ಹುಣಸೂರು: ತಾಲೂಕಿನ ಗುರುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಕಂಗಾಲಾಗಿದ್ದಾರೆ. ಕೊಡಗು ಕಾಲೋನಿಯಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ರಾಗಿ, ಜೋಳ, ಬಾಳೆ ಬೆಳೆ ಧ್ವಂಸವಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನಲ್ಲಿ ಗುರುಪುರ, ಮಾಜಿಗುರುಪುರ, ಸರ್ವೆ ನಂ.25, ಹುಣಸೇಕಟ್ಟೆ, ಹೊಸೂರು, ಕಾಳೆನಹಳ್ಳಿ, ಕೊಡಗು ಕಾಲೋನಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿದಿನ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರನ್ನು ಹೈರಾಣಾಗಿಸಿವೆ.
ಎಲ್ಲೆಲ್ಲಿ ಹಾನಿ?: ಸೋಮವಾರ ಹಾಗೂ ಮಂಗಳವಾರ ರಾತ್ರಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿರುವ ಕಾಡಾನೆ ಗಳ ಹಿಂಡು ಕಾಳೇನಹಳ್ಳಿಯ ಸಾದಿಕ್ ಅವರಿಗೆ ಸೇರಿದ ಎರಡು ಎಕರೆ ಬಾಳೆ ಹಾಗೂ ಹೊಸೂರು ಕೊಡಗು ಕಾಲೋನಿಯ ದೊಡ್ಡಬೋಜಣ್ಣ ಮತ್ತಿತರರಿಗೆ ಸೇರಿದ 5 ಎಕರೆಯಷ್ಟು ಕೊಯ್ಲು ಮಾಡಿ ಗುಡ್ಡೆ ಹಾಕಿದ್ದ ರಾಗಿ ಮೆದೆಯನ್ನು ತಿಂದು-ತುಳಿದು, ಚೆಲ್ಲಾಡಿ ನಾಶಪಡಿಸಿವೆ.
ಪ್ರತಿಭಟನೆ ಎಚ್ಚರಿಕೆ: ಗುರುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ ಯಿಂದ ಅಪಾರ ಬೆಳೆ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಪರಿಹಾರ ನೀಡಲು ಸತಾಯಿಸುತ್ತಾರೆ. ಈ ಭಾಗದಲ್ಲಿ ರೈಲ್ವೆ ಹಳಿ ಬೇಲಿ ನಿರ್ಮಾಣವಾಗಿಲ್ಲ. ಅರಣ್ಯದಂಚಿನಲ್ಲಿ ನಿರ್ಮಿಸಿರುವ ಆನೆ ಕಂದಕಗಳು ನಿರ್ವಹಣೆ ಇಲ್ಲದ ಕಾರಣ ಆನೆಗಳು ಸರಾಗವಾಗಿ ದಾಟಿ ಬರುತ್ತಿವೆ. ಆದರೂ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ತಲೆಕೆಡಿಸಿ ಕೊಂಡಿಲ್ಲ. ಅರಣ್ಯ ಇಲಾಖೆ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮವಹಿಸುತ್ತಿಲ್ಲ. ರಾತ್ರಿವೇಳೆ ಕಾವಲು ಕಾಯುತ್ತಿಲ್ಲ. ಇನ್ನೊಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಈ ಭಾಗದ ರೈತರು ಎಚ್ಚರಿಕೆ ನೀಡಿದ್ದಾರೆ.