ಭಟ್ಕಳ: ಅರಣ್ಯಭೂಮಿ ಹಕ್ಕು ಪಡೆಯಲು ಪ್ರತಿಯೊಬ್ಬ ಅರಣ್ಯ ಭೂಮಿ ಅವಲಂಬಿತರೂ ಸಂವಿಧಾನ ಬದ್ಧವಾಗಿ ಹಕ್ಕನ್ನು ಪಡೆದಿರುತ್ತಾರೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಹೇಳಿದರು.
ಅವರು ಭಟ್ಕಳದ ಸತ್ಕಾರ್ ಹೋಟೇಲ್ನಲ್ಲಿ ಅರಣ್ಯ ಭೂಮಿ ಹೋರಾಟಗಾರರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಅರಣ್ಯವಾಸಿಗಳು ಅರಣ್ಯಭೂಮಿ ಹಕ್ಕನ್ನು ಪಡೆದುಕೊಳ್ಳುವುದು ಅನಿವಾರ್ಯ. ಕಂದಾಯ ಭೂಮಿ ಪ್ರಮಾಣ ಕಡಿಮೆ ಇರುವುದರಿಂದ ಜಿಲ್ಲೆಯ ಜನತೆ ತಲ ತಲಾಂತರದಿಂದ ಅರಣ್ಯವಾಸಿಗಳು, ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿಗೆ ಅವಲಂಬಿತವಾಗಿರುವುದು ಅನಿವಾರ್ಯ ಎಂದು ಹೇಳಿದ ಅವರು, 28 ವರ್ಷಗಳ ಸಾಂಘಿಕ ಹೋರಾಟದೊಂದಿಗೆ ಮುಂಬರುವ ದಿನಗಳಲ್ಲಿ ಪರಿಣಾಮಕಾರಿ ಕಾನೂನಾತ್ಮಕ ಹೋರಾಟಕ್ಕೆ ಹೋರಾಟಗಾರರ ವೇದಿಕೆಯು ದಿಟ್ಟ ಹೆಜ್ಜೆಯನ್ನಿಡುತ್ತದೆ ಎಂದು ಹೇಳಿದರು.
ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಭಟ್ಕಳ ತಾಲೂಕಿನಲ್ಲಿ 8819 ಅರ್ಜಿಗಳು ಬಂದಿದ್ದು 6961 ಅರ್ಜಿಗಳು ತಿರಸ್ಕಾರವಾಗಿದ್ದು ಕೇವಲ 217 ಜನರಿಗೆ ಮಾತ್ರ ಹಕ್ಕುಪತ್ರ ದೊರಕಿದೆ. ಅರಣ್ಯವಾಸಿಗಳಿಗೆ ನೇರವಾಗಿ ಸುಲಭದಲ್ಲಿ ಸಂಪರ್ಕ, ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಹೋರಾಟ ವೇದಿಕೆ ಕಚೇರಿಯನ್ನು ಪ್ರಾರಂಭಿಸಿದ್ದು ಅರಣ್ಯವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಸಂಘಟನೆಗೆ ಶಕ್ತಿ ಕೊಡುವ ದಿಶೆಯಲ್ಲಿ ಎಲ್ಲಾ ಅರಣ್ಯ ಅತಿಕ್ರಮಣದಾರರು ಹೋರಾಟಕ್ಕೆ ಬೆಂಬಲಿಸಬೇಕು. ತಾಲೂಕಿನಾದ್ಯಂತ ಹೋರಾಟ ಸಮಿತಿಗಳನ್ನು ರಚನಾತ್ಮಕ ಮತ್ತು ಕ್ರಿಯಾತ್ಮಕವಾಗಿ ಸಂಘಟಿಸಿ ಬಲಗೊಳಿಸಲು ನಿರ್ಧರಿಸಲಾಗಿದೆ ಎಂದರು.