ಗಂಗಾವತಿ : ತಾಲ್ಲೂಕಿನ ಆನೆಗೊಂದಿ ಭಾಗದ ರೈತರು ಪದೇಪದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗಾಗಿ ಸುಮಾರು 62 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರ ನಿರ್ಧರಿಸಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಸಾಣಾಪುರದ ಸರ್ವೆ ನಂ 1 ಹಾಗೂ ಹನುಮನಹಳ್ಳಿ ಗ್ರಾಮದ ಸರ್ವೆ ನಂ 20 ರಲ್ಲಿ ನೂರಾರು ಎಕರೆ ಅರಣ್ಯ ಭೂಮಿಯನ್ನು ರೈತರು ಒತ್ತುವರಿ ಮಾಡಿಕೊಂಡಿದ್ದು ಕಂದಾಯ ಇಲಾಖೆಯ ಪಹಣಿ ಎದೆ ಅರಣ್ಯ ಇಲಾಖೆಯ ಮೀಸಲು ಭೂಮಿ ಎಂದು ಇರುವುದರಿಂದ ಕೂಡಲೇ ರೈತರು ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಸುಮಾರು ನೂರಕ್ಕೂ ಹೆಚ್ಚು ರೈತರಿಗೆ ನೋಟಿಸ್ ಜಾರಿ ಮಾಡಿದೆ.
ಇದರಿಂದ ಆನೆಗೊಂದಿ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ 60-70 ದಶಕದಿಂದಲೂ ಆನೆಗೊಂದಿ ಭಾಗದಲ್ಲಿ ರೈತರು ಭೂಮಿಯನ್ನು ಉಳುಮೆ ಮಾಡಿ ಬದುಕು ನಡೆಸುತ್ತಿದ್ದಾರೆ ಇದರಲ್ಲಿ ಕೆಲವರಿಗೆ 1973 ಮತ್ತು 2003-04 ರಲ್ಲಿ ಕಂದಾಯ ಇಲಾಖೆ ಸಾಗುವಳಿ ಚೀಟಿ ನೀಡಿದ್ದು ಇದರಿಂದ ರೈತರು ಬ್ಯಾಂಕುಗಳು ಸೇರಿದಂತೆ ಆತ ಸಂಸ್ಥೆಯಲ್ಲಿ ಭೂಮಿಯನ್ನು ಅಡವಿಟ್ಟು ಕೃಷಿ ಮಾಡುತ್ತಿದ್ದಾರೆ.
2008-09 ವರೆಗೂ ರೈತರ ರಲ್ಲಿ ಪಹಣಿಗಳಿದ್ದು ನಂತರ ಅರಣ್ಯ ಭೂಮಿ ಸರಕಾರಿ ಭೂಮಿ ಎಂದು ಪಹಣಿಯಲ್ಲಿ ತಿದ್ದುಪಡಿಯಾಗಿವೆ .ಆನೆಗೊಂದಿ ಭಾಗದಲ್ಲಿ ಕೃಷಿ ಉಳಿದ ಮಾಡಲು ಕೇವಲ 10 ಸಾವಿರ ಎಕರೆ ಕೃಷಿ ಭೂಮಿ ಇದ್ದು ಉಳಿದ ಸಾವಿರಾರು ಎಕರೆ ಭೂಮಿಯಲ್ಲಿ ಬೆಟ್ಟಗುಡ್ಡಗಳಿವೆ. ಇದರಿಂದ ಈ ಭಾಗದಲ್ಲಿ ಕೃಷಿ ಭೂಮಿ ಕಡಿಮೆ ಇದ್ದು ಅರಣ್ಯ ಇಲಾಖೆ ಕಂದಾಯ ಇಲಾಖೆಯವರು ಕೂಡಲೇ ರೈತರಿಗೆ ಅಧಿಕೃತವಾಗಿ ಪಟ್ಟ ಪಹಣಿ ವಿತರಣೆ ಮಾಡುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತೆರವಿಗೆ ಸೂಚನೆ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಸಾಗುವಳಿ ಮಾಡುವ ರೈತರಿಗೆ ನೋಟಿಸ್ ನೀಡಿ ಕೂಡಲೇ ಅರಣ್ಯ ಭೂಮಿಯನ್ನು ತೆರವು ಮಾಡಿಸುವಂತೆ ಸೂಚನೆ ನೀಡಿದ್ದರಿಂದ ನ್ಯಾಯಾಲಯದ ಆದೇಶವನ್ನು ಪಾಲಿಸಿ ಅರಣ್ಯ ಒತ್ತುವರಿ ಮಾಡಿದ ರೈತರಿಗೆ ನೋಟಿಸ್ ನೀಡಲಾಗಿದೆ ಸಾಣಾಪುರ ಹನುಮನ ಹಿನ್ನಲೆಯಲ್ಲಿ ಅರಣ್ಯ ಭೂಮಿಯನ್ನು ರೈತರು ಒತ್ತುವರಿ ಮಾಡಿ ಕಳೆದ ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ ಇದರಿಂದ ಅರಣ್ಯದ ವಿಸ್ತೀರ್ಣ ಕಡಿಮೆಯಾಗಿದ್ದು ಕೂಡಲೇ ರೈತರು ಒತ್ತುವರಿ ತೆರವು ಮಾಡಿ ಅರಣ್ಯ ಇಲಾಖೆ ಸಹಕರಿಸುವಂತೆ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ ಮೇಟಿ ಉದಯವಾಣಿಗೆ ತಿಳಿಸಿದ್ದಾರೆ .
ಸರ್ಕಾರ ನೆರವಿಗೆ ಬರಬೇಕು: ಕಳೆದ ಹಲವು ದಶಕಗಳಿಂದ ಹನುಮನಹಳ್ಳಿ ಸಣಾಪುರ ಭಾಗದಲ್ಲಿ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು ಸಾಗುವಳಿ ಚೀಟಿ ನೀಡಲು ಸರ್ಕಾರ ವಿಸ್ತರಿಸಿದೆ. ಈಗ ಅರಣ್ಯ ಇಲಾಖೆಯವರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದು ಕೂಡಲೇ ತೆರವು ಮಾಡಿಸುವಂತೆ ಅರಣ್ಯ ಸಂರಕ್ಷಣಾ ನ್ಯಾಯಾಲಯದ ಮೂಲಕ ನೋಟಿಸ್ ಜಾರಿ ಮಾಡಿದ್ದು ರಾಜ್ಯ ಸರಕಾರ ಮತ್ತು ಕಂದಾಯ ಇಲಾಖೆ ರೈತರ ನೆರವಿಗೆ ಬರಬೇಕಿದೆ. ರೈತರಿಗೆ ಸಾಗುವಳಿ ಚೀಟಿಯನ್ನು ವಿತರಣೆ ಮಾಡಿದ್ದು ಈಗ ಒಕ್ಕಲೆಬ್ಬಿಸಿದರೆ ರೈತರ ಬದುಕು ಮೂರಾಬಟ್ಟೆಯಾಗುತ್ತದೆ. ದಯವಿಟ್ಟು ಸರ್ಕಾರ ರೈತ ನೆರವಿಗೆ ಬರುವಂತೆ ಹನುಮನಹಳ್ಳಿ ಸಣಾಪುರ ಜಂಗ್ಲಿ ಭಾಗದ ರೈತರಾದ ಸಣ್ಣಲಿಂಗಪ್ಪ, ತಮ್ಮಣ್ಣ, ಕಾಶೀಮಲಿ, ನಾಗರಾಜು ಕೋರಿ ಮನವಿ ಮಾಡಿದ್ದಾರೆ.