Advertisement

ಕಾಡಾನೆ ದಾಳಿ: ರೈತನಿಗೆ ಗಾಯ, ಅಡಕೆ, ಬಾಳೆ ಬೆಳೆ ನಷ್ಟ

12:01 PM Jul 20, 2018 | |

ಸಕಲೇಶಪುರ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಗಾಯಗೊಂಡು, ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಅಗನಿ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಹಾನುಬಾಳ್‌ ಹೋಬಳಿಯ ಗ್ರಾಮದಲ್ಲಿ ಬುಧವಾರ ಸಂಜೆ ಕಾಣಿಸಿಕೊಂಡ ಕಾಡಾನೆ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್‌ ಅವರನ್ನು ಸೊಂಡಿಲಿನಿಂದ ಎಸೆದು ಗಾಯಗೊಳಿಸಿದೆ. ಈ ವೇಳೆ ಅಕ್ಕಪಕ್ಕದವರು ಜೋರಾಗಿ ಕೂಗಿಕೊಂಡಿದ್ದರಿಂದ ಕಾಡಾನೆ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ಶಿವರಾಜ್‌ಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ. 

ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ: ಶಿವರಾಜ್‌ ಅವರ ತೋಟ ಸೇರಿದಂತೆ ಗ್ರಾಮದ ಅಗನಿ ದೇವರಾಜ್‌ ಅವರ ಮನೆ ಕಾಡಾನೆ ದಾಳಿಯಿಂದ ಹಾನಿ ಗೀಡಾಗಿದೆ. ಕಾಫಿ, ಅಡಕೆ, ಬಾಳೆ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಹಾನುಬಾಳ್‌ ವ್ಯಾಪ್ತಿಯ ಅಚ್ಚನಹಳ್ಳಿ, ಅಗನಿ, ಬಿಳಿಸಾರೆ ಪ್ರದೇಶದಲ್ಲಿ ಕಾಡಾನೆಗಳ ಹಿಂಡೊಂದು ನೆಲೆಸಿದೆ. ಆಹಾರಕ್ಕಾಗಿ ಆಗಾಗ ದಾಂಧಲೆ ಮಾಡುತ್ತಲೇ ಇದೆ. ಜೊತೆಗೆ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲೂ ಆನೆಗಳ ದಾಳಿಯಿಂದ ಹಲವರ ಭತ್ತದ ಗದ್ದೆಗಳಲ್ಲಿ ಸಸಿ ಮಡಿಗಳನ್ನು ನಾಶ ಮಾಡಿದೆ. ಜೊತೆಗೆ ಕಾಫಿ ಮತ್ತು ಏಲಕ್ಕಿ ತೋಟಗಳಲ್ಲಿಯೂ ದಾಂಧಲೆ ನಡೆಸಿದೆ.

ಮಿತಿಮೀರಿದ ಮಳೆಯಿಂದಾಗಿ ರೈತರು ಒಂದು ಕಡೆ ಬೆಳೆ ನಷ್ಟ ಅನುಭವಿಸುತ್ತಿದ್ದರೆ, ಇದರ ಜೊತೆಗೆ ಕಾಡಾನೆಗಳ ಹಾವಳಿಯಿಂದ ಬೆಳೆನಾಶ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೂಡಲೇ ಸರ್ಕಾರ ಕಾಡಾನೆ ಹಾವಾಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಪರಿಹಾರ ವನ್ನೂ ಒದಗಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next