ಚನ್ನಪಟ್ಟಣ: ಪರಿಸರದ ಉಳಿವಿಗಾಗಿ ಬರಡಾಗುತ್ತಿರುವ ಭೂಮಿಗಾಗಿ ತಮ್ಮ ಮನೆಗಳ ಅಂಗಳದಲ್ಲಿ ಹಾಗೂ ರಸ್ತೆಯಲ್ಲಿ ಸಸಿಗಳನ್ನು ಬೆಳೆಸಲು ಯುವ ಸಮುದಾಯ ಮುಂದಾಗಬೇಕು ಎಂದು ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಾಧ್ಯಕ್ಷ ಮುಕುಂದರಾವ್ ಲೋಕುಂಡೆ ಸಲಹೆ ನೀಡಿದರು.
ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ಅರಣ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬರಡು ಪ್ರದೇಶದಲ್ಲಿ ಅರಣ್ಯೀಕರಣದ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ರಕ್ಷಣೆಗಾಗಿ ಮುಂದಾಗಿ: ತಾಲೂಕಿನಲ್ಲಿ ಪ್ರತಿ ತಿಂಗಳು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಹಾಗೂ ಅರಣ್ಯ ತಜ್ಞರಿಂದ ಪ್ರತಿ ತಿಂಗಳು 3ನೇ ಶನಿವಾರದಂದು ಕಾರ್ಯಕ್ರಮ ನಡೆಸುತ್ತಿದ್ದು, ವಿದ್ಯಾರ್ಥಿಗಳು ಅರಣ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳುವ ಜತೆಯಲ್ಲಿ ಇಂತಹ ಕಾರ್ಯಾಗಾರವನ್ನು ಬಳಸಿಕೊಂಡು ಅರಣ್ಯದ ರಕ್ಷಣೆಗಾಗಿ ಮುಂದಾಗಬೇಕು ಎಂದು ಹೇಳಿದರು.
ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ವಿ.ದೇವರಾಜು ಮಾತನಾಡಿ, ಪ್ರತಿನಿತ್ಯ ಮಕ್ಕಳೊಡನೆ ಬೆರೆತು ಅರಣ್ಯ ಬೆಳೆಸುವಲ್ಲಿ ಸರ್ವರೂ ಮುಂದಾಗಬೇಕು ಎಂದು ತಿಳಿಸಿದ ಅವರು, ಬುಟ್ಟಿಯಿಂದ ಬೆಟ್ಟಕ್ಕೆ ಯೋಜನೆಯಿಂದ ಅರಣ್ಯ ಧಾಮಕ್ಕೆ ಭೇಟಿ ನೀಡುತ್ತಿದ್ದ ಹಾಗೂ ಕೆಲವೊಂದು ಸೇವೆಯನ್ನು ಸ್ಮರಿಸಬೇಕಾಗಿದೆ ಎಂದರು. ನ್ಯೂ
ಹಾರಿಜನ್ ಶಾಲೆಯ ಮಕ್ಕಳು, ಶಿಕ್ಷಕರು, ಬಾಲು ಪಬ್ಲಿಕ್ ಶಾಲೆಯ ವಿ.ಬಾಲಸುಬ್ರಮಣ್ಯಂ, ಒಂದು ಭೂಮಿ ಫೌಂಡೇಷನ್ ಸ್ಥಾಪಕ ನವನೀತ್ ಹಾಜರಿದ್ದರು.