಲ ಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್‌, ಹೋಂ ಸ್ಟೇ ಮತ್ತು ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಪಶ್ಚಿಮಘಟ್ಟ ಸೇರಿ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ರಚಿಸಿರುವುದಾಗಿ ಘೋಷಿಸಿದ್ದಾರೆ.

ಘಟ್ಟ ಪ್ರದೇಶಗಳಲ್ಲಿನ ಅರಣ್ಯದಲ್ಲಿ 2015ರ ಅನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ಇಂದಿನಿಂದಲೇ ತೆರವು ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎಸಿಎಫ್, ಡಿಸಿಎಫ್, ಸಿಎಫ್, ಸಿಸಿಎಫ್, ಎ.ಪಿ.ಸಿಸಿಎಫ್ಗಳಿಗೂ ಅರಣ್ಯ ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಿ 64ಎ ಅಡಿಯಲ್ಲಿ ಆದೇಶ ನೀಡಲು ಅವಕಾಶವಿದ್ದು, ಬಾಕಿ ಇರುವ ಎಲ್ಲ 64ಎ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಎಸಿಎಫ್ ಮೇಲ್ಪಟ್ಟ ದರ್ಜೆಯ ಎಲ್ಲ ಅಧಿಕಾರಿಗಳಿಗೂ ವಾರದಲ್ಲಿ 2 ದಿನ ತಮ್ಮ ತಮ್ಮ ವಲಯದಲ್ಲಿ ಪ್ರಕ್ರಿಯೆ ನಡೆಸಿ ತ್ವರಿತವಾಗಿ ಆದೇಶ ನೀಡಲು ಸೂಚನೆ ನೀಡಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ಕಾರ್ಯಪಡೆಗೆ ಸೂಚಿಸಿದ್ದೇವೆ. ಮೊದಲಿಗೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಅಕ್ರಮ ರೆಸಾರ್ಟ್‌, ಹೋಂ ಸ್ಟೇಗಳನ್ನು ತೆರವು ಮಾಡಿ, ಬಳಿಕ ತೋಟ, ಕಟ್ಟಡಗಳನ್ನು ತೆರವು ಮಾಡಲು ಸೂಚಿಸಲಾಗಿದೆ ಎಂದಿದ್ದಾರೆ.

Advertisement

ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸದು
ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಸ್ತೆಗಳ ಮೇಲ್ದರ್ಜೆ, ವಿಸ್ತರಣೆಯ ವೇಳೆ ಅವೈಜ್ಞಾನಿಕವಾಗಿ 90 ಡಿಗ್ರಿಗೆ ಗುಡ್ಡ ಕಡಿದಿರುವುದೂ ಕುಸಿತಕ್ಕೆ ಕಾರಣವಾಗಿದ್ದು, ಇಂತಹ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೂ ನೋಟಿಸ್‌ ನೀಡಿ ಕ್ರಮ ಜರಗಿಸಲು ನಿರ್ದೇಶಿಸಲಾಗಿದೆ. ವಯನಾಡ್‌ ಮತ್ತು ಉತ್ತರ ಕನ್ನಡದ ಶಿರೂರಿನಲ್ಲಿ ಘೋರ ದುರಂತ ಸಂಭವಿಸಿದ್ದು ಜೀವಹಾನಿ ಆಗಿದೆ. ಸಹಸ್ರಾರು ವರ್ಷಗಳ ಗುಡ್ಡವೇ ಕಣ್ಮರೆಯಾಗಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಖಂಡ್ರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next